ಕನ್ನಡ ವಾರ್ತೆಗಳು

ವೆನ್ಲಾಕ್ ಶವಾಗಾರದಲ್ಲಿ ಹೆಚ್ಚು ಮೃತದೇಹಗಳ ಶೇಖರಣೆಯಿಂದ ಕೋಲ್ಡ್ ಸ್ಟೋರೇಜ್ ಕೊರತೆ

Pinterest LinkedIn Tumblr

wenlock_cooler_prblm_1

ಮಂಗಳೂರು, ಫೆ.೧೮ : ವ್ಯಕ್ತಿಯೊಬ್ಬನ ಮೃತದೇಹ ವನ್ನು ಆತನ ವಾರಸುದಾರರು ಪತ್ತೆಯಾಗದಿದ್ದರೂ ಅತ್ಯಂತ ಘನತೆಯಿಂದ ಕಾಪಾಡಬೇಕು ಹಾಗೂ ಅದನ್ನು ವಿಲೇ ಮಾಡಬೇಕು ಎಂಬುದು ಭಾರತದ ಸರ್ವೋಚ್ಚ ನ್ಯಾಯಾಲಯ ನಿರ್ದೇಶನ. ಆದರೆ ರಾಜ್ಯದಲ್ಲೇ ಅತ್ಯಾಧುನಿಕ ಶವಾಗಾರವಾಗಿ ಮೇಲ್ದರ್ಜೆ ಗೇರಿಸಲ್ಪಟ್ಟಿರುವ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಮೃತ ದೇಹಗಳನ್ನು ಇರಿಸುವ ಮೂಲಕ ಮುಜುಗರಕ್ಕೆ ಕಾರಣವಾಗುತ್ತಿದೆ. ಸೋಮವಾರ ಶವಾಗಾರಕ್ಕೆ ಭೇಟಿ ನೀಡಿದ ಸಂದರ್ಭ 12 ಮೃತದೇಹಗಳನ್ನು ಇರಿಸಬಹುದಾದ ಕೋಲ್ಡ್ ಸ್ಟೋರೇಜ್‌ನಲ್ಲಿ 24 ಶವಗಳನ್ನು ಇರಿಸಿರುವುದು ಕಂಡು ಬಂತು. ಶವಾಗಾರದಲ್ಲಿ ಒಂದರಲ್ಲಿ ನಾಲ್ಕು ಪ್ರತ್ಯೇಕ ಟ್ರೇಗಳುಳ್ಳ ಮೂರು ಕೋಲ್ಡ್ ಸ್ಟೋರೇಜ್‌ಗಳಿವೆ.

ಏಕಕಾಲದಲ್ಲಿ ಈ ಕೋಲ್ಡ್ ಸ್ಟೋರೇಜ್‌ಗಳಿಗೆ 12 ಮೃತದೇಹಗಳನ್ನು ಕೆಡದಂತೆ ಸಂರಕ್ಷಿಸುವ ಸಾಮರ್ಥ್ಯವಿದೆ. ಆದರೆ ವಿಲೇ ಆಗದ, ವಾರಸುದಾರರು ಪತ್ತೆಯಾಗದ ಮೃತದೇಹಗಳು ಅಧಿಕವಿರುವ ಹಿನ್ನೆಲೆಯಲ್ಲಿ ಕೋಲ್ಡ್ ಸ್ಟೋರೇಜೊಂದರ ಟ್ರೇನಲ್ಲಿ ಎರಡೆರಡು ಮೃತದೇಹಗಳನ್ನು ಇರಿಸಲಾಗಿದೆ. ಇವುಗಳಲ್ಲಿ 3 ಮೃತದೇಹಗಳು ಒಂದೂವರೆ ತಿಂಗಳಿಗಿಂತಲೂ ಹಳೆಯದಾಗಿವೆ. ಕೋಲ್ಡ್ ಸ್ಟೋರೇಜ್‌ನ ಸಮಸ್ಯೆಯ ಹೊರತಾಗಿಯೂ ಅವುಗಳು ಕೆಡದಂತೆ ನಿರ್ವಹಿಸುತ್ತಿರುವುದು ಮಾತ್ರ ಇಲ್ಲಿನ ಸಿಬ್ಬಂದಿಯ ಸಾಹಸ ಕಾರ್ಯವೇ ಸರಿ.

ಶವಾಗಾರದಲ್ಲಿರುವ ಬಹುತೇಕ ಮೃತದೇಹಗಳು ಸಂಬಂಧಿಕರಿಲ್ಲದೆ, ವಿವಿಧ ರೀತಿಯ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸೇರಿ, ಕೊನೆಗೊಂದು ದಿನ ಚಿಕಿತ್ಸೆ ಫಲಕಾರಿಯಾಗದೆ ‘ಅನಾಥ’ರೆಂಬ ಹಣೆ ಪಟ್ಟಿ ಕಟ್ಟಿಕೊಂಡವರದ್ದು. 2014ರ ಡಿಸೆಂಬರ್‌ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸೇರಿದ ಉಮಾ ಎಂಬ ಮಹಿಳೆಯ ಮೃತದೇಹ ಕಳೆದ ಸುಮಾರು 2 ತಿಂಗಳಿನಿಂದ ಶವಾಗಾರದಲ್ಲಿದೆ. ಬಂಟ್ವಾಳ ಮೂಲದವರೆಂದು ಹೇಳಲಾಗುತ್ತಿರುವ ಈಕೆಯ ಶವವನ್ನು ಕೊಂಡೊಯ್ಯಲು ಇನ್ನೂ ಆಕೆಯ ಮನೆಯವರು ಯಾರೂ ಮುಂದೆ ಬಂದಿಲ್ಲ. ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಚುರುಕಾಗಿ ಕಾರ್ಯನಿರ್ವಹಿಸಿದರೆ, ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಪಾಲಿಸಿದರೆ, ಬಹುತೇಕ ಮೃತದೇಹಗಳಿಗೆ ಗೌರವಯುತ ಅಂತ್ಯವನ್ನು ಕಾಣಿಸಬಹುದು.

ಕಳೆದ ವರ್ಷಜ ವೆನ್ಲಾಕ್ ಆಸ್ಪತ್ರೆಯ ದಾಖಲೆಯ ಪ್ರಕಾರ ಗುರುತು ಪತ್ತೆಯಾಗದ, ವಾರಸುದಾರರಿಲ್ಲದ 110ಕ್ಕೂ ಅಧಿಕ ಮೃತದೇಹಗಳನ್ನು ವಿಲೇ ಮಾಡಲಾಗಿದೆ. ಮೃತದೇಹವು ರೋಗದಿಂದ ಕೂಡಿದ್ದು ಹುಳುಗಳಾದರೆ ಆ ಹುಳುಗಳು ಪಕ್ಕದ ಮೃತದೇಹಕ್ಕೂ ಹರಡುವ ಸಾಧ್ಯತೆ ಇದೆ. ವೆನ್ಲಾಕ್ ಆಸ್ಪತ್ರೆಯಿಂದ ಈಗಾಗಲೇ ಹೆಚ್ಚುವರಿ ನಾಲ್ಕು ಕೋಲ್ಡ್ ಸ್ಟೋರೇಜ್‌ಗಳಿಗೆ ಬೇಡಿಕೆ ನೀಡಲಾಗಿದೆ. ಪ್ರಸ್ತುತ ಎರಡು ಕೋಲ್ಡ್ ಸ್ಟೋರೇಜ್‌ಗಳು ಟೆಂಡರ್ ಹಂತದಲಿವೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ, ಕಳೆದ ಡಿಸೆಂಬರ್‌ನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ರಾಜ್ಯದಲ್ಲೇ ಸುಸಜ್ಜಿತ ಶವಾಗಾರ ಎಂಬ ಘೋಷಣೆಯೊಂದಿಗೆ ಉದ್ಘಾಟನೆಗೊಂಡ ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳಿಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ. ಅದಕ್ಕಾಗಿ ಸೂಕ್ತ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗೆ ಸಂಬಂಧ ಪಟ್ಟವರು ಆಸಕ್ತಿ ವಹಿಸಬೇಕಾಗಿದೆ.

ಶವಾಗಾರ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಮೇಲ್ದರ್ಜೆಗೇರಿಸಲ್ಪಟ್ಟಿದೆ. ಪೋಸ್ಟ್ ಮಾರ್ಟಂ ಮಾಡಲು ಪ್ರತ್ಯೇಕ ಹಾಗೂ ವಿಶಾಲದ ಸ್ಥಳದ ವ್ಯವಸ್ಥೆಯೊಂದಿಗೆ ಮೃತದೇಹಗಳನ್ನು ತಿಂಗಳುಗಟ್ಟಲೆ ಕೆಡದಂತೆ ಕಾಪಾಡಲು ಅಗತ್ಯವಾದ ಕೋಲ್ಡ್ ಸ್ಟೋರೇಜ್‌ಗಳನ್ನು ಇರಿಸಲು ವಿಶಾಲವಾದ ಸ್ಥಳಾವಕಾಶವನ್ನೂ ಹೊಂದಿದೆ. ಮೃತದೇಹಗಳನ್ನು ಆಸ್ಪತ್ರೆಯಿಂದ ಸಂಬಂಧಿಕರ ಕೈಗೆ ಒಪ್ಪಿಸುವವರೆಗೆ ಶವಾಗಾರದ ಬಳಿ ಕುಳಿತುಕೊಳ್ಳಲು ಆಸನ, ನೀರಿನ ವ್ಯವಸ್ಥೆಯೊಂದಿಗೆ ವೆನ್ಲಾಕ್ ಆಸ್ಪತ್ರೆಯ ಶವಾಗಾರ ಸುಸಜ್ಜಿತ ವಾಗಿರುವುದರಲ್ಲ್ಲೂ ಎರಡು ಮಾತಿಲ್ಲ. ಆದರೆ, ಸಾವು ಎನ್ನುವುದು ಸ್ವಾಭಾವಿಕ ಹಾಗೂ ಸಹಜ. ಸಂವಿಧಾನ ಹಾಗೂ ಕಾನೂನಿನ ಆಶಯದಂತೆ, ಮೃತದೇಹದ ವಾರಸುದಾರರು ಪತ್ತೆಯಾಗದ ಸಂದರ್ಭ ಸಾವಿಗೀಡಾದ ವ್ಯಕ್ತಿಗೆ ಘನತೆಯ ಅಂತ್ಯ ವಿದಾಯವನ್ನು ನೀಡುವುದು, ಸಂಬಂಧಿಕರು ಪತ್ತೆಯಾಗುವವರೆಗೆ ಘನತೆಯಿಂದ ಆ ಮೃತದೇಹವನ್ನು ಸಂರಕ್ಷಿಸುವುದು ಸರಕಾರ ಹಾಗೂ ಆಡಳಿತದ ಕರ್ತವ್ಯ.

ಸಮಸ್ಯೆ ಸರಿಪಡಿಸಲು ಕ್ರಮ ಸಚಿವ ಖಾದರ್: 
ವೆನ್ಲಾಕ್ ಶವಾಗಾರದಲ್ಲಿನ ಕೋಲ್ಡ್ ಸ್ಟೋರೇಜ್ ಸಮಸ್ಯೆ, ವಾರಿಸುದಾರರ ಪತ್ತೆ ಕುರಿತಂತೆ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್‌ರ ಗಮನ ಸೆಳೆದಾಗ, ‘‘ಈ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ, ಆದಷ್ಟು ಶೀಘ್ರವಾಗಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಮಾಡುವಂತೆ ಕ್ರಮ ಕೈಗೊಳ್ಳುತ್ತೇನೆ. ಮಾತ್ರವಲ್ಲದೆ, ಮೃತದೇಹಗಳನ್ನು ಹೆಚ್ಚು ದಿನ ಕಾಯಿಸದೆ ಶೀಘ್ರವಾಗಿ ವಾರಸುದಾರರನ್ನು ಪತ್ತೆಹಚ್ಚುವ ಹಾಗೂ ಮೃತದೇಹಗಳನ್ನು ಕಾನೂನು ಬದ್ಧವಾಗಿ ವಿಲೇ ಮಾಡುವ ಕುರಿತಂತೆ ಪೊಲೀಸ್ ಅಧಿಕಾರಿಗಳ ಜತೆಯಲ್ಲೂ ಮಾತನಾಡುತ್ತೇನೆ’’ ಎಂದು  ಭರವಸೆ ನೀಡಿದರು.

Write A Comment