ಕನ್ನಡ ವಾರ್ತೆಗಳು

3ನೇ ವರ್ಷದ ದ.ಕ.ಜಿಲ್ಲಾ ಮಟ್ಟದ ಅಂತರ್ ಸರಕಾರಿ ಕಾಲೇಜು ‘ಕಲಾ ಸಿಂಚನ’

Pinterest LinkedIn Tumblr

kala_sinchana_photo_1

ಬಂಟ್ವಾಳ,ಫೆ.19:  ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಸೆಟೆದು ನಿಲ್ಲಬೇಕು, ಅವಕಾಶಗಳ ಸದುಪಯೋಗಪಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಬೇಕು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕರೆ ನೀಡಿದ್ದಾರೆ.

ಸರಕಾರಿ ಪ್ರ.ದರ್ಜೆ ಕಾಲೇಜು ಬಂಟ್ವಾಳ ಇದರ ಆಶ್ರಯದಲ್ಲಿ ಗುರುವಾರ ಕಾಲೇಜಿನ ಆವರಣದಲ್ಲಿ ನಡೆದ 3 ನೇ ವರ್ಷದ ದ.ಕ.ಜಿಲ್ಲಾ ಮಟ್ಟದ ಅಂತರ್ ಸರಕಾರಿ ಕಾಲೇಜು ‘ಕಲಾ ಸಿಂಚನ’ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಾಸಿಂಚನ ಉತ್ತಮ ಕಾರ್ಯಕ್ರಮ ಎಂದವರು ಶ್ಲಾಘಿಸಿದರು. ಬೆರಳೆಣಿಕೆಯ ಸರ್ಕಾರಿ ಕಾಲೇಜುಗಳು ಹೊರತು ಪಡಿಸಿ, ಉಳಿದ ಸರ್ಕಾರಿ ಕಾಲೆಜು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಮುನ್ನಡೆ ಸಾಧಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆಯೂ ಸಲಹೆ ನೀಡಿದರು.

ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು, ಅವರು ಮಾತನಾಡಿ ಈ ದೇಶದ ಉತ್ತರಾಧಿಕಾರಿಗಳಾದ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ದೇಶದ ದೊಡ್ಡ ದುರಂತ ಎಂದರು. ಮನುಷ್ಯತ್ವದ ಜೊತೆಗೆ ಸಾಂಸ್ಕೃತಿಕ ತನ ಜೊತೆಗಿದ್ದರೆ ಮಾತ್ರ ಸುಂದರ ಬದುಕು ರೂಪುಗೊಳ್ಳಲು ಸಾಧ್ಯ ಎಂದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಸದಾಶಿವ ಬಂಗೇರ, ಕಾಲೆಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ , ವಿದ್ಯಾರ್ಥಿಗಳಾದ ಸತೀಶ್, ಅಶ್ವಿನಿ, ಸ್ವಾತಿ ಉಪಸ್ಥಿತರಿದ್ದರು. ಕಲಾ ಸಿಂಚನದ ಸಂಚಾಲಕ ಲೂಯೀಸ್ ಮನೋಜ್ ಎಂಬ್ರೋಸ್ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಲಿಖಿತಾ ಸ್ವಾಗತಿಸಿ, ನಮಿತಾ ವಂದಿಸಿದರು. ವಿದ್ಯಾರ್ಥಿಗಳಾದ ತಾರಾ, ಶಿವಾನಂದ ಕಾರ್ಯಕ್ರಮ ನಿರ್ವಹಿಸಿದರು.

Write A Comment