ಕನ್ನಡ ವಾರ್ತೆಗಳು

ಅಚ್ಲಾಡಿ : ಹಣಕ್ಕಾಗಿ ಸ್ನೇಹಿತನನ್ನೇ ಅಪಹರಣ ಪ್ರಕರಣ; 15 ದಿನ ಕಳೆದರೂ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ  ಪೊಲೀಸ್ ಇಲಾಖೆ ವಿಫಲ

Pinterest LinkedIn Tumblr
youth_Assults_Partner (4)
ಉಡುಪಿ: ಹಣಕ್ಕಾಗಿ ಸ್ನೇಹಿತನನ್ನೆ  ಅಪಹರಿಸಿ, ಹಲ್ಲೆ  ನಡೆಸಿ, ಹಣ ವಸೂಲಿ ಮಾಡಿದ ಘಟನೆ ಜ. ೨೮ರಂದು ಕೋಟ ಸಮೀಪದ ಅಚ್ಲಾಡಿಯಲ್ಲಿ ನಡೆದಿತ್ತು.
ಸಿನಿಮೀಯ ಶೈಲಿಯಲ್ಲಿ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಹವಾಗಿತ್ತು ಹಾಗೂ ಆತಂಕ ಮೂಡಿಸಿತ್ತು. ಆದರೆ ಗಂಭೀರವಾದ ಈ ಪ್ರಕರಣವನ್ನು  ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಕಾರಣ ಘಟನೆ ನಡೆದು ಫೆ.12ಕ್ಕೆ  15 ದಿನಗಳು ಕಳೆದಿದೆ. ಆದರೂ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ  ಪೊಲೀಸ್ ಇಲಾಖೆ ವಿಫಲವಾಗಿದೆ.
ಈ ಕುರಿತು ವಿಚಾರಿಸಿದರೆ ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎನ್ನುವ ಭರವಸೆ ಮಾತ್ರ ಪೊಲೀಸರಿಂದ ಸಿಗುತ್ತಿದೆ. ಇದೀಗ ಪ್ರಕರಣದ ಪ್ರಮುಖ ಆರೋಪಿ ಸುಧಿರ್ ಶೆಟ್ಟಿ ಹೊರತುಪಡಿಸಿ ಇತರ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ಲಭಿಸಿದ್ದು, ಬಂಧನದ ನಿರೀಕ್ಷೆ ಹುಸಿಯಾಗತೋಡಗಿದೆ.
youth_Assults_Partner (2)
ಘಟನೆ  ವಿವರ : ಅಚ್ಲಾಡಿ ನಿವಾಸಿ ರಾಜೇಶ್ ಶೆಟ್ಟಿ  ಹಾಗೂ ಇತನ ಸ್ನೇಹಿತ, ಸಂಬಂಧಿ ಬಸ್ರೂರಿನ ನಿವಾಸಿ ಸುಧಿರ್ ಶೆಟ್ಟಿ  ಜಂಟಿ ಪಾಲುದಾರಿಕೆಯಲ್ಲಿ  ಮೆಡಿಕಲ್ ಎಜೆನ್ಸಿಯೊಂದನ್ನು  ನಡೆಸಿದ್ದು, ವ್ಯವಹಾರದಲ್ಲಿ  ಸುಮಾರು 1.5 ಲಕ್ಷಕ್ಕೂ ಅಧಿಕ ನಷ್ಟವಾಗಿತ್ತು. ನಷ್ಟದ ಹಣದಲ್ಲಿ  50 ಸಾವಿರವವನ್ನು ನೀಡುವಂತೆ ಸುಧಿರ್ ಶೆಟ್ಟಿ, ರಾಜೇಶ್ ಶೆಟ್ಟಿಯನ್ನು ಒತ್ತಾಯಿಸುತ್ತಿದ್ದ.  ಒತ್ತಾಯಕ್ಕೆ ಮಣಿದು ಸ್ವಲ್ಪ ಹಣ ಹಿಂದುರುಗಿಸಿ ಮತ್ತುಳಿದ ಹಣ ಸಂದಾಯಕ್ಕೆ  ಸಮಯಾವಕಾಶ  ಕೇಳಿದ್ದ. ಹಣ ನೀಡುವುದು ತಡವಾಯಿತು ಎನ್ನುವ ಕಾರಣಕ್ಕೆ ಜ.28 ರಂದು ಸಂಜೆ ಮಾರುತಿ ಓಮ್ನಿ ಕಾರಿನಲ್ಲಿ  ಸುಧಿರ ಶೆಟ್ಟಿ  ಹಾಗೂ ಆತನ ಆರು ಮಂದಿ ತಂಡ ಅಚ್ಲಾಡಿಯ ಕ್ರೀಡಾಂಗಣದ ಸಮೀಪದಿಂದ ರಾಜೇಶ್ ಶೆಟ್ಟಿಯನ್ನು ಅಪಹರಿಸಿ, 50 ಸಾವಿರ ಹಣ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಅನಂತರ ರಾಜೇಶ್ ಶೆಟ್ಟಿಯ ಸ್ನೇಹಿತರು 50 ಸಾವಿರ ಹಣ ನೀಡಿದ್ದು, ಈ ನಡುವೆ ತಂಡ ರಾಜೇಶ್‌ಗೆ ಮಾರಣಾಂತಿಕ ಹಲ್ಲೆ  ನಡೆಸಿ, ಜೀವ ಬೆದರಿಕೆಯೊಡ್ಡಿ  ಕಾಡು ದಾರಿಯಲ್ಲಿ  ಆತನನ್ನು ಬಿಟ್ಟು ಪರಾರಿಯಾಗಿತ್ತು.
ಸಾರ್ವಜನಿಕ ವಲಯದಲ್ಲಿ ಆಕ್ರೋಶ :  ಗಂಭೀರವಾದ ಈ ಪ್ರಕರಣವನು ಸಾಮಾನ್ಯವಾಗಿ ಪರಿಗಣಿಸಲಾಗಿದೆ ಎನ್ನುವ ಆಕ್ಷೇಪ ಸಾರ್ವಜನಿಕ ವಲಯದಲ್ಲಿದೆ.ಉನ್ನತ ತಂತ್ರಜ್ಞಾನಗಳನ್ನು  ಬಳಸಿ,ಅಪರಾಧ ಪತ್ತೆಯಲ್ಲಿ  ನಿಪುಣರ ತಂಡ ರಚಿಸಿಕೊಂಡು ಪೊಲೀಸರು ಕಾರ್‍ಯ ಪ್ರವೃತ್ತರಾಗಬೇಕಿತ್ತು ಎನ್ನುವುದು ಸಾರ್ವಜನಿಕರ ಆಕ್ರೋಶದ ನುಡಿ.
ಆತಂಕದಲ್ಲಿ  ಯುವಕನ ಕುಟುಂಬ : ಅಪಹರಣದ ಸಂದರ್ಭ, ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದಲ್ಲಿ  ಜಾಮೀನಿನ ಮೇಲೆ ಕೆಲವೇ ದಿನಗಳಲ್ಲಿ  ಬಿಡುಗಡೆಯಾಗಿ, ನಿನನ್ನು  ಜೀವಂತ ಉಳಿಸುವುದಿಲ್ಲ  ಎಂದು ಅಪಹರಣಕಾರರು ಬೆದರಿಕೆ ಹಾಕದ್ದರು ಎನ್ನಲಾಗಿದ್ದು, ಪ್ರಮುಖ ಆರೋಪಿಗಳ ಬಂಧನವಾಗದ ಕಾರಣ ಮುಂದೆ ಎನಾಗಬಹುದು ಎನ್ನುವ ಆತಂಕದಲ್ಲಿ  ಯುವಕನ ಕುಟುಂಬವಿದೆ.
ಉಡುಪಿ ಜಿಲ್ಲಾ   ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ಕಾಳಜಿವಹಿಸಿ, ಪ್ರಮುಖ ಆರೋಪಿಯನ್ನು ಬಂಧಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

Write A Comment