ಕನ್ನಡ ವಾರ್ತೆಗಳು

ಅಪ್ರಾಪ್ತೆ ಯುವತಿಯನ್ನು ಪುಸಲಾಯತಿಸಿ ಲೈಂಗಿಕ ಕಿರುಕುಳ : ಆರೋಪಿ ಯುವಕನಿಗೆ ನ್ಯಾಯಾಂಗ ಬಂಧನ

Pinterest LinkedIn Tumblr

Man_Arrested_Posco Act

ಕುಂದಾಪುರ: ಮೊಬೈಲ್ ಅಂಗಡಿ ಮೂಲಕ ಮೊಬೈಲ್ ಸಂಖ್ಯೆ ಸಂಪಾದಿಸಿ ನೀಡಿದ ಮಿಸ್‌ಕಾಲ್ ಮೂಲಕ ಅಪ್ರಾಪ್ತೆ ಯುವತಿಯೊಬ್ಬಳನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಬೆಂಗಳೂರಿಗೆ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ನೀಡಿದ ದೂರಿನಂತೆ ಆರೋಪಿ ಯುವಕನ್ನು ಕುಂದಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿಲಾಗಿದೆ. ತಾಲೂಕಿನ ತಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲ್ಲೂರು ಕೆಳಹಿತ್ಲು ಭರತ್ ಮೊಗವೀರ ಎಂಬಾತನೇ ಬಂಧಿತ ಆರೋಪಿ.

ಘಟನೆಯ ವಿವರ: ಆರೋಪಿ ಭರತ್ ಮೊಗವೀರ ಎಂಬಾತ ತಾಲೂಕಿನ ಕೋಟೇಶ್ವರದಲ್ಲಿ ಮೊಬೈಲ್ ಅಂಗಡಿಯೊಂದನ್ನು ಹೊಂದಿದ್ದು, ಕಿರುಕುಳಕ್ಕೊಳಗಾದ ಅನ್ಯ ಕೋಮಿನ ಹಂಗಳೂರು ಸಮೀಪದ ನಿವಾಸಿ ನಗರ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದ ಯುವತಿ ಮೊಬೈಲ್ ರೀಚಾರ್ಜಿಗೆಂದು ಬಂದಾಗ ಆಕೆಯ ಮೊಬೈಲ್ ಸಂಖ್ಯೆ ಸಂಪಾದಿಸಿಕೊಂಡು ಮಿಸ್‌ಕಾಲ್, ಸಂದೇಶಗಳನ್ನು ರವಾನಿಸಿದ್ದನೆನ್ನಲಾಗಿದೆ. ಹೀಗೇ ನಡೆದ ಮಿಸ್‌ಕಾಲ್‌ಗಳು ರಿಯಲ್ ಕಾಲ್‌ಗಳಾಗಿ ಮಾರ್ಪಟ್ಟಿತ್ತೆನ್ನಲಾಗಿದೆ.

ಆದರೆ ಯುವತಿ ತಾನಿನ್ನೂ ಅಪ್ರಾಪ್ತೆಯಾಗಿದ್ದು, ಇದು ಸರಿಯಲ್ಲ ಎಂದು ಯುವಕನಿಗೆ ಹೇಳಿದ್ದಳೆನ್ನಲಾಗಿದ್ದು, ಆರೋಪಿ ಯುವಕ ಅವಳನ್ನು ಪುಸಲಾಯಿಸಿ, ಏನೂ ಆಗುವುದಿಲ್ಲ. ಇನ್ನು ಕೆಲವು ತಿಂಗಳಲ್ಲಿ ಹದಿನೆಂಟು ವರ್ಷ ತುಂಬುವುದರಿಂದ ಮದುವೆಯಾಘಲು ಅಡ್ಡಿಯಿಲ್ಲ ಎಂದೆಲ್ಲಾ ಹೇಳಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಯುವತಿ ಹೇಳಿಕೆ ನೀಡಿದ್ದಾಳೆಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಯುವತಿ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಯುವಕನ ಮಾತು ನಂಬಿದ್ದ ಯುವತಿ ಆತನೊಂದಿಗೆ ಬೆಂಗಳೂರಿಗೆ ಹೋಗಿದ್ದು, ಅಲ್ಲಿ ಆತನ ಲೈಂಗಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಬಲ್ಲ ಮೂಲಗಳು ತಿಳಿಸಿವೆ. ಈ ನಡುವೆ ಗಾಭರಿಗೊಂಡ ಯುವತಿ ತಾನು ಬೆಂಗಳೂರಿನಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದು, ತಕ್ಷಣ ಮನೆಯವರು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರಿಬ್ಬರನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ.

ಪ್ರಕರಣವು ಫೋಸ್ಕೋ ಖಾಯಿದೆಯಡಿಯಲ್ಲಿ ಬರುವುದರಿಂದ ಯುವತಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಯುವತಿಯ ಹೇಳಿಕೆಯನ್ನು ಪಡೆದುಕೊಂಡ ನಂತರ ಆರೋಪಿ ಭರತ್ ಮೊಗವೀರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

Write A Comment