ಕನ್ನಡ ವಾರ್ತೆಗಳು

ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಅಮಾನತು

Pinterest LinkedIn Tumblr

kmf_new_charman

ಬೆಂಗಳೂರು, ಫೆ.5 : ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ಕೆಎಂಎಫ್‌ನ ಅಧ್ಯಕ್ಷ ಪಿ.ನಾಗರಾಜ್ ಅವರನ್ನು 2 ವರ್ಷಗಳ ಅವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ನಾಗರಾಜ್ ಅವರು ಸೆಪ್ಟೆಂಬರ್‌ನಲ್ಲಿ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅನುಮತಿ ಇಲ್ಲದೆ ಪ್ರವಾಸ, ವಾಹನ ಖರೀದಿ, ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮುಂತಾದ ಆರೋಪಗಳ ಹಿನ್ನಲೆಯಲ್ಲಿ ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿದೆ. ಸಹಕಾರ ಸಂಘಗಳ ನಿಬಂಧಕರು ವಿಚಾರಣೆ ನಡೆಸಿ ಈ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದರು.

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮೊದಲು ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಅವರ ಹೆಸರು ಹೇಳಿಬಂದಿತ್ತು. ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಪಿ.ನಾಗರಾಜ್ ಅವರು ಕೆಎಂಎಫ್ ಅಧ್ಯಕ್ಷರಾಗಲು ಸಹಕಾರ ನೀಡಿದ್ದರು. ಸದ್ಯ, ಅವರನ್ನು ಅಮಾನತು ಮಾಡಿರುವುದು ಅಚ್ಚರಿ ಉಂಟುಮಾಡಿದೆ.
ಸಹಕಾರ ಸಚಿವರ ಹೇಳಿಕೆ : ‘ಕಾನೂನೂ ಮೀರಿ ನಡೆದುಕೊಂಡರೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ನಾಗರಾಜ್ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಹೇಳಿದ್ದಾರೆ. ‘ನಾಗರಾಜ್ ಅವರ ವಿರುದ್ಧ ದೂರು ಬಂದಿತ್ತು. ಈ ಕುರಿತು ಉತ್ತರ ನೀಡುವಂತೆ ಅವರಿಗೆ ನೋಟಿಸ್ ಸಹ ಜಾರಿಗೊಳಿಸಲಾಗಿತ್ತು’ ಎಂದು ಸಚಿವರು ಹೇಳಿದ್ದಾರೆ.

‘ನಾಗರಾಜ್ ನೋಟಿಸ್‌ಗೆ ಸಮರ್ಪಕವಾದ ಉತ್ತರ ನೀಡಿಲ್ಲ. ಆದ್ದರಿಂದ ಸಹಕಾರ ಸಂಘಗಳ ರಿಜಿಸ್ಟ್ರಾರ್ ನಾಗರಾಜ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದು ಮಹದೇವಪ್ರಸಾದ್ ಹೇಳಿದ್ದಾರೆ. ಆಯ್ಕೆ ಕಗ್ಗಂಟು : ಕೆಎಂಎಫ್ ಚುನಾವಣೆ ಸಂದರ್ಭದಲ್ಲಿ ಮೊದಲ ಅವಧಿಗೆ ಎಂ.ಪಿ.ರವೀಂದ್ರ ಮತ್ತು ಎರಡನೇ ಅವಧಿಗೆ ಪಿ.ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ಸಚಿವ ಡಿ.ಕೆ.ಶಿವಕುಮಾರ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಮೊದಲ ಅವಧಿಗೆ ಪಿ.ನಾಗರಾಜ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಲ್ಲಿ ಸಫಲರಾಗಿದ್ದರು.

Write A Comment