ಬಂಟ್ವಾಳ,ಫೆ.13: ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಗುರುವಾರ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿನಿಯ ಚಿಕಿತ್ಸೆಯ ಸರ್ವ ವೆಚ್ಚಗಳನ್ನು ಭರಿಸುವುದರೊಂದಿಗೆ, ನಿರಂತರ ನಡೆಯುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳೆಲ್ಲರೂ ಪ್ರತಿಭಟನೆ ನಡೆಸಿದರು.
ಅಳಿಕೆ ಗ್ರಾಮದ ಕಾಂತಡ್ಕ ನಿವಾಸಿ ನಾಗಪ್ಪ ಗೌಡ ಎಂಬವರ ಪುತ್ರಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ವಿದ್ಯಾಶ್ರೀ ಗುರುವಾರ ಬೆಳಗ್ಗೆ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ನಿಲ್ದಾಣದೊಳಕ್ಕೆ ಪ್ರವೇಶಿಸಿದ ಖಾಸಗಿ ಬಸ್ಸನ್ನು ಚಾಲಕ ನಿಲುಗಡೆ ಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಬಸ್ಸಿನ ಮುಂಭಾಗಕ್ಕೆ ಬಡಿದು, ವಿದ್ಯಾರ್ಥಿನಿ ಆಯತಪ್ಪಿ ಬಿದ್ದು, ಆಕೆಯ ಕಾಲಿನ ಮೇಲೆಯೇ ಬಸ್‌ನ ಚಕ್ರ ಚಲಿಸಿದೆ. ವಿದ್ಯಾರ್ಥಿನಿಯ ಕಾಲು ಸಂಪೂರ್ಣ ಜಜ್ಜಲ್ಪಟ್ಟಿದ್ದು, ತಕ್ಷಣ ವಿಟ್ಲ ಸಮುದಾಯ ಆಸ್ಪತೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ವಿಷಯ ತಿಳಿಯುತ್ತಿ ದ್ದಂತೆ ಆಕ್ರೋಶಿತರಾದ ಆಕೆಯ ಸಹಪಾಠಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿದ್ಯಾರ್ಥಿನಿಗೆ ಸರ್ವ ರೀತಿಯ ಚಿಕಿತ್ಸೆ, ವೆಚ್ಚ, ವಿಮೆ ಪರಿಹಾರದೊಂದಿಗೆ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ನಿರಂತರ ಅಪಘಾತವಾಗುತ್ತಿರುವುದನ್ನು ತಡೆಯುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಲೇಜಿನಿಂದ ಜಾಥಾ ನಡೆಸಿ ಖಾಸಗಿ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಾದ ಚೇತನ್, ನೌಫಲ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಖಾಸಗಿ ಬಸ್ ನಿಲ್ದಾಣದಲ್ಲಿ ವಿಟ್ಲ ಗ್ರಾಪಂನಿಂದ ಅಳವಡಿಸಲಾದ ನೂತನ ತ್ರಿಭುಜ ವಿನ್ಯಾಸದ ವೃತ್ತ ಅವೈಜ್ಞಾನಿಕವಾಗಿದ್ದು, ಕಳೆದ ವಾರವೂ ಒಬ್ಬರು ಅವಿವಾಹಿತ ಮಹಿಳೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಬಸ್‌ಗಳು ಸಾವಕಾಶವಾಗಿ ತಿರುಗಲು ಅವಕಾಶ ಕಡಿಮೆಯಾಗಿದೆ ಎಂದು ಬಸ್ ಚಾಲಕರು, ಸ್ಥಳೀಯ ಅಟೋ ಚಾಲಕರು ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಮನವಿ: ಖಾಸಗಿ ಬಸ್ ಚಾಲಕ-ಮಾಲೀಕರ ಸಂಘದವರು ವಿದ್ಯಾರ್ಥಿನಿಯ ಚಿಕಿತ್ಸೆ ವೆಚ್ಚಕ್ಕೆ ಸ್ಪಂದಿಸುವ, ವಿಮೆ ಪರಿಹಾರ ನೀಡುವ ಬಗ್ಗೆ ಮೌಖಿಕ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂತೆಗೆದು ಕೊಂಡರು. ಆದರೆ ಮಾತಿಗೆ ತಪ್ಪಿದರೆ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಟ್ಲ ಗ್ರಾಪಂ ಮತ್ತು ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ಬೇಡಿಕೆ ಈಡೇರಿಕೆ ಭರವಸೆ: ಖಾಸಗಿ ಬಸ್ ಮಾಲೀಕ-ಚಾಲಕರ ಪರವಾಗಿ ಮಾತನಾಡಿದ ಅರುಣ್ ವಿಟ್ಲ, ವಿದ್ಯಾರ್ಥಿನಿಗಾದ ಸಂಕಷ್ಟಕ್ಕೆ ನಾವೆಲ್ಲರೂ ಮಾನವೀಯತೆಯಿಂದ ಸ್ಪಂದಿಸುತ್ತೇವೆ. ಆಕೆಯ ಚಿಕಿತ್ಸೆ ವೆಚ್ಚವನ್ನು ಭರಿಸುವ ಬಗ್ಗೆ ಬಸ್ ಮಾಲೀಕರಲ್ಲಿ ಈಗಾಗಲೇ ಮಾತುಕತೆ ನಡೆಸಿದ್ದೇವೆ. ವಿಮಾ ಪರಿಹಾರಕ್ಕೆ ಸಿಗುವ ಎಲ್ಲ ರೀತಿಯ ಕ್ರಮಗಳಿಗೂ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.
ವಿಟ್ಲ ಖಾಸಗಿ ಬಸ್ ನಿಲ್ದಾಣದ ವೃತ್ತವನ್ನು ವೈಜ್ಞಾನಿಕವಾಗಿ ಎಂಜಿನಿಯರ್ ಮೂಲಕ ನಿರ್ಮಿಸಲಾಗಿದೆ. ಅತಿ ವೇಗವಾಗಿ ಬಸ್‌ಗಳನ್ನು ನಿಲ್ದಾಣದೊಳಗೆ ನುಗ್ಗಿಸದಂತೆ ವೃತ್ತ ನಿರ್ಮಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಬಸ್ ಇಳಿಯುವಾಗ, ಅತ್ತಿತ್ತ ಚಲಿಸುತ್ತಿರುವಾಗ ಜಾಗರೂಕರಾಗಬೇಕಾಗಿದೆ. ಬಸ್ ಪೂರ್ತಿ ನಿಲುಗಡೆಯಾಗುವ ತನಕ ಬಸ್ಸನ್ನು ನೋಡಿಕೊಳ್ಳುವುದು ನಿರ್ವಾಹಕರ ಕರ್ತವ್ಯ ಹಾಗೂ ಜವಾಬ್ದಾರಿ. ಬಸ್ ನಿಲ್ದಾಣದ ರವಿವರ್ಮ ಕೃಷ್ಣರಾಜ ಅರಸು ವೃತ್ತದಿಂದಲೇ ತೊಂದರೆ ಆಗುವುದೇ ಸ್ಪಷ್ಟವಾದರೆ ಆ ಬಗ್ಗೆ ಗಮನ ಹರಿಸಲಾಗುವುದು. ಈ ಹಿಂದೆ ಹಲವು ಬಾರಿ ಎಲ್ಲ ವಾಹನಗಳ ನಿಲುಗಡೆ, ಸಮಯ ಪಾಲನೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ವ್ಯವಸ್ಥೆ ಮಾಡಿದ್ದಲ್ಲದೆ ವಾಹನ ನಿಲುಗಡೆ ಬಗ್ಗೆ ಫಲಕ ಅಳವಡಿಸಿಕೊಟ್ಟರೂ ಈ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ಆರಕ್ಷಕ ಇಲಾಖೆಗೆ ಈ ಬಗ್ಗೆ ಪಂಚಾಯಿತಿ ಬರಹ ಮೂಲಕ ನೀಡಿದೆ ಎಂದು ವಿಟ್ಲ ಗ್ರಾಪಂ ಅಧ್ಯಕ್ಷೆ ಭವಾನಿ ರೈ ಕೊಲ್ಯ ತಿಳಿಸಿದ್ದರು.