ಕುಂದಾಪುರ: ಇಲ್ಲಿನ ಭಂಡಾಕಾರ್‍ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದ ಆಶ್ರಯದಲ್ಲಿ ಒಂದು ದಿನದ ಬುಡಕಟ್ಟು ಹಾಗೂ ಜನಪದ ಸಂಸ್ಕೃತಿಯ ಅನಾವರಣ ಕಾರ್ಯಕ್ರಮವು ಫೆಬ್ರುವರಿ 16 ರಂದು ಕಾಲೇಜಿನಲ್ಲಿ ನಡೆಯಲಿದೆ.
ಬುಡಕಟ್ಟು ಜನಾಂಗಗಳು ನಮ್ಮ ಸಂಸ್ಕೃತಿಯ ಬಹುದೊಡ್ಡ ಆಸ್ತಿ. ವಿಭಿನ್ನ ಆಚರಣೆಗಳು ಮತ್ತು ವಿಚಾರಗಳ ಆಕರ. ಆದರೆ ಆಧುನಿಕ ಪ್ರಪಂಚದ ನಾವಿನ್ಯತೆಯ ಸುಳಿಯಲ್ಲಿ ಬುಡಕಟ್ಟು ಜನಾಂಗಗಳ ಸಂಸ್ಕೃತಿಯ ವೈಶಿಷ್ಟ್ಯಪೂರ್ಣತೆಯನ್ನು ನೋಡುವುದೇ ಅಪರೂಪವಾಗಿದೆ. ಅಲ್ಲದೇ ಬುಡಕಟ್ಟು ಜನಾಂಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಯುವಜನತೆಗೆ ಬುಡಕಟ್ಟು ಜನಾಂಗದ ಬಗ್ಗೆ ಮೂಡಿಸುವುದು ಮತ್ತು ಅವರ ವಿಶಿಷ್ಠ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರಸ್ತುತದ ಅಗತ್ಯಗಳಲ್ಲಿ ಒಂದಾಗಿದೆ.
ಈ ನಿಟ್ಟಿನಲ್ಲಿ ಉಡುಪಿ ಉತ್ತರಕನ್ನಡ ಜಿಲ್ಲೆಗಳಲ್ಲಿರುವ ಬುಡಕಟ್ಟು ಜನಾಂಗದವರ ಸಂಸ್ಕೃತಿಯ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಿಧ ಬುಡಕಟ್ಟು ಜನಾಂಗಗಳ ಆಚಾರ -ವಿಚಾರಗಳ ಪರಿಚಯ, ನೃತ್ಯಪ್ರಕಾರಗಳ ಪ್ರದರ್ಶನ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವನ್ನು ಈ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನೃತ್ಯ ವೈಭವ: ಗಣೇಶ ಅವರ ನೇತೃತ್ವದಲ್ಲಿ ಕೊರಗ ಆದಿವಾಸಿ ಸಮಾಜದ ಸಾಂಸ್ಕೃತಿಕ ವೈಭವ, ಸೋಮಯ್ಯ ಗೊಂಡ ಬೈಂದೂರು ಅವರ ನೇತೃತ್ವದಲ್ಲಿ ಗೊಂಡ ಸಮುದಾಯದ ಸಾಂಸ್ಕೃತಿಕ ಕಾರ್ಯಕ್ರಮ, ಸಿದ್ದಿ ಬುಡಕಟ್ಟು ಕಲಾವಿದರ ತಂಡ ಯಲ್ಲಾಪುರ ಇವರಿಂದ ಡಮಾಮ ಕುಣಿತ, ಪುಗಡಿ ನೃತ್ಯ, ಮತ್ತು ಜಾನಪದ ಹಾಡುಗಳು, ನಾಗರಾಜ ಪಾಣಾರ ಮತ್ತು ಸಂಗಡಿಗರು ವಾಲ್ತೂರು ಇವರಿಂದ ಪಾಣಾರ ನೃತ್ಯ, ಡಕ್ಕೆ ಬಲಿ, ನಾರಾಯಣ ಮರಾಠಿ ನಾಗರಮಕ್ಕಿ ಇವರ ನೇತೃತ್ವದಲ್ಲಿ ಮರಾಠಿ ನಾಯ್ಕರ ಗುಮ್ಟೆ ಕುಣಿತ, ಕೋಲಾಟ, ಚಂದ್ರ ನಾಯ್ಕ ನೇತೃತ್ವದ ಮಲ್ಲಕಾರ್ಜುನ ಕುಡುಬಿ ಹೋಳಿ ಜನಪದ ಕಲಾ ಸಂಘದಿಂದ ಹೋಳಿ ಜಾನಪದ ನೃತ್ಯ, ಅಂಕೋಲದ ಹಾಲಕ್ಕಿ ಬುಡಕಟ್ಟು ಸಮುದಾಯದಿಂದ ಸುಗ್ಗಿ ಕುಣಿತ ಜಾನಪದ ನೃತ್ಯ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್. ಶಾಂತಾರಾಮ್ ವಹಿಸಲಿದ್ದಾರೆ. ಕುಂದಾಪುರ ಉಪವಿಭಾಗದ ಉಪವಿಭಾಗಾಧಿಕಾರಿಗಳಾದ ಚಾರುಲತಾ ಸೋಮಲ್, ಐ.ಎ.ಎಸ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಗಂಗಾಧರ ದೈವಜ್ಞ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಯುವ ಉದ್ಯಮಿ ಕಾರ್ತಿಕೇಯ ಮಧ್ಯದ್ಥ, ಅತಿಥಿಯಾಗಿ ಆಗಮಿಸುವರು. ಭಂಡಾರ್ಕಾರ್‍ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಮತ್ತು ಕುಮದಾಪುರದ ಸ್ಪೂರ್ತಿಧಾಮದ ಕೇಶವ ಕೋಟೆಶ್ವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.