ಕನ್ನಡ ವಾರ್ತೆಗಳು

ಟಾಲಿವುಡ್ ಹೀರೋಗಳ ಲಕ್ಕಿ ಸ್ಟಾರ್, ಖ್ಯಾತ ನಟ ಚಂದ್ರಮೋಹನ್ ಅವರಿಗೆ ಹೃದಯಾಘಾತ

Pinterest LinkedIn Tumblr

tollywood_chandra_mohan

ಹೈದಾರ್ ಬಾದ್,ಫೆ.19 : ದಕ್ಷಿಣದ ಹೆಸರಾಂತ ನಟ ಚಂದ್ರ ಮೋಹನ್ ಅವರು ಗುರುವಾರ ಹೃದಯಾಘಾತಕ್ಕೆ ಒಳಗಾಗಿ ಕೂಡಲೇ ಅವರ ಕುಟುಂಬಿಕರು ಅವರನ್ನು ಹೈದರಾಬಾದ್ ಜೂಬ್ಲಿ ಹಿಲ್ಸ್ ನ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಂದ್ರ ಮೋಹನ್ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸದ್ಯಕ್ಕೆ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತೆಲುಗು, ತಮಿಳು ಚಿತ್ರಗಳಲ್ಲಿ ಪೋಷಕನಟರಾಗಿ ಗುರುತಿಸಿಕೊಂಡಿರುವ ಚಂದ್ರ ಮೋಹನ್ ಅವರ ಪೂರ್ಣ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ ರಾವ್. 1966ರಲ್ಲಿ ‘ರಂಗುಲ ರಾಟ್ನಂ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ಚಂದ್ರ ಮೋಹನ್ ಅವರು ಸಹ ನಟ, ನಾಯಕನಟ, ಪೋಷಕ ನಟ ಹಾಗೂ ಹಾಸ್ಯನಟನಾಗಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದ್ದಾರೆ. ಮುಖ್ಯವಾಗಿ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡವರು.

ಚಂದ್ರ ಮೋಹನ್ ಅವರು ಟಾಲಿವುಡ್ ನ ಹೊಸ ಹೀರೋಗಳಿಗೆ ಲಕ್ಕಿ ಸ್ಟಾರ್ ಇದ್ದಂತೆ ಎಂಬ ಮಾತು ಚಾಲ್ತಿಯಲ್ಲಿದೆ. ಜಯಪ್ರದಾ, ಶ್ರೀದೇವಿ ಜೊತೆಗೂ ಅಭಿನಯಿಸಿದ್ದಾರೆ. ಮಾಲಾಶ್ರೀ ಜೊತೆಗಿನ ಚಿತ್ರದಲ್ಲಿ ಕನ್ನಡದಲ್ಲೂ ಪೋಷಕ ಪಾತ್ರದಲ್ಲಿ ಚಂದ್ರ ಮೋಹನ್ ಕಾಣಿಸಿಕೊಂಡಿದ್ದಾರೆ. ಫಿಲಂಫೇರ್ ಪ್ರಶಸ್ತಿ, ಆಂಧ್ರದ ಪ್ರತಿಷ್ಠಿತ ನಂದಿ ಪ್ರಶಸ್ತಿಗೆ ಚಂದ್ರ ಮೋಹನ್ ಭಾಜನರಾಗಿದ್ದಾರೆ. “ಒಂದು ವೇಳೆ ಚಂದ್ರ ಮೋಹನ್ ಏನಾದರೂ ಒಂದು ಅಡಿ ಉದ್ದ ಇದ್ದಿದ್ದರೆ ಇಷ್ಟೊತ್ತಿಗೆ ಸೂಪರ್ ಸ್ಟಾರ್ ಆಗಿ ಮೆರೆಯಬೇಕಾಗಿತ್ತು” ಎಂಬ ಮಾತು ಆಂಧ್ರ ಸಿನಿಪ್ರಿಯ ಬಾಯಲ್ಲಿ ಆಗಾಗ ಕೇಳಿಸುತ್ತಿರುತ್ತದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.

Write A Comment