ಮಂಗಳೂರು / ತೊಕ್ಕೊಟ್ಟು : ಮದರಸವನ್ನೇ ಮಸೀದಿಯಾಗಿ ಪರಿವರ್ತಿಸಿ ವಿವಾದಕ್ಕೀಡಾಗಿದ್ದ ತೊಕ್ಕೊಟ್ಟು ಸುಭಾಷ್ ನಗರದಲ್ಲಿ ಶನಿವಾರ ಮತ್ತೆ ಅನುಮತಿಯಿಲ್ಲದೆ ಮೈಕ್‌ನಲ್ಲಿ ಬಾಂಗ್ ನೀಡಿರುವುದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ 25 ಮಂದಿಯ ತಂಡ ಗಂಭೀರವಾಗಿ ಹಲ್ಲೆ ನಡೆಸಿದೆ. ಘಟನೆಯಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
ಪ್ರತಿದಿನ ಬಾಂಗ್ ನಡೆಸುತ್ತಿದ್ದವರು ಶನಿವಾರ ಏಕಾಏಕಿ ಸೌಂಡ್ ಬಾಕ್ಸ್‌ಗೆ ಸಂಪರ್ಕ ಕೊಟ್ಟು ಬಾಂಗ್ ನೀಡಿದ್ದರು. ಆದರೆ ನ್ಯಾಯಾಲಯದಲ್ಲಿ ದಾವೆಯಿದ್ದು, ಮದರಸದಲ್ಲಿ ಮಸೀದಿ ಚಟುವಟಿಕೆಗಳು ನಡೆಯಬಾರದೆನ್ನುವ ಆದೇಶವಿದ್ದರೂ ಸೌಂಡ್‌ಬಾಕ್ಸಿನ ಮೂಲಕ ಬಾಂಗ್ ನೀಡಿರುವುದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿಗಳಾದ ಬೇಬಿ, ಕಿಶೋರಿ, ಗೀತಾ, ಶಶಿಕಲಾ ನಾಯ್ಕ್ ಅವರು ಮದರಸ ಸಮಿತಿ ಅಧ್ಯಕ್ಷ ಹಮೀದ್ ಅವರ ಮನೆಗೆ ತೆರಳಿ ವಿಚಾರಿಸಿದ್ದರು.
ಅವರನ್ನು ಪ್ರಶ್ನಿಸುತ್ತಿದ್ದಂತೆ 25ರಷ್ಟು ಮಂದಿಯ ತಂಡ ಸೇರಿ ಮಹಿಳೆಯರ ಮೇಲೆ ದಾಳಿಗೆ ಮುಂದಾಗಿದ್ದು, ಹಮೀದ್ ಸೇರಿದಂತೆ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವ ಬೆದರಿಕೆ ಹಾಕಿತ್ತು. ಅಲ್ಲಿಂದ ಮನೆ ಕಡೆಗೆ ಹೊರಟಿದ್ದ ಮಹಿಳೆಯರನ್ನು ಮಸೀದಿ ಬಳಿ ಅಡ್ಡಗಟ್ಟಿದ ತಂಡವೊಂದು ಅಣ್ಣು ನಾಯ್ಕ ಎಂಬವರ ಪತ್ನಿ ಬೇಬಿ (45) ಮತ್ತು ಗೀತಾ ಎಂಬವರಿಗೆ ಹಲ್ಲೆ ನಡೆಸಿ, ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದಿರುವ ಕುರಿತು ಸ್ಥಳೀಯ ಅನಿತಾ ವೇಗಸ್ ಉಳ್ಳಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಾಳು ಬೇಬಿ ಮತ್ತು ಗೀತಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ 100ಕ್ಕೂ ಅಧಿಕ ಮಂದಿ ಜಮಾಯಿಸಿದ್ದು, ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.
ಘಟನಾ ಸ್ಥಳಕ್ಕೆ ಎಸಿಪಿ ಕಲ್ಯಾಣ್ ಶೆಟ್ಟಿ, ಡಿಸಿಪಿ ಕ್ರೈಂ ವಿಷ್ಣುವರ್ಧನ್, ಉಳ್ಳಾಲ ಠಾಣಾಧಿಕಾರಿ ಸವಿತ್ರತೇಜ ಹಾಗೂ ಎಸ್‌ಐ ಭಾರತಿ ಆಗಮಿಸಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿಭದ್ರತೆ ಒದಗಿಸಿದ್ದಾರೆ.
ಪ್ರತಿದೂರು:
ಸುಭಾಷನಗರ ನಿವಾಸಿ ನೌಷಾದ್ ಎಂಬವರು ಮಸೀದಿಯಲ್ಲಿ ನಮಾಜು ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದಾಗ, ಆರು ಮಂದಿ ಯುವಕರ ತಂಡ ಸುಭಾಷನಗರ ನಿವಾಸಿ ಅಮೀನಮ್ಮ ಎಂಬವರನ್ನು ಎಳೆಯುತ್ತಿದ್ದರು. ಅದನ್ನು ಕಂಡು ಆರೋಪಿಗಳ ಕೃತ್ಯವನ್ನು ತಡೆಯಲು ಮುಂದಾದ ನೌಷಾದ್ ಅವರಿಗೆ ತಂಡ ಹಲ್ಲೆ ನಡೆಸಿದೆ ಎಂದು ನೌಷಾದ್ ಉಳ್ಳಾಲ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸುಭಾಷನಗರ ನಿವಾಸಿಗಳಾದ ಅನಿಲ್, ನಿತಿನ್, ಧನು, ಯತೀಶ್, ಪ್ರಶಾಂತ್, ಮಂಜುನಾಥ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.