ಕನ್ನಡ ವಾರ್ತೆಗಳು

ಮನೆಗೆ ನುಗ್ಗಿ ಯುವಕನ ಅಪಹರಣಗೈದು ಮಾರಣಾಂತಿಕ ಹಲ್ಲೆ; ಹಣದ ವ್ಯವಹಾರದ ಹಿನ್ನಲೆ ಘಟನೆ

Pinterest LinkedIn Tumblr

ಕುಂದಾಪುರ: ಪಾಲುದಾರಿಕೆಯಲ್ಲಿ ನಷ್ಟವಾಯಿತೆನ್ನುವ ಕಾರಣಕ್ಕೆ ಹಣ ನೀಡುವಂತೆ ಸತಾಯಿಸಿದ್ದ ಯುವಕನೋರ್ವ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಮಾರುತಿ ಓಮ್ನಿ ಕಾರಿನಲ್ಲಿ ಅಪಹರಿಸಿ ಎರಡು ಗಂಟೆಗಳ ಕಾಲ ಹಲ್ಲೆ ನಡೆಸಿ ಗಂಭೀರಗೊಂಡ ನಂತರ ರಸ್ತೆಯಲ್ಲಿಯೇ ಬಿಟ್ಟು ಹೋದ ಆಘಾತಕಾರಿ ಘಟನೆ ಬುಧವಾರ ರಾತ್ರಿ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ಅಚ್ಲಾಡಿಯ ನರಸಿಂಹ ಶೆಟ್ಟಿ ಎಂಬುವರ ಮಗ ರಾಜೇಶ್ ಶೆಟ್ಟಿ(25) ಎಂದು ಗುರುತಿಸಲಾಗಿದೆ.

youth_Assults_Partner youth_Assults_Partner (1) youth_Assults_Partner (2) youth_Assults_Partner (3) youth_Assults_Partner (4) youth_Assults_Partner (5) youth_Assults_Partner (6) youth_Assults_Partner (7) youth_Assults_Partner (8) youth_Assults_Partner (9) youth_Assults_Partner (10) youth_Assults_Partner (11) youth_Assults_Partner (12) youth_Assults_Partner (13) youth_Assults_Partner (14) youth_Assults_Partner (15) youth_Assults_Partner (16)

ಘಟನೆಯ ವಿವರ: ಅಚ್ಲಾಡಿಯ ರಾಜೇಶ್ ಶೆಟ್ಟಿ ಹಾಗೂ ಬಸ್ರೂರಿನ ಸುಧೀರ್ ಶೆಟ್ಟಿ (ದೂರ ಸಂಬಂಧದಲ್ಲಿ ಸಹೋದರರು) ಜೊತೆ ಪಾಲುದಾರಿಕೆಯಲ್ಲಿ ವರ್ಷಗಳ ಹಿಂದೆ ಮೆಡಿಕಲ್ ಶಾಪೊಂದನ್ನು ತೆರೆದಿದ್ದರೆನ್ನಲಾಗಿದೆ. ಆದರೆ ವ್ಯವಹಾರದಲ್ಲಿ ಸುಧೀರನಿಗೆ ನಷ್ಟವುಂಟಾಗಿತ್ತೆನ್ನಲಾಗಿದ್ದು, ಅದರಲ್ಲಿ ಐವತ್ತು ಸಾವಿರ ರೂಪಾಯಿಗಳನ್ನು ರಾಜೇಶ ಶೆಟ್ಟಿ ನೀಡಬೇಕು ಎಂದು ಒತ್ತಾಯಿಸಿದ್ದನೆನ್ನಲಾಗಿದೆ. ಆದರೆ ರಾಜೇಶ್ ಶೆಟ್ಟಿ ಇದನ್ನು ಕೊಡಲೊಪ್ಪದಿದ್ದಾಗ ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದನೆನ್ನಲಾಗಿದೆ. ಕಳೆದ ಐದಾರು ತಿಂಗಳಿಂದ ದೂರವಾಣಿಯಲ್ಲಿ ಇದೇ ರೀತಿಯ ಮಾತುಕತೆ ನಡೆಯುತ್ತಲೇ ಬಂದಿದ್ದು, ರಾಜೇಶನೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲವೆನ್ನಲಾಗಿದೆ.

ಬುಧವಾರ ಸಂಜೆ ಸುಮಾರು ಐದೂವರೆ ಗಂಟೆಗೆ ಕೆ‌ಎ ೨೦ ಡಿ ೨೦೪೩ ನೋಂದಣಿಯ ಮಾರುತಿ ಓಮ್ನಿ ಕಾರಿನಲ್ಲಿ ಸುಧೀರ ಶೆಟ್ಟಿ ಹಾಗೂ ಇತರ ಆರು ಜನ ಅಪರಿಚಿತ ಯುವಕರ ತಂಡ ರಾಜೇಶ್ ಶೆಟ್ಟಿ ಮನೆಗೆ ನುಗ್ಗಿ ರಾಜೇಶನನ್ನು ಬಲಾತ್ಕಾರವಾಗಿ ಎಳೆದೊಯ್ದಿದ್ದಾರೆ. ಜೊತೆಗೆ ಆತನ ಬೈಕನ್ನು ಹೊತ್ತೊಯ್ದಿದ್ದಾರೆ. ಈ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ರಾಜೇಶ ಎಲ್ಲೋ ಹೊರಗೆ ಹೋಗಿರಬೇಕು ಎಂದು ಎಲ್ಲರೂ ಭಾವಿಸಿದ್ದರೆನ್ನಲಾಗಿದೆ. ಸ್ಥಳೀಯ ಕೆಲ ಯುವಕರು ಕಾರು ಬಂದಿದ್ದನ್ನು ಗಮನಿಸಿದ್ದರೂ ಅಪಹರಣವಾಗಿದೆ ಎನ್ನುವುದು ತಿಳಿಯದೇ ಇದ್ದ ಕಾರಣ ಯುವಕರು ಯಾರಿಗೂ ಹೇಳಿರಲಿಲ್ಲ.

ಹಣ ದೋಚಿ ಹಲ್ಲೆ ನಡೆಸಿದರು: ರಾಜೇಶನ್ನು ಎತ್ತಿಹಾಕಿಕೊಂಡು ಬಂದ ಸುಧೀರ್ ಶೆಟ್ಟಿ ಮತ್ತು ತಂಡ ಬಸ್ರೂರು, ಬಿ.ಹೆಚ್, ಹೇರಿಕೆರೆ ಮೊದಲಾದೆಡೆಗಳಲ್ಲಿ ಸುತ್ತಾಡಿಸುತ್ತಲೇ ಹಲ್ಲೆ ನಡೆಸಿದ್ದಾರೆ. ಆತನ ಬಳಿಯಿದ್ದ ಬಂಗಾರದ ಚೈನನ್ನು ಕಿತ್ತುಕೊಂಡಿದ್ದು, ನಂತರ ರಾಜೇಶನ ಮೊಬೈಲ್‌ನಿಂದಲೇ ಆತನ ಸ್ನೇಹಿತರಿಗೆ ಕರೆ ಮಾಡಿಸಿ ಐವತ್ತು ಸಾವಿರ ತರುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಇದ್ದಲ್ಲಿ ಹಾಗೂ ಪೊಲೀಸರಿಗಾಗಲೀ ಅಥವಾ ಇನ್ಯಾರಿಗೇ ಆಗಲೀ ಸುದ್ಧಿ ತಿಳಿಸಿದಲ್ಲಿ ಕೊಲೆ ಮಾಡುವುದಾಗಿಯೂ ಬೆದರಿಕೆ ಆಹಕಿದ್ದಾರೆ. ತಕ್ಷಣ ರಾಜೇಶನ ಸ್ನೇಹಿತ ಐವತ್ತು ಸಾವಿರ ರೂಪಾಯಿಗಳನ್ನು ರಾತ್ರಿ ಸುಮಾರು ಒಂಭತ್ತು ಗಂಟೆಗೆ ಅಪಹರಣಕಾರರು ಹೇಳಿದ ಜಾಗವಾದ ಜಪ್ತಿಗೆ ತೆಗೆದುಕೊಂಡು ಹೋಗಿ ಇಟ್ಟಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ರಾಜೇಶನ ತಲೆಗೆ ಹಲ್ಲೆ ನಡೆಸಿದ ತಂಡ ಆತನ ತಲೆಯ ಒಳಭಾಗಕ್ಕೆ ಗಂಭೀರ ಗಾಯಮಾಡಿದ್ದಾರೆ.

ನಂತರ ಹಣ, ಹಾಗೂ ರಾಜೇಶನ ಬಳಿ ಇದ್ದ ಚಿನ್ನದ ಸರವನ್ನು ಕಿತ್ತೊಯ್ದ ತಂಡ ಆತನನ್ನು ಹುಣ್ಸೆಮಕ್ಕಿ ಹತ್ತಿರ ಆತನ ಬೈಕ್ ಸಮೀಪ ನಿಲ್ಲಿಸಿ ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ರಾಜೇಶನನ್ನು ಆತನ ಸ್ನೇಹಿತರು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದು, ಆ ಸಂದರ್ಭ ಆತ ವಾಂತಿ ಮಾಡಿಕೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.

Write A Comment