ಕರಾವಳಿ

ಪೊಲೀಸರಿಗೆ ತಲೆನೋವಾಗಿದ್ದ ಭೂಗತ ಪಾತಕಿ ಬನ್ನಂಜೆರಾಜಾ ಬಂಧನ: ಮೊರೆಕೋದಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ಮೋಸ್ಟ್ ವಾಂಟೆಡ್ ಕ್ರಿಮಿನಲ್; ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಕರ್ನಾಟಕ ಪೊಲೀಸರು(ವಿಶೇಷ ವರದಿ)

Pinterest LinkedIn Tumblr

Bannanje111

ಬನ್ನಂಜೆ ರಾಜಾನ ಇತ್ತೀಚಿನ ಭಾವಚಿತ್ರ (ಕನ್ನಡಿಗವರ್ಲ್ಡ್ ವೆಬ್ ಸೈಟ್  ನಲ್ಲಿ ಮಾತ್ರ)

ಮಂಗಳೂರು, ಫೆ.11: ಭಾರತ ಸೇರಿದಂತೆ ಗಲ್ಫ್ ರಾಷ್ಟ್ರಗಳ ಪೊಲೀಸರ ಹಿಟ್‌ಲೀಸ್ಟ್‌ನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಮೊರೆಕೋ ಪೊಲೀಸರು ಬಂಧಿಸಿದ್ದಾರೆ.

ಹಲವು ಕೊಲೆ, ಸುಲಿಗೆ, ಜೀವ ಬೆದರಿಕೆ, ಹಫ್ತಾವಸೂಲಿ ಸೇರಿದಂತೆ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವ ಮೂಲಕ ಪೊಲೀಸರಿಗೆ ತಲೆನೋವಾಗಿದ್ದ ಭೂಗತ ಪಾತಕಿ ಬನ್ನಂಜೆರಾಜಾನನ್ನು ಮೊರೆಕೋ ಪೊಲೀಸರು ಬಂಧಿಸಿದ್ದು, ಭಾರತದ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಮೊರೆಕೊಗೆ ತೆರಳಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಹೊನ್ನಾವರದ ಬಿಜೆಪಿ ಮುಖಂಡ ನಾಯಕ್‌ರ ಕೊಲೆ ಪ್ರಕರಣ ಸೇರಿದಂತೆ ಹತ್ತಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಬನ್ನಂಜೆರಾಜಾ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. 6 ಕೊಲೆ, ಕೊಲೆಯತ್ನ, ಸುಲಿಗೆ, ಜೀವ ಬೆದರಿಕೆ, ಹಫ್ತಾವಸೂಲಿ ಸೇರಿದಂತೆ ಒಟ್ಟು 46 ಪ್ರಕರಣಗಳು ಈತನ ಮೇಲಿದೆ.

arrest-Bannanje-raja-aid

ಹಳೆಯ  ಭಾವಚಿತ್ರ

ಮೋಸ್ಟ್ ವಾಂಟೆಡ್ ಆಗಿರುವ ರಾಜಾ, ವಿದೇಶಗಳಲ್ಲಿದ್ದುಕೊಂಡೇ ತನ್ನ ಭೂಗತ ಪಾತಕದ ಕೆಲಸ-ಕಾರ್ಯಗಳನ್ನು ಮಾಡಿಸುತ್ತಿದ್ದ. ಕಾರವಳಿ ಸೇರಿದಂತೆ ಹಲವು ಕಡೆಗಳಲ್ಲಿ ತನ್ನ ಸಹಚರರ ಮೂಲಕವೇ ಹಫ್ತಾವಸೂಲಿ ದಂಧೆ ನಡೆಸುತ್ತಿದ್ದ. ವರದಿಗಳ ಪ್ರಕಾರ, ಭಾರತದ ಗುಪ್ತಚರ ಇಲಾಖೆಯ ವಿಶೇಷ ತನಿಖಾ ತಂಡ ಮೊರಾಕೋದಲ್ಲಿರುವ ಕಸಬ್ಲಂಕದಲ್ಲಿ ಬನ್ನಂಜೆ ರಾಜಾನನ್ನು ಬಂಧಿಸಿದ್ದಾರೆ. ಮಾಹಿತಿ ಹೊರಡುತ್ತಿದ್ದಂತೆ ಬೆಂಗಳೂರಿನಲ್ಲಿ ಆತಂರಿಕ ಭದ್ರತಾ ವಿಭಾಗದ ಪೊಲೀಸರು ತುರ್ತು ಸಭೆ ನಡೆಸಿ ಬನ್ನಂಜೆ ರಾಜಾನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.

ಈತನ ವಿರುದ್ಧ ರೆಡ್ ಕಾರ್ನರ್ ನೋಟೀಸ್

ಇತ್ತೀಚೆಗೆ ಬನ್ನಂಜೆರಾಜಾ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ವಾಂಟೆಡ್ ಪಟ್ಟಿಯಲ್ಲಿದ್ದನು. ಈತನ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸಲಾಗಿತ್ತು. ಹಫ್ತಾ ವಸೂಲಿಗಾಗಿ ಉದ್ಯಮಿಗಳ ಬೆನ್ನಹಿಂದೆ ಬಿದ್ದಿದ್ದು, ಈ ಕುರಿತು ಹಲವು ಪ್ರಕರಣಗಳು ಕರಾವಳಿ ಭಾಗ ಸೇರಿದಂತೆ ಕರ್ನಾಟಕದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಉಡುಪಿ ಮೂಲದ ಬನ್ನಂಜೆ ರಾಜಾ, ಈ ಹಿಂದೆ ಯುಎಇಯಲ್ಲಿ ತನ್ನ ಭೂಗತ ಜಗತ್ತಿನ ವಹಿವಾಟುಗಳನ್ನು ನಡೆಸುತ್ತಿದ್ದ. ಈ ವೇಳೆ ಚೆಕ್‌ಬೌನ್ಸ್ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು, ಯುಎಇ ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆ ಪರಾರಿಯಾಗಿದ್ದ. ಅನಂತರ ಮೊರೊಕೋದಲ್ಲಿದ್ದುಕೊಂಡೇ ಭೂಗತ ಜಗತ್ತಿನ ಎಲ್ಲ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ.

ಉದ್ಯಮಿಯೊಬ್ಬರಿಗೆ ಹಣಕ್ಕಾಗಿ ಜೀವಬೆದರಿಕೆ

ಯುಎಇ ಸೇರಿದಂತೆ ಕರಾವಳಿ ಕರ್ನಾಟಕದ ಬಿಲ್ಡರ್‌ಗಳು, ಉದ್ಯಮಿಗಳಿಂದ ಹಫ್ತಾವಸೂಲಿಗೆ ಇಳಿದು ಜೀವ ಬೆದರಿಕೆಯನ್ನು ಒಡ್ಡಿದ್ದ. ಇದು ಕರಾವಳಿ ಭಾಗದ ಪೊಲೀಸರಿಗೆ ತೀವ್ರ ತಲೆನೋವನ್ನುಂಟು ಮಾಡಿತ್ತು. ಜೊತೆಗೆ ದುಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿರುವ ಕರಾವಳಿ ಭಾಗದ ಖ್ಯಾತ ಉದ್ಯಮಿಯೊಬ್ಬರಿಗೆ ಹಣಕ್ಕಾಗಿ ಜೀವಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

ರಾಜಾನ ಬೆದರಿಕೆಯ ಹಿನ್ನೆಲೆಯಲ್ಲಿ ಅವರು ರಕ್ಷಣೆಗಾಗಿ ಕೇಂದ್ರ ಸರಕಾರದ ಗೃಹ ಇಲಾಖೆಯ ಮೊರೆಹೋಗಿದ್ದು, ಕೇಂದ್ರ ಗೃಹ ಇಲಾಖೆ ಸ್ಪಂದಿಸಿದೆ. ಈ ಮೂಲಕ ಇಂಟರ್‌ಪೋಲ್ ಮೊರೆಕೋ ಪೊಲೀಸರ ಸಹಕಾರದೊಂದಿಗೆ ಬನ್ನಂಜರಾಜಾನನ್ನು ಬಂಧಿಸಿದೆ. ಮೊರೆಕೋದಲ್ಲಿದ್ದುಕೊಂಡೇ ತನ್ನ ಸಹಚರರ ಮೂಲಕ ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಹಫ್ತಾವಸೂಲಿ ದಂಧೆ ನಡೆಸುತ್ತಿದ್ದ ಬನ್ನಂಜೆರಾಜಾ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ಪೊಲೀಸರಿಗೆ ಬೇಕಾಗಿದ್ದ. ಕರಾವಳಿ ಭಾಗದ ಪೊಲೀಸರು ಈತನ ಬಹಳಷ್ಟು ಸಹಚರರನ್ನು ಹಫ್ತಾವಸೂಲಿ, ಜೀವ ಬೆದರಿಕೆಯೊಡ್ಡಿದ ಆರೋಪದ ಮೇಲೆ ಬಂಧಿಸಿ ಜೈಲಿಗಟ್ಟಿದ್ದಾರೆ.

ಗಂಭೀರವಾದ ಹೆಜ್ಜೆಯನ್ನಿಟ್ಟ ಕೇಂದ್ರದ ಗೃಹ ಖಾತೆ

ಈತನ ಹಫ್ತಾವಸೂಲಿ ದಂಧೆ ಹೆಚ್ಚಾಗುತ್ತಿದ್ದಂತೆ ಉದ್ಯಮಿಗಳು ರಕ್ಷಣೆಗಾಗಿ ಭಾರತದ ಕೇಂದ್ರ ಸರಕಾರದ ಮೊರೆಹೋಗಿದ್ದು, ಕೇಂದ್ರದ ಗೃಹ ಖಾತೆ ಭೂಗತ ಪಾತಕಿಗಳ ಕುರಿತು ಗಂಭೀರವಾದ ಹೆಜ್ಜೆಯನ್ನಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೊರೆಕೋ ಪೊಲೀಸರೊಂದಿಗೆ ಬನ್ನಂಜೆ ರಾಜಾ ಬಂಧನಕ್ಕೆ ಸಹಕಾರವನ್ನುಕೋರಿತ್ತು ಎನ್ನಲಾಗಿದೆ.

ಭಾರತದ ಇಂಟರ್‌ಪೋಲ್ ಮೊರೆಕೋ ಪೊಲೀಸರ ಸಹಾಯದಿಂದ ಬನ್ನಂಜೆರಾಜಾನನ್ನು ಬಂಧಿಸಿದೆ. ದಿಲ್ಲಿಯ ಇಂಟರ್‌ಪೋಲ್ ತಂಡವೊಂದು ಮೊರೆಕೋಗೆ ತೆರಳಿ ರಾಜಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ಪೊಲೀಸರಿಗೆ ಬನ್ನಂಜೆರಾಜಾ ಬೇಕಾಗಿರುವುದರಿಂದ ಆತನ ವಿರುದ್ಧವಿರುವ ಎಲ್ಲ ಪ್ರಕರಣಗಳನ್ನು ಕಲೆಹಾಕಿದ್ದು, ಪ್ರಕರಣದ ಎಲ್ಲ ದಾಖಲೆ, ಮಾಹಿತಿಗಳನ್ನಿಟ್ಟುಕೊಂಡು ಮೊರೆಕೋಗೆ ತೆರಳಲು ಸಿದ್ಧತೆ ನಡೆಸಿದೆ. ಒಂದೆರೆಡು ದಿನಗಳೊಳಗೆ ಕರ್ನಾಟಕ ಪೊಲೀಸರು ಬನ್ನಂಜೆರಾಜಾನನ್ನು ರಾಜ್ಯಕ್ಕೆ ಕರೆತರುವ ಸಾಧ್ಯತೆ ಇದೆ.

ಬನ್ನಂಜೆರಾಜಾ ಮೊರೆಕೋದಲ್ಲಿ ಹೇಮಂತ್‌ರಾಜ್ ಹೆಗ್ಡೆ

ಬನ್ನಂಜೆರಾಜಾ ಮೊರೆಕೋದಲ್ಲಿ ತನ್ನ ಹೆಸರನ್ನು ಹೇಮಂತ್‌ರಾಜ್ ಹೆಗ್ಡೆ ಎಂದು ಬದಲಿಸಿಕೊಂಡು ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಈತನ ಪತ್ನಿ ಸೋನಾ ಹೆಗ್ಡೆ ಹಾಗೂ ಇಬ್ಬರು ಮಕ್ಕಳು(ಒಬ್ಬಳು ಹೆಣ್ಣು-ಒಬ್ಬ ಮಗ) ದುಬೈಯಲ್ಲಿಯೇ ನೆಲೆಸಿದ್ದಾರೆ. ಬನ್ನಂಜೆರಾಜಾ ಮೊರೆಕೋದಲ್ಲಿ ತನ್ನ ಭೂಗತ ಚಟುವಟಿಕೆಗಳನ್ನು ಬದಲಿಸಿಕೊಂಡ ಬಳಿಕ ಕಳೆದ ಮೂರುವರೆ ವರ್ಷಗಳಲ್ಲಿ ಆತನ ಪತ್ನಿ ಮಕ್ಕಳು 7 ಬಾರಿ ಮೊರೆಕೋಗೆ ಹೇಗಿ ಬಂದಿದ್ದಾರೆ ಎನ್ನಲಾಗಿದೆ.

ಬನ್ನಂಜೆರಾಜಾನ ಬಂಧನದ ಸುದ್ದಿ ಹಬ್ಬುತ್ತಿದ್ದಂತೆ ಭೂಗತಪಾತಕಿಗಳಿಗೆ ನಡುಕ ಉಂಟಾಗಿದೆ. ಕೇಂದ್ರದ ಗೃಹ ಇಲಾಖೆ ಭೂಗತ ಪಾತಕಿಗಳ ವಿರುದ್ಧ ಕಾರ್ಯಾಚರಣೆಗಿಳಿದಿದ್ದು, ಉದ್ಯಮಗಳು ಸೇರಿದಂತೆ ಇನ್ನಿತರರಿಗೆ ಹಣಕ್ಕಾಗಿ ಬೆದರಿಕೆಯೊಡ್ಡುವ ಪಾತಕಿಗಳನ್ನು ಮಟ್ಟಹಾಕಲು ದಿಟ್ಟಹೆಜ್ಜೆ ಇಟ್ಟಿದೆ. ಇದರ ಮುಂದಿವರಿದ ಭಾಗವಾಗಿ ಇದೀಗ ಬನ್ನಂಜೆರಾಜಾನ ಬಂಧನವಾಗಿದೆ.

ಭೂಗತ ಪಾತಕಿಗಳು ಸೇರಿದಂತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರು ಉದ್ಯಮಿಗಳಿಗೆ ಹಣಕ್ಕಾಗಿ ಬೆದರಿಕೆಯೊಡ್ಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಕೇಂದ್ರ ಗೃಹ ಇಲಾಖೆ ಮುಂದಾಗಿದೆ.

1990ರಲ್ಲಿ ಅಪರಾಧ ಲೋಕಕ್ಕೆ ಕಾಲಿಟ್ಟ ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜಾ

ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜಾ 1990ರಲ್ಲಿ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದು, ಚೋಟಾರಾಜನ್ ಅವರಂತಹ ಭೂಗತ ಪಾತಕಿಗಳ ಗರಡಿಯಲ್ಲಿ ಪಳಗಿ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ಕುಖ್ಯಾತಿ ಗಳಿಸಿದ್ದಾನೆ. ಉಡುಪಿ, ಮಂಗಳೂರು, ಬೆಂಗಳೂರಿನಲ್ಲಷ್ಟೇ ಅಲ್ಲದೆ ಮುಂಬೈ, ನವದೆಹಲಿಯಲ್ಲೂ ಉದ್ಯಮಿಗಳು, ಬಿಲ್ಡರ್‌ಗಳು ಹಾಗೂ ಚಿತ್ರರಂಗದವರನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪ ಬನ್ನಂಜೆ ರಾಜಾನ ಮೇಲೆ ಇದೆ.

ಹಣ ಕೊಡದೇ ಇದ್ದವರನ್ನು ತನ್ನ ಗುಂಪಿನ ಸದಸ್ಯರ ಮೂಲಕ ಕೊಲ್ಲಿಸಿದ ಉದಾಹರಣೆಗಳೂ ಇವೆ. ವಿದೇಶಗಳಲ್ಲಿ ಕುಳಿತೇ ಭಾರತದ ಭೂಗತ ಲೋಕವನ್ನು ನಿಯಂತ್ರಿಸುವ ದಾವೂದ್ ಇಬ್ರಾಹಿಂನಂತೆ ಬನ್ನಂಜೆ ರಾಜಾ ಕೂಡ ಭೂಗತ ಲೋಕದ ಶಕ್ತಿ ಕೇಂದ್ರವಾಗಿದ್ದ. ಬನ್ನಂಜೆ ವಿರುದ್ಧ ಬೆಂಗಳೂರಿನಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಸೀನಾ ಎಂಬ ವ್ಯಕ್ತಿಯ ಹತ್ಯೆ, ಕಬ್ಬನ್‌ಪಾರ್ಕ್ ಹಾಗೂ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಪ್ರಕರಣಗಳು ದಾಖಲಾಗಿವೆ.

ಅವಿಭಜಿತ ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಸುಂದರ್‌ಶೆಟ್ಟಿಗಾರ್ ಮತ್ತು ವಿಲಾಸಿನಿ ದಂಪತಿಯ ಪುತ್ರನಾದ ಬನ್ನಂಜೆ ರಾಜಾ ಬಿಎ ಪದವೀಧರನಾಗಿದ್ದು, 1990ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುವಾಗ ತನ್ನ ವಿರೋಧಿ ಬಣದ ಸಹಪಾಠಿಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ರಾಜಾ ಕಾಲಿಟ್ಟಿದ್ದ.

ಆನಂತರ ಕೊಕ್ಕರಣೆ ಗ್ರಾಮದ ವಿಠ್ಠಲ್‌ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬನ್ನಂಜೆ ರಾಜಾ ಬಂಧನಕ್ಕೊಳಗಾಗಿದ್ದ. ಈ ಸಂದರ್ಭದಲ್ಲಿ ಮಹಿಳಾ ರಾಜಕಾರಣಿಯೊಬ್ಬರ ನೆರವಿನಿಂದ ಬನ್ನಂಜೆ ಪರಾರಿಯಾಗಿದ್ದ. ಉಡುಪಿಯ ಮಾಂಡೋವಿ ಮೋಟಾರ‌ಸ್ ನಲ್ಲಿ, ಆನಂತರ ಉಡುಪಿಯ ಬಸ್ ನಿಲ್ದಾಣದಲ್ಲಿ ಬಸ್ ಏಜೆಂಟ್‌ನಾಗಿ ಕೆಲಸ ಮಾಡಿ ನಂತರ ಅಪರಾಧ ಪ್ರಕರಣಗಳು ಹೆಚ್ಚಾದಾಗ ಬೆಂಗಳೂರಿಗೆ ಪರಾರಿಯಾಗಿದ್ದ. ಬೆಂಗಳೂರಿನಲ್ಲೂ ಬಸ್ ಏಜೆಂಟ್ ಆಗಿ ಕೆಲಸ ಮುಗಿಸಿ ಚೋಟಾರಾಜನ್ ಗುಂಪಿಗೆ ಕೆಲಸ ಮಾಡುತ್ತಿದ್ದವನು ಇದ್ದಕ್ಕಿದ್ದಂತೆ ಹೊರ ಬಂದು ತನ್ನದೇ ಪ್ರತ್ಯೇಕ ಗುಂಪನ್ನು ಕಟ್ಟಿಕೊಂಡಿದ್ದ. ಆನಂತರ ಭೂಗತ ಲೋಕದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಕುಖ್ಯಾತಿ ಗಳಿಸಿದ ಡಾನ್ ಎಂದು ಹೆಸರಾಗಿದ್ದಾನೆ. ಬನ್ನೆಂಜೆಯನ್ನು ಹುಡುಕಲು ಇಂಟರ್‌ಪೋಲ್ ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸಿದ್ದರು. ಆದರೆ, ಫಲ ನೀಡಿರಲಿಲ್ಲ. 2009ರಲ್ಲಿ ದುಬೈ ಪೊಲೀಸರು ಈತನನ್ನು ಬಂಧಿಸಿದ್ದರಾದರೂ ತಾಂತ್ರಿಕ ಕಾರಣಗಳಿಂದ ಭಾರತಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಅಂತಹ ತಪ್ಪು ಮಾಡದಿರಲು ಕರ್ನಾಟಕ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಇಂಟರ್‌ಪೋಲ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಶೀಘ್ರವೇ ಮೊರಾಕ್ಕೊಗೆ ಅಧಿಕಾರಿಗಳ ತಂಡ ತೆರಳಿ ಬನ್ನಂಜೆಯನ್ನು ವಶಕ್ಕೆ ತೆಗೆದುಕೊಳ್ಳಲಿದೆ.

Write A Comment