ಕನ್ನಡ ವಾರ್ತೆಗಳು

ಬ್ರಹ್ಮಾವರ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ; ಬ್ರಹ್ಮಾವರ ಪೊಲೀಸರ ಕಾರ್ಯಾಚರಣೆ; ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಫೆಬ್ರವರಿ 8 ರಂದು ರಾತ್ರಿ ಕುಂಜಾಲು ಸಮೀಪ ಚೇರ್ಕಾಡಿ ಪೆಟ್ರೋಲ್ ಬಂಕ್ ಬಳಿ ಸೂರ್ಯನಾರಾಯಣ ರಾವ್ ಎನ್ನುವವರ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ ದರೋಡೆಕೋರರ ತಂಡವನ್ನು ಬ್ರಹ್ಮಾವರ ಪೊಲೀಸ್‌ರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Brahmavara_Police_Investigation

ಘಟನೆಯ ವಿವರ: ಬ್ರಹ್ಮಾವರ ಬಳಿಯ ಚೇರ್ಕಾಡಿ ಕಂಬಳಗದ್ದೆ ಕ್ರಾಸ್ ಬಳಿ ರಾತ್ರಿ ಔಷಧಿಗಾಗಿ ಬಂದಿದ್ದ ವ್ಯಕ್ತಿ ಬಂದು ಮನೆಯ ಬಾಗಿಲು ಬಡಿದಾಗ ರಾವ್ ಅವರ ಮಗ ಸಂದೇಶ್ ಕಿಟಕಿಯಲ್ಲಿ ನೋಡಿ ವಿಚಾರಿಸಿದಾಗ ಔಷಧಿ ಬೇಕೆಂದು ಕೇಳಿದಾಗ ಔಷಧಿ ಬೆಳಿಗ್ಗೆ ಕೊಡುವುದಾಗಿ ತಿಳಿಸಿದ್ದರು. ನಂತರ ತಾನು ಇಲ್ಲೇ ಮಲಗುವುದಾಗಿ ಹೇಳಿ ಸ್ವಲ್ಪ ಜಾಗ ಕೊಡಿ ಎಂದಾಗ ಸಂದೇಶ್ ಅವರು ಮನೆಯ ಪಕ್ಕದ ಹಾಲ್‌ನ ಶೆಟರ್ ಬಾಗಿಲು ತೆಗೆಯಲೆಂದು ಮನೆಯೆ ಬಾಗಿಲು ತೆಗೆದು ಹೊರಗಡೆ ಬಂದಾಗ ಮನೆಯ ಬಳಿ ಇದ್ದ ಆರೋಪಿಗಳು ಒಮ್ಮೆಲೆ ರಾಡ್ ಮತ್ತು ಮಚ್ಚು ಹಿಡಿದುಕೊಂಡು ಬಂದು ಹಲ್ಲೆ ನಡೆಸಿದರು. ಹೊಡೆದ ಹೊಡೆತಕ್ಕೆ ಸಂದೇಶ್ ಬಿದ್ದಲ್ಲಿಂದ ಬೊಬ್ಬೆ ಹಾಕದಂತೆ ಕುತ್ತಿಗೆ ಹಿಡಿದುಕೊಂಡು ಮನೆಯೊಳಗೆ ತಳ್ಳಿಕೊಂಡು ಹೋಗಿ ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿಸಿದ ದರೋಡೆಕೋರರಲ್ಲಿ ಕೆಲವರು ಸಂದೇಶ್ ಅವರ ಹೆಂಡತಿಯನ್ನು ಹಿಡಿದುಕೊಂಡು ಬಾಯಿ ಒತ್ತಿ ಹಿಡಿದು ಸಂದೇಶ್ ಮತ್ತು ಸಂದೇಶ್‌ರ ಹೆಂಡತಿಯ ಮೊಬೈಲ್ ಪೋನ್‌ಗಳನ್ನು ಕಸಿದುಕೊಂಡು ಚಿನ್ನ ಹಣ ಎಲ್ಲಿದೆ ತೋರಿಸಿ ಇಲ್ಲದಿದ್ದರೆ ನಿಮ್ಮನ್ನು ಮಗುವನ್ನು ಸಾಯಿಸುತ್ತೇವೆ ಎಂದು ಬೆದರಿಸಿದ ಆರೋಪಿಗಳು ಮೊಬೈಲ್ ಪೋನ್‌ನ ಲೈಟ್‌ನ ಬೆಳಕಿನಲ್ಲಿ ಬೆಡ್‌ರೂಮ್‌ಗೆ ಎಳೆದುಕೊಂಡು ಹೋಗಿ, ಬಲವಂತವಾಗಿ ಕಪಾಟಿನ ಬೀಗ ತೆಗೆಸಿ ಸುಮಾರು 18 ಸಾವಿರ ನಗದು ಮತ್ತು ಚಿನ್ನಾಭರಣಗಳ ದರೋಡೆ ನಡೆಸಿದ್ದರು.

ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದ ಬ್ರಹ್ಮಾವರ ಪೊಲೀಸ್ ತಂಡ ಕೇವಲ ಒಂದೆ ವಾರದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಎಂಬಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಅಧೀಕ್ಷಕರಾದ ಚಂದ್ರ ಶೇಖರ ಅವರ ಉಸ್ತುವಾರಿಯಲ್ಲಿ ಬ್ರಹ್ಮಾವರ ವೃತ ನಿರೀಕ್ಷಕ ಅರುಣ್ ಬಿ.ನಾಯಕ್ ನೇತೃತ್ವದಲ್ಲಿ ಬ್ರಹ್ಮಾವರ ಠಾಣಾಧಿಕಾರಿ ಗಿರೀಶ್ ಕುಮಾರ್ ಮತ್ತು ಸಿಬ್ಬಂದಿಗಳಾದ ಕಾಂತಪ್ಪ ಸುದೇಶ್ ಶೆಟ್ಟಿ, ರಮೇಶ್, ಪ್ರಸಾದ್, ಜೀವನ್, ರಾಕೇಶ್ ದೇವಾಡಿಗ, ನವೀನ್ ಕುಮಾರ್, ಜಯಕರ, ಲೋಕೇಶ್ ನಾಯ್ಕ, ಪ್ರಸಾದ್ ನಾಗರಾಜ, ಶಿವಾನಂದ, ದಿನೇಶ್ ಕಾರ್ಕಳ, ನಿತಿನ್, ಮೋಹನ ನಾಯ್ಕ್, ರವಿರಾಜ್, ಲೋಹಿತಾಶ್ವ, ಬೀರಪ್ಪ ಹೊಸಮನಿ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ದರೋಡೆಕೋರದ ಕೃತ್ಯವನ್ನು ಭೇದಿಸಿ ಬಂಧಿಸಿ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಹಾವೇರಿ ಜಿಲ್ಲೆಯ ಹಾನಗಲ್ಲು ತಾಲೂಕಿನವರಾಗಿದ್ದಾರೆ. ಪ್ರಕರಣದಲ್ಲಿ 5 ಜನ ದರೋಡೆಕೋರರಿದ್ದು ಓರ್ವ ಬಾಲಾಪರಾಧಿಯನ್ನು ಕೂಡ ಒಳಗೊಂಡಿದ್ದಾರೆ. ದರೋಡೆಕೋರರಾದ ಬಸವ, ರಮೇಶ್, ರಾಘವೇಂದ್ರ, ಅಣ್ಣಪ್ಪ ಮತ್ತು ಮಾಲತೇಶ್ ಅವರುಗಳ ಪೈಕಿ ರಮೇಶ್ ಎನ್ನುವವನ್ನು ಕಳುವುವಾದ ಮನೆಯ ಡಾಕ್ಟರ್ ಬಳಿ ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಡಾಕ್ಟರ್ ಮನೆಯಲ್ಲಿ ಬೆಲೆಬಾಳುವ ಮೂರ್ತಿ ಇರುವ ಕುರಿತು ಮಾಹಿತಿ ಪಡೆದು ದರೋಡೆ ನಡೆಸಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಬಂಧಿತರಿಂದ 6 ಮೊಬೈಲ್ ಪೋನ್, ಒಂದು ಲ್ಯಾಪ್‌ಟಾಪ್, ಒಂದು ಕಾಲು ಚೈನ್, 4000 ನಗದು, ಕಬ್ಬಿಣದ ರಾಡ್, ಒಂದು ಮಚ್ಚು ಮತ್ತು ಇಂಡಿಗೋ ಕಾರನ್ನು ವಶಕ್ಕೆ ಪಡೆಯಲಾಗಿದೆ.

Write A Comment