ಕನ್ನಡ ವಾರ್ತೆಗಳು

ಆಟೋ ರಿಕ್ಷಾ : ಪರಿಷ್ಕರಣೆ ದರ ಶೀಘ್ರದಲ್ಲೇ ನಿರ್ಧಾರ : ಜಿಲ್ಲಾಧಿಕಾರಿ

Pinterest LinkedIn Tumblr

Rta_press_meet_1

ಮಂಗಳೂರು,ಫೆ.20  : ಸದ್ಯಕ್ಕೆ ರಿಕ್ಷಾ ಬಾಡಿಗೆ ದರವು ಹಾಲಿ ಆದೇಶದಂತೆ ಕನಿಷ್ಠ 20 ರೂ. ಹಾಗೂ ಅದರ ನಂತರ ಪ್ರತಿ ಕಿ.ಮೀಟರ್‌ಗೆ 13 ರೂ.ಗಳಾಗಿದ್ದು, ಶೀಘ್ರದಲ್ಲಿ ಹೊಸ ಆದೇಶ ನೀಡಲಾಗುವುದು ಎಂದು ಮಂಗಳೂರು ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಿಕ್ಷಾ ದರ ಪರಿಷ್ಕರಣೆಯ ಕುರಿತು ಗುರುವಾರ ನಡೆದ ಆರ್‌ಟಿಎ ಸಭೆಯಲ್ಲಿ ರಿಕ್ಷಾ ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

Rta_press_meet_2 Rta_press_meet_3 Rta_press_meet_4 Rta_press_meet_5

ಸುಮಾರು ಒಂದುವರೆ ಗಂಟೆ ಕಾಲ ಸಭೆ ನಡೆಸಲಾಗಿದೆ. ರಿಕ್ಷಾದವರ ಬೇಡಿಕೆ, ಸುಖ- ಕಷ್ಟಗಳನ್ನು ಕೇಳಿದ್ದೇವೆ. ಕನಿಷ್ಠ 25 ರೂ. ನಿಗದಿಪಡಿಸಬೇಕು ಎಂಬ ಬೇಡಿಕೆ ಬಂದಿದೆ. ಒಟ್ಟು ಅಭಿಪ್ರಾಯಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಸಾರಿಗೆ ಪ್ರಾಧಿಕಾರ ನಿರ್ಧಾರ ಕೈಗೊಳ್ಳಲಿದೆ . ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಹಿತ ರಕ್ಷಣೆ ಮಾಡುವುದು ಆದ್ಯ ಕರ್ತವ್ಯ. ಆದರೆ ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ನಡೆಸಿ ಪರಿಷ್ಕರಣೆ ಮಾಡುತ್ತೇವೆ. ಹೊಸ ಪರ್ಮಿಟ್ ನೀಡುವ ಕುರಿತು ಹಂತ, ಹಂತವಾಗಿ ಪರಿಶೀಲಿಸಲಾಗುವುದು. ಹೊಸ ಅದೇಶ ಬರುವ ವರೆಗೆ ಹಾಲಿ ಇರುವ ಆದೇಶದಂತೆ ಕನಿಷ್ಟ 20 ರೂ. ಹಾಗೂ ಮುಂದಿನ ಪ್ರತೀ ಮೀಟರ್‌ಗೆ 13ರೂ.ಗಳೇ ಜಾರಿಯಲ್ಲಿರುತ್ತದೆ ಎಂದರು.

ಸಾರ್ವಜನಿಕರು ರಿಕ್ಷಾದ ಬಗ್ಗೆ ದೂರುಗಳಿದ್ದರೆ ಜಿಲ್ಲಾಡಳಿತಕ್ಕೆ ಎಸ್‌ಎಂಎಸ್ ಮೂಲಕ ದೂರು ನೀಡುವ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ಟೋಲ್ ಫ್ರೀ ನಂಬರ್‌ನ್ನು ಅಳವಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Rta_press_meet_6 Rta_press_meet_7 Rta_press_meet_9 Rta_press_meet_10a Rta_press_meet_8a

ಹಳೆ ದರ ಜಾರಿಗೊಳಿಸಿ: ಕೇವಲ ಪೆಟ್ರೋಲ್ ದರ ಇಳಿಕೆಯನ್ನು ಮಾನದಂಡ ಮಾಡಿ ರಿಕ್ಷಾ ಚಾಲಕರ ಮೇಲೆ ಪ್ರಹಾರ ಮಾಡಲು ಮುಂದಾಗುವುದು ಸರಿಯಲ್ಲ. ಯಾವ ಜಿಲ್ಲೆಯಲ್ಲಿಯೂ ಬೆಲೆ ಕಡಿಮೆ ಮಾಡಿದ ಇತಿಹಾಸ ಇಲ್ಲ. ಮಂಗಳೂರಿನಲ್ಲಿ ಜೀವನವೇ ದುಬಾರಿ. ಇಲ್ಲಿ ಬಸ್ ದರ, ಹೋಟೆಲ್ ದರ, ಆಸ್ಪತ್ರೆ ದರದ ಬಗ್ಗೆ ಯಾರೂ ಮಾತನಾಡುವುದಿಲ್ಲ. ದಿನದಲ್ಲಿ 13 ಗಂಟೆ ದುಡಿಯುತ್ತೇವೆ. ಅದಕ್ಕೆ ನಮಗೆ ಸಿಗುವುದು 200 ರೂ. ಮಾತ್ರ. ಇಷ್ಟು ಸಮಯಕ್ಕೆ ಇಷ್ಟು ಸಂಬಳ ಸಾಕೇ ಎಂಬ ಅಭಿಪ್ರಾಯಗಳನ್ನು ರಿಕ್ಷಾದವರ ಪರವಾಗಿ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ನೂಯಿ ಬಾಲಕೃಷ್ಣ , ವಿಕ್ಟರ್, ಅರುಣ್ ಕುಮಾರ್, ಯಾದವ, ಅಲಿ ಹಸನ್ ಸೇರಿದಂತೆ ರಿಕ್ಷಾ ಚಾಲಕರು ಮಂಡಿಸಿದರು. ಮೂರು ದಿನ ರಿಕ್ಷಾ ಚಾಲಕರು ನಡೆಸಿದ ಮುಷ್ಕರಕ್ಕೆ ರಿಕ್ಷಾ ಚಾಲಕರು ಕ್ಷಮೆ ಯಾಚಿಸಿದರು.

ರಿಕ್ಷಾ ಚಾಲಕರು ಸಹಕಾರ ನೀಡಬೇಕು:
ಜಿಲ್ಲಾಡಳಿತ ಪೆಟ್ರೋಲ್ ದರ ಇಳಿಕೆಯ ಹಿನ್ನೆಲೆಯಲ್ಲಿ ಕನಿಷ್ಟ 20ರೂ.ಗಳನ್ನು ನಿಗದಿಪಡಿಸಿದ್ದು, ಅದನ್ನೇ ಮುಂದುವರಿಸಬೇಕು. ಹಿಂದೆ ದರ ಏರಿಕೆ ಮಾಡುವ ಸಂದರ್ಭ 23ರ ಬದಲು 25ರೂ.ಗಳನ್ನು ಮಾಡಲಾಗಿದೆ. ಇದೀಗ 3ರೂ. ಇಳಿಕೆ ಮಾಡಿದಂತಾಗಿದೆ. ಪೆಟ್ರೋಲ್ ದರ ಇಳಿಕೆಯಾದಾಗ ಅದರ ಪ್ರಯೋಜನ ಸಾರ್ವಜನಿಕರಿಗೂ ಸಿಗುವಂತಾಗಬೇಕು. ಇದಕ್ಕೆ ರಿಕ್ಷಾ ಚಾಲಕರು ಸಹಕಾರ ನೀಡಬೇಕು. ರಿಕ್ಷಾವನ್ನು ಹೆಚ್ಚು ಬಳಸುವವರು ಮಹಿಳೆಯರು. ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಭೆಯಲ್ಲಿ ಭಾಗವಹಿಸುವ ಅಗತ್ಯವಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಮಂಗಳೂರಿನಲ್ಲಿ ರಿಕ್ಷಾ ದರ ದುಬಾರಿ. ಇದನ್ನು ಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ನೀಡಿದ ಆದೇಶದಲ್ಲಿ ಬದಲಾವಣೆ ಮಾಡಬಾರದು ಎಂದು ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತರಾದ ಹನುಮಂತ ಕಾಮತ್, ಅಶೋಕ್, ಅಲೆಕ್ಸಾಂಡರ್, ಇಸ್ಮಾಯಿಲ್ ಎನ್., ಬಿ. ಎಸ್ ಹಸನಬ್ಬ ಮಾತನಾಡಿದರು.

ಫಾರಂ ಫಾರ್ ಜಸ್ಟಿಸ್ ಅಧ್ಯಕ್ಷ ದಯಾನಾಥ್ ಕೋಟ್ಯಾನ್ ಮಾತನಾಡಿ, ನಮ್ಮಲ್ಲಿ ಕನಿಷ್ಟ 15ರೂ.ಗಳಿಗೆ ರಿಕ್ಷಾ ಓಡಿಸುವವರು ಇದ್ದಾರೆ. ಹೊಸ ಪರ್ಮಿಟ್ ನೀಡಿ. ಇಲ್ಲವಾದರೆ ಕನಿಷ್ಟ 20ರೂ. ಹಾಗೂ ಮುಂದಿನ ಪ್ರತೀ ಕಿಮೀಗೆ 14 ರೂ. ನೀಡಿ ಎಂದು ಜಿಲ್ಲಾಧಿಕಾರಿಯನ್ನು ಕೋರಿದರು. ಇದಕ್ಕೆ ರಿಕ್ಷಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾ ಎಸ್ಪಿ ಡಾ. ಶರಣಪ್ಪ, ಎಆರ್‌ಟಿಒ ಶ್ರೀಧರ ನಾಯಕ್ ಉಪಸ್ಥಿತರಿದ್ದರು.

Write A Comment