ಈಗಾಗಲೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯು.ಸಿ. ಪಾಠ-ಪ್ರವಚನಗಳು ಪೂರ್ಣಗೊಂಡಿದ್ದು ಮುಖ್ಯ ಪರೀಕ್ಷೆಗೆ ತಯಾರಾಗುವ ನಿಟ್ಟಿನಲ್ಲಿ ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತಿವೆ. ಎರಡನೆ ಪಿ.ಯು.ಸಿ.ಗೆ ಮಾರ್ಚ್ 12ರಿಂದ ಮತ್ತು ಎಸ್ಸೆಸ್ಸೆಲ್ಸಿಗೆ ಮಾರ್ಚ್ 30ರಿಂದ ಅಂತಿಮ ಪರೀಕ್ಷೆಗಳು ಆರಂಭವಾಗಲಿವೆ. ಅದರಲ್ಲೂ ಹತ್ತನೆ ತರಗತಿ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಈ ವರ್ಷ ಹೊಸ ಪಠ್ಯದ ಜೊತೆಯಲ್ಲೆ ಪರೀಕ್ಷೆಯ ಮಾದರಿಯೂ ಬದಲಾಗಿದೆ.
ಸಮಗ್ರ ಮತ್ತು ನಿರಂತರ ಮೌಲ್ಯಮಾಪನ(ಸಿ.ಸಿ.ಇ.) ಎಂಬ ಈ ಹೊಸ ಪದ್ಧತಿಯಲ್ಲಿ ಪ್ರತಿ ವಿಷಯದ ಒಟ್ಟು ಅಂಕಗಳಲ್ಲಿ ಶೇ.20ಕ್ಕೆ ಆಂತರಿಕ ಮೌಲ್ಯಮಾಪನ ನಡೆಯಲಿದ್ದು, ಉಳಿದ ಶೇ.80 ಅಂಕಗಳಿಗೆ ಬಾಹ್ಯ ಪರೀಕ್ಷೆಯಿರುತ್ತದೆ. ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಈ ಪರೀಕ್ಷೆಗೆ ಸಿದ್ಧರಾಗುತ್ತಿರುವ ಮಕ್ಕಳಿಗೆ ಆತಂಕ ಆವರಿಸುತ್ತಿದೆ.
ಬದುಕಿನ ಮಹತ್ತರ ತಿರುವಿಗೆ ಕಾರಣವಾಗುವ ಪರೀಕ್ಷಾ ಫಲಿತಾಂಶ ಸಹಜವಾಗಿ ವಿದ್ಯಾರ್ಥಿಗಳಲ್ಲಿ ವಿಪರೀತ ಒತ್ತಡ ಉಂಟುಮಾಡುತ್ತಿದೆ. ಹೆತ್ತವರ ಅತಿಯಾದ ನಿರೀಕ್ಷೆ, ಭವಿಷ್ಯದ ಚಿಂತೆ, ಬಾಹ್ಯ ಮತ್ತು ಆಂತರಿಕ ಒತ್ತಡಗಳು ವಿದ್ಯಾರ್ಥಿಗಳ ಮನಸ್ಸಲ್ಲಿ ಪರೀಕ್ಷೆ ಎಂದರೆ ಸಾಕು ಭಯದ ಅಲೆಯನ್ನೆಬ್ಬಿಸುತ್ತಿವೆ! ಸರಿಯಾದ ಕ್ರಮದಲ್ಲಿ, ಸಕಾರಾತ್ಮಕ ಮನೋಭಾವನೆಯ ಜೊತೆಯಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಿದಾಗ ಆತಂಕ ದೂರವಾಗಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ.
ನಿಮ್ಮ ಅಭ್ಯಾಸ ಹೀಗಿರಲಿ:
ಓದುವ ಸ್ಥಳ ನಿಶ್ಯಬ್ಧವಾಗಿರಲಿ. ಮನೆಯಲ್ಲಿನ ಟೀವಿ, ರೇಡಿಯೊ ಶಬ್ಧ ನಿಮ್ಮ ಏಕಾಗ್ರತೆಗೆ ಭಂಗ ತಾರದಂತಿರಲಿ. ಓದುವ ಕೊಠಡಿಯಲ್ಲಿ ಗಾಳಿ, ಬೆಳಕು ಧಾರಾಳವಾಗಿರಲಿ. ಹೊರಗಿನ ದೃಶ್ಯಗಳು ನಿಮ್ಮ ಓದಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಕಿಟಕಿಗೆ ಬೆನ್ನು ಮಾಡಿ ಕೂರುವುದು ಒಳ್ಳೆಯದು. ಹಾಸಿಗೆಯಲ್ಲಿ, ನೆಲದಲ್ಲಿ ಮಲಗಿ ಓದುವುದು ಒಳ್ಳೆಯದಲ್ಲ. ಇದರಿಂದ ಏಕಾಗ್ರತೆಗೆ ತೊಂದರೆಯಾಗುತ್ತದೆ, ಅಲ್ಲದೆ ನಿದ್ದೆಯೂ ಆವರಿಸಬಹುದು.
ಓದುವಾಗ ಉತ್ಸಾಹವಿರಲಿ. ಆತ್ಮವಿಶ್ವಾಸವಿರಲಿ. ಈ ವಿಷಯ ತುಂಬಾ ಕಷ್ಟ, ಅರ್ಥವಾಗುವುದಿಲ್ಲ, ನನ್ನ ನೆನಪಿನಲ್ಲಿ ಉಳಿಯುವುದಿಲ್ಲ….ಎಂಬ ನಕಾರಾತ್ಮಕ ಯೋಚನೆಗಳು ಬೇಡ. ಕಷ್ಟಪಡದೆ ಇಷ್ಟಪಟ್ಟು ಅಭ್ಯಾಸ ಮಾಡಿದರೆ ಎಲ್ಲವೂ ಸುಲಭ, ಸಲೀಸು. ಉತ್ತರ ಗೊತ್ತಾಗದಿದ್ದರೆ ಸ್ನೇಹಿತರನ್ನೋ, ಶಿಕ್ಷಕರನ್ನೋ ಕೇಳಿ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಯಾವುದೇ ಹಿಂಜರಿಕೆ ಬೇಡ.
ಒಮ್ಮೆ ಓದಲು ಕುಳಿತರೆ ಸತತವಾಗಿ ಮುಕ್ಕಾಲು ಗಂಟೆಯಿಂದ ಒಂದು ಗಂಟೆವರೆಗೂ ಓದಿ. ನಂತರ ಐದು ನಿಮಿಷ ವಿರಾಮಕೊಟ್ಟು ಮತ್ತೆ ಅಭ್ಯಾಸ ಮಾಡಲು ಆರಂಭಿಸಿ.ನಮ್ಮ ದೇಹದಲ್ಲಿಉತ್ಪತ್ತಿಯಾಗುವ ಉತ್ಸಾಹ, ಏಕಾಗ್ರತೆಯನ್ನು ಹೆಚ್ಚಿಸುವ ರಾಸಾಯನಿಕಗಳು ಸುಮಾರು ಮುಕ್ಕಾಲು ಗಂಟೆ ಮಾತ್ರ ರಕ್ತದಲ್ಲಿರುವುದರಿಂದ ಪುನಃ ಅವುಗಳ ಉತ್ಪತ್ತಿಗೆ ಈ ಪುಟ್ಟ ವಿಶ್ರಾಂತಿ ಅತೀ ಅಗತ್ಯ. ಹೀಗೆ ಮಾಡುವುದರಿಂದ ಮೆದುಳಿನ ತಾಜಾತನ ಹೆಚ್ಚಿ ನೆನಪಿನ ಕ್ರಿಯೆಗೆ ಸಹಕಾರಿಯಾಗುತ್ತದೆ.
ಓದುವಾಗ ಮುಖ್ಯ ಅಂಶಗಳು, ಸೂತ್ರಗಳು, ಪ್ರಮೇಯಗಳು, ಪ್ರಯೋಗಗಳು, ನಕ್ಷೆಗಳನ್ನು ಬರೆದಿಟ್ಟುಕೊಳ್ಳಬೇಕು. ಈ ಅಂಶಗಳ ಮೇಲೆ ಆಗಾಗ್ಗೆ ಗಮನಹರಿಸುವುದರಿಂದ ಅಭ್ಯಾಸದ ಪುನಾರಾವರ್ತನೆಯಾಗಿ ನೆನಪಿನ ಕೋಶಗಳಲ್ಲಿ ದಾಖಲಾಗಲು ಸುಲಭವಾಗುತ್ತದೆ.ವಿದ್ಯಾರ್ಥಿಗೆ ಪ್ರತಿದಿನ ಏಳರಿಂದ ಎಂಟುಗಂಟೆಗಳ ನಿದ್ದೆ ಅವಶ್ಯಕ.
ಪರೀಕ್ಷಾ ವೇಳೆಯಲ್ಲಿ ನಿದ್ದೆಯ ಅವಧಿಯನ್ನು ಕಡಿಮೆ ಮಾಡುವುದರಿಂದ ನೆನಪಿನ ಶಕ್ತಿ ಕುಂದುತ್ತದೆ. ಕಣ್ಣು ನೋವು, ಕಣ್ಣಲ್ಲಿ ನೀರು ಸುರಿಯುವುದು, ತಲೆನೋವು ಮುಂತಾದ ದೈಹಿಕ, ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಚೆನ್ನಾಗಿ ನಿದ್ದೆ ಮಾಡುವುದರಿಂದ ಮೆದುಳು ತಾಜಾಗೊಂಡು ದೈಹಿಕ, ಮಾನಸಿಕ ಆರೋಗ್ಯ ವೃದ್ದಿಸುತ್ತದೆ.ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಹಳೇ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಇದರಿಂದ ಆತ್ಮವಿಶ್ವಾಸ ಹೆಚ್ಚುವುದಲ್ಲದೆ ಪ್ರಶ್ನೆಗಳ ಮಾದರಿ ತಿಳಿಯುತ್ತದೆ.
ರಾತ್ರಿ ಹೊತ್ತು ಓದುವುದು ಅಥವಾ ಬೆಳಗಿನ ಜಾವ ಓದುವುದು ಅವರವರ ಅಭ್ಯಾಸಕ್ಕೆ ಬಿಟ್ಟಿದ್ದು. ಯಾರಿಗೆ ಯಾವ ಸಮಯ ಅನುಕೂಲವೋ ಹಾಗೆ ಮಾಡಬಹುದು. ಆದರೂ ಮುಂಜಾನೆ ಹೊತ್ತು ಪ್ರಶಾಂತವಾಗಿರುವುದರಿಂದ ಹಾಗೂ ನಿದ್ದೆಯ ನಂತರ ಮೆದುಳು ಪ್ರಫುಲ್ಲವಾಗಿರುವುದರಿಂದ ಬೆಳಗಿನ ಓದು ಒಳ್ಳೆಯದು.
ಬೆಳಗಿನ ಉಪಾಹಾರ ಸೇವನೆಯು ಅಭ್ಯಾಸವನ್ನು ಚುರುಕುಗೊಳಿಸಿ ಬೆಳವಣಿಗೆಗೆ ಸಹಕರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿಸಿ ಆಸಕ್ತಿಯಿಂದ ಪಾಠ ಕೇಳಲು, ಹೊಸ ವಿಚಾರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಕಾರಿ. ಹಾಗೆಯೇ ಮಾನಸಿಕ ಬೆಳವಣಿಗೆಗೂ ಇದು ಅವಶ್ಯಕ. ಆದ್ದರಿಂದ ಬೆಳಗಿನ ತಿಂಡಿಯನ್ನು ಚೆನ್ನಾಗಿ ತಿನ್ನುವ ಅಭ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು.
ಪರೀಕ್ಷಾ ವೇಳೆಯಲ್ಲಿ ತಿನ್ನುವ ಆಹಾರದ ಬಗ್ಗೆ ವಿಶೇಷ ಗಮನವಿರಲಿ. ಸುಲಭವಾಗಿ ಜೀರ್ಣವಾಗುವ ಸರಳ, ಸಾತ್ವಿಕ ಆಹಾರ ಸೇವನೆ ಒಳ್ಳೆಯದು. ಹೆಚ್ಚಿಗೆ ಮಸಾಲೆ ಹಾಕಿದ, ಅತಿ ಖಾರದ, ಹೆಚ್ಚು ಸಿಹಿಯಾದ ಅಥವಾ ಜಿಡ್ಡು ಜಾಸ್ತಿಯಿರುವ ಆಹಾರ ಬೇಡ. ಇದರಿಂದ ಪರೀಕ್ಷಾ ಸಮಯದಲ್ಲಿ ಅಜೀರ್ಣ ಕಾಡಬಹುದು. ಓದುವಾಗ ನಿದ್ದೆ ಓಡಿಸಲು ಅತಿಯಾದ ಕಾಫಿ, ಟೀ ಸೇವನೆ ಸಲ್ಲದು. ಕರಿದ ತಿಂಡಿ, ಜಂಕ್ ಫುಡ್, ಪೆಪ್ಸಿ, ಕೋಲಾ ಮುಂತಾದ ಆಹಾರ-ಪಾನೀಯಗಳಿಂದ ದೂರವಿರಿ.
ದಿನಕ್ಕೆ ಆರರಿಂದ ಎಂಟು ಗ್ಲಾಸ್ ಶುದ್ಧ ನೀರು ಕುಡಿಯುವ ಅಭ್ಯಾಸ ಬೆಳಸಿಕೊಂಡಾಗ ಜೀರ್ಣಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ದೂರವಿಡಬಹುದು. ಲಿಂಬು ಬೆರೆಸಿದ ನೀರು ಉತ್ಸಾಹ ಹೆಚ್ಚಿಸಿ ಓದಲು ಸಹಕಾರಿ ಹಾಗೂ ಇದರಿಂದ ಒತ್ತಡದಿಂದ ಬರುವ ತಲೆನೋವನ್ನು ದೂರವಿಡಬಹುದು. ಗುಡ್ ಲಕ್ !
