ಕನ್ನಡ ವಾರ್ತೆಗಳು

ಡಿಸಿಪಿ ವಿಷ್ಣುವರ್ಧನ್ ಅಧ್ಯಕ್ಷತೆಯಲ್ಲಿ ಮಾಸಿಕ ಎಸ್ಸಿ-ಎಸ್ಟಿ ಸಭೆ

Pinterest LinkedIn Tumblr

sc_st_monthlymeet_1

ಮಂಗಳೂರು, ಜ.26: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಡಿಸಿಪಿ ವಿಷ್ಣುವರ್ಧನ್ ಅಧ್ಯಕ್ಷತೆಯಲ್ಲಿ ರವಿವಾರ ಜರಗಿದ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ಆಯುಕ್ತಾಲಯ ವ್ಯಾಪ್ತಿಯ ದಲಿತ ಸಮುದಾಯದವರು ತಮ್ಮ ಅಹವಾಲುಗಳನ್ನು ತೋಡಿಕೊಂಡರು.

ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಯುವತಿಯೊಬ್ಬಳ ಮೇಲೆ ಅಲ್ಲಿನ ವೈದ್ಯರೊಬ್ಬರು ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಜರಗಿಸಿಲ್ಲ ಎಂದು ದಲಿತ ಮುಖಂಡ ನಾರಾಯಣ ಪುಂಚಮೆ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತ ತಿಲಕಚಂದ್ರ ‘ಜ.11ರಂದು ಈ ಘಟನೆ ನಡೆದಿದೆ ಎಂದು ಯುವತಿ ಜ.23ಕ್ಕೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಲಾಗಿದ್ದು, ತನಿಖೆ ನಡೆಸಿ ಕ್ರಮ ಜರಗಿಸಲಾಗುವುದು’ ಎಂದರು.

sc_st_monthlymeet_2

ತನ್ನ ಮನೆಯ ನೀರಿನ ಟ್ಯಾಂಕ್‌ಗೆ ಮಾಂಸದ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಕಳೆದೊಂದು ವರ್ಷದಿಂದ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಾ ಬಂದ ಕೊಣಾಜೆಯ ಸುಮಿತ್ರಾ ರವಿವಾರ ನಡೆದ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿ ವಸ್ತುಶ: ಅತ್ತು ಬಿಟ್ಟರು. ತಾವು ಇನ್ನೊಮ್ಮೆ ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಜರಗಿಸುವೆ ಎಂದು ಡಿಸಿಪಿ ವಿಷ್ಣುವರ್ಧನ್ ಮಾಡಿದ ಮನವಿಗೆ ಸ್ಪಂದಿಸಿದ ಸುಮಿತ್ರಾ ಕೊನೆಗೂ ಲಿಖಿತ ಮನವಿ ಸಲ್ಲಿಸಿದರು.

sc_st_monthlymeet_3

ಸರಕಾರಿ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲಿ ರೋಗಿಗಳು ಮೃತಪಟ್ಟ ತಕ್ಷಣ ವಾರಸುದಾರರಿಗೆ ಕಾಲಾವಕಾಶ ಕೊಡದೆ ಮೃತದೇಹಗಳನ್ನು ಶವಾಗಾರದಲ್ಲಿಡಲಾಗುತ್ತದೆ. ಆ ಬಳಿಕ ಅಲ್ಲಿಂದ ಶವವನ್ನು ತೆಗೆದುಕೊಂಡು ಹೋಗಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಅನಕ್ಷರಸ್ಥರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಶಿವಪ್ಪ ಅಟ್ಟೋಳೆ ಒತ್ತಾಯಿಸಿದರು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಮಾಸಿಕ ಎಸ್ಸಿ-ಎಸ್ಟಿ ಸಭೆ ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ನಡೆದರೂ ಆ ಸಭೆಯನ್ನು ದಲಿತೇತರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಕೇಶ್ ಆರೋಪಿಸಿದರು. ಆದರೆ ಈ ಆರೋಪವನ್ನು ಗ್ರಾಮಾಂತರ ಠಾಣಾ ನಿರೀಕ್ಷಕರು ನಿರಾಕರಿಸಿದರು.
ಈ ಎಲ್ಲಾ ಮನವಿಗಳನ್ನು ಆಲಿಸಿದ ಡಿಸಿಪಿ ವಿಷ್ಣುವರ್ಧನ್ ಸೂಕ್ತ ಕ್ರಮ ಜರಗಿಸುವ ಭರವಸೆ ನೀಡಿದರು.

Write A Comment