ಕನ್ನಡ ವಾರ್ತೆಗಳು

ದೇವಸ್ಥಾನ ಗ್ರಾಮಕ್ಕೆ ಶೋಭೆ – ಸಾರ್ಥಕತೆಯ ಮೋಕ್ಷಕ್ಕಾಗಿ ಭಕ್ತಿ ಅಗತ್ಯ: ಶ್ರೀಪಾದ ನಾಯಕ್

Pinterest LinkedIn Tumblr

kateel_temple_goldratha_1

ಮೂಲ್ಕಿ,ಫೆ.10 :ಶ್ರದ್ಧಾ ಮನಸ್ಸಿನಿಂದ ನೀಡುವ ಸೇವೆಯಲ್ಲಿ ಸ್ವಲಾಭವಿಲ್ಲದೆ ಸಮಾಜಕ್ಕಾಗಿ ಅರ್ಪಿಸಿದಲ್ಲಿ ದೇವರ ಅಭಯ ಹೆಚ್ಚು, ಭಕ್ತಿಯಿಂದ ನೀಡಿದ ಸೇವೆ ದೇವರಿಗೆ ನೀಡುವಾಗ ಪ್ರಲೋಭನೆಗೊಳಗಾಗಬಾರದು. ಒಂದು ಗ್ರಾಮದ ದೇವಸ್ಥಾನಕ್ಕೆ ಆ ಗ್ರಾಮದ ಶೋಭೆಯನ್ನು ಬೆಳಗಿಸುವ ಶಕ್ತಿ ಇದೆ ಎನ್ನುವುದಕ್ಕೆ ಕಟೀಲು ಪ್ರತ್ಯಕ್ಷ ಸಾಕ್ಷಿ ಆಗಿದ್ದು ಇಲ್ಲಿನ ಆದಾಯವನ್ನು ಶಿಕ್ಷಣ ಹಾಗೂ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದು ಕೇಂದ್ರದ ಆಯುಷ್ ಮತ್ತು ಆಯುರ್ವೇದ ಸಚಿವ ಶ್ರೀಪಾದ್ ಎಸ್.ಒ.ನಾಯಕ್ ಅಭಿಪ್ರಾಯಪಟ್ಟರು.

ಅವರು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಮೂಲಕುದ್ರುವಿನಲ್ಲಿ ನಿರ್ಮಾಣಗೊಂಡ ನೂತನ ಗರ್ಭಗುಡಿಯ ಸಮರ್ಪಣಾ ಕಾರ್ಯಕ್ರಮದಲ್ಲಿ ಸೋಮವಾರ ಸೇವಾರ್ಥಿ ಸತೀಶ್ ಶೆಟ್ಟಿ ಎರ್ಮಾಳ್‌ರನ್ನು ಸನ್ಮಾನಿಸಿ ಮಾತನಾಡಿದರು. ಸಂಸದ ನಳಿನ್‌ಕುಮಾರ್ ಕಟೀಲು ಅಧ್ಯಕ್ಷತೆಯನ್ನು ವಹಿಸಿದ್ದರು.

kateel_temple_goldratha_2

ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿ ಮಾತನಾಡಿ ಜೀವನದಲ್ಲಿ ಪಡೆಯುವ ಸಂಪತ್ತು ವೈಭೋಗಕ್ಕೆ ಪಡೆಯದೇ ಧಾರ್ಮಿಕತೆಯ ಮೂಲಕ ವಿನೊಯೋಗಿಸಿದಲ್ಲಿ ಜೀವನ ಪೂರ್ತಿ ಶಾಂತಿ ನೆಮ್ಮದಿ ಕಾಣಬಹುದು ಎಂದರು. ಕದ್ರಿ ನವನೀತ ಶೆಟ್ಟಿ ರಚಿಸಿರುವ ಕಟೀಲದಪ್ಪೆ ಉಳ್ಳಾಲ್ದಿ ತುಳು ನಾಟಕದ ಕನ್ನಡ ಅನುವಾದದ ಶ್ರೀ ಭ್ರಮರಾಂಬಿಕಾ ವಿಲಾಸ ಕೃತಿಯನ್ನು ಅನಾವರಣಗೊಳಿಸಲಾಯಿತು. ಸ್ವರ್ಣ ರಥ ನಿರ್ಮಾಣ ಯೋಜನೆಯಲ್ಲಿ ಶ್ರಮಿಸಿದ ಕಳತ್ತೂರು ರಾಘವೇಂದ್ರ ಭಟ್, ಹರೀಶ್ ಶೆಟ್ಟಿ ಎಕ್ಕಾರು, ಮೂಲ ಕುದ್ರು ದೇಗುಲ ನಿರ್ಮಾಣದ ವಾಸ್ತು ಶಿಲ್ಪಿ ಸುಬ್ರಮಣ್ಯ ಅವಧಾನಿ, ವಿಷ್ಣು ಮೂರ್ತಿ ಭಟ್, ಕದ್ರಿ ನವನೀತ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಒಡಿಯೂರು ಗುರುದೇವಾನಂದ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಯೋಗಾನಂದ ಸರಸ್ವತೀ ಸ್ವಾಮೀಜಿ, ಕಟೀಲಿನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ.ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮುಂಬೈ ಉದ್ಯಮಿಗಳಾದ ಜೆ.ಸಿ ಕುಮಾರ್ ಕಟೀಲು, ಅತ್ತೂರು ಹೊಸಲೊಟ್ಟು ಬಾಬು ಎನ್.ಶೆಟ್ಟಿ, ವಾಮಯ್ಯ ಬಿ.ಶೆಟ್ಟಿ, ಬೋಳ್ನಾಡುಗುತ್ತು ಚಂದ್ರಹಾಸ್ ರೈ, ಪದ್ಮನಾಭ ಪಯ್ಯಡೆ, ಕರುಣಾಕರ ಡಿ.ಶೆಟ್ಟಿ, ಗಂಗಾಧರ್ ಅಮೀನ್, ಬಜ್ಪೆ ಪಿ.ರಾಘವೇಂದ್ರ ಆಚಾರ್ಯ, ಮಂಗಳೂರಿನ ಸುಷ್ಮಾ ಎಂ. ಮಲ್ಲಿ, ಕದ್ರಿ ಗೋಪಾಲನಾಥ ಹಾಜರಿದ್ದರು. ಶಿಕ್ಷಕ ಸಾಯಿನಾಥ ಶೆಟ್ಟಿ ನಿರೂಪಿಸಿದರು.

ವರದಿ : ನರೇಂದ್ರ ಕೆರೆಕಾಡು.

Write A Comment