ಕನ್ನಡ ವಾರ್ತೆಗಳು

ನೈಸ್ ಹಗರಣ : ಯೋಜನೆ ಕಡತ ಸುಟ್ಟಿಲ್ಲ, ನಾಪತ್ತೆ

Pinterest LinkedIn Tumblr

nice_logo_photo

ಬೆಂಗಳೂರು,ಫೆ,11  : ನೈಸ್ ಯೋಜನೆಗೆ ಸಂಬಂಧಿಸಿದ ಯಾವುದೇ ಕಡತಗಳನ್ನು ಸುಟ್ಟು ಹಾಕಿಲ್ಲ. ಆದರೆ 39 ಕಡತಗಳು ನಾಪತ್ತೆಯಾಗಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಉತ್ತರ ನೀಡಿದ್ದಾರೆ.

ನೈಸ್ ಹಗರಣ ಮುಚ್ಚಿ ಹಾಕಲು ಕಡತಗಳನ್ನು ಸುಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಉತ್ತರ ನೀಡಲು ಕಾಲಾವಕಾಶ ಕೇಳಿದ್ದ ಸರಕಾರ ನಾಲ್ಕು ದಿನಗಳ ಬಳಿಕ ಲಿಖಿತ ಉತ್ತರ ನೀಡಿದ್ದು, ಅದರಲ್ಲಿ ಲೋಕೋಪಯೋಗಿ ಇಲಾಖೆಯ 139 ಕಡತಗಳು ನಾಪತ್ತೆಯಾಗಿವೆ. ಅದರಲ್ಲಿ ನೈಸ್ ಯೋಜನೆಗೆ ಸಂಬಂಧಿಸಿದ 39 ಕಡತಗಳು ನಾಪತ್ತೆಯಾಗಿವೆ. ಈ ಸಂಬಂಧ ಎಂಟು ಮಂದಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ,” ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

”ಸಚಿವಾಲಯದ ಕೈಪಿಡಿಯನ್ವಯ ನಾಲ್ಕು ವರ್ಗಗಳಲ್ಲಿ ಕಡತಗಳನ್ನು ಮುಕ್ತಾಯಗೊಳಿಸಬಹುದಾಗಿದೆ. ಇದರಲ್ಲಿ ‘ಎ’ ವರ್ಗದ ಕಡತಗಳು ಶಾಶ್ವತ ಕಡತಗಳಾಗಿರುತ್ತವೆ. ‘ಬಿ’ವರ್ಗದ ಕಡತಗಳನ್ನು 30 ವರ್ಷಗಳ ನಂತರ ಹಾಗೂ ‘ಸಿ’ವರ್ಗದ ಕಡತಗಳನ್ನು 10 ವರ್ಷಗಳ ನಂತರ ಹಾಗೂ ಅಂಥ ಮಹತ್ವವಲ್ಲದ ತಾತ್ಕಾಲಿಕವಾದ ‘ಡಿ’ ವರ್ಗದ ಕಡತಗಳನ್ನು ಒಂದು ವರ್ಷದ ಬಳಿಕ ನಾಶಗೊಳಿಸಲಾಗುತ್ತದೆ. ಇದರಲ್ಲಿ ‘ಎ’ ವರ್ಗದ 20 ಕಡತಗಳು ನಾಪತ್ತೆಯಾಗಿದ್ದು, ಅವುಗಳಲ್ಲಿ ನೈಸ್ ಯೋಜನೆಗೆ ಸಂಬಂಧಿಸಿದ ಎಂಟು ಮಹತ್ವದ ಕಡತಗಳು ಕಾಣೆಯಾಗಿವೆ,” ಎಂದು ಸಚಿವರು ಉತ್ತರ ನೀಡಿದ್ದಾರೆ.

”ಯೋಜನೆಗೆ ಸಂಬಂಧ ಫ್ರೇಮ್ ವರ್ಕ್ ಕರಾರು ಕಡತ, ಯೋಜನಾ ತಾಂತ್ರಿಕ ವರದಿಯನ್ನು ಅನುಮೋದಿಸಿದ ಸಂಬಂಧ ಸಚಿವ ಸಂಪುಟ ನಿರ್ಧಾರದ ಕಡತ, ಮೂಲ ಫ್ರೇಮ್ ವರ್ಕ ಅಗ್ರಿಮೆಂಟ್ ಹಾಗೂ ಇತರೆ ಕರಾರುಗಳ ಮೂಲ ಪ್ರತಿಗಳು, ಒಪ್ಪಂದದ ಮೂಲ ಪ್ರತಿ, ಯೋಜನೆಗೆ ಅವಶ್ಯ ಇರುವ ಜಮೀನುಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಗ್ರಾಮಗಳ ಸರ್ವೆ ನಂಬರ್‌ಗಳ ಪ್ರತಿಗಳು ಹಾಗೂ ಮುಖ್ಯ ಕಡತಗಳು ಲಭ್ಯವಿವೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಪ್ರತಿಗಳು, ದಾಖಲೆಗಳು ಲಭ್ಯವಿದ್ದು, ಅವುಗಳನ್ನು ಸದನ ಸಮಿತಿಗೆ ಒದಗಿಸಲಾಗಿದೆ,” ಎಂದು ತಿಳಿಸಿದ್ದಾರೆ.

”ಕಡತ ನಾಪತ್ತೆ ಪ್ರಕರಣ ಸಂಬಂಧ ಈ ಹಿಂದೆ ಯೋಜನಾ ಸಮನ್ವಯಾಧಿಕಾರಿಗಳಾಗಿ ಕೆಲಸ ಮಾಡಿರುವ ಆರ್.ಬಸವರಾಜು, ಎ.ಕೆ.ಸೋಮಣ್ಣ, ಡಾ.ಕೆ.ಎನ್.ಚಂದ್ರಶೇಖರ್, ಎಂ.ಶಶಿಧರ್, ಟಿ.ಬಿ.ರೇಣುಕಾ ಪ್ರಸಾದ್, ಮಸೂದ್ ಷರೀಫ್, ಎಂ ದೇವಿಪ್ರಸಾದ್ ಹಾಗೂ ಕಿರಿಯ ಸಹಾಯಕರಾದ ಜಿ.ಆರ್.ಹೇಮಂತ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇದರಲ್ಲಿ ಎಂ.ಶಶಿಧರ್ ಅವರ ಮನೆ ವಿಳಾಸ ಪತ್ತೆಯಾಗಿಲ್ಲ. ನೋಟಿಸ್ ವಾಪಸ್ ಬಂದಿದೆ. ಅವರ ವಿಳಾಸ ಪತ್ತೆಗೆ ಪ್ರಯತ್ನ ಮುಂದುವರಿದಿದೆ,” ಎಂದು ಹೇಳಿದ್ದಾರೆ.

Write A Comment