ಕನ್ನಡ ವಾರ್ತೆಗಳು

ಮುಲ್ಕಿ ಕೋಮು ಘರ್ಷಣೆ – ಪೊಲೀಸರಿಂದ ಪಕ್ಷಪಾತ ಧೋರಣೆ ಆರೋಪ : ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ

Pinterest LinkedIn Tumblr

Mulki_Bjp_Protest

ಮೂಲ್ಕಿ: ಮುಲ್ಕಿಯ ಕೆ.ಎಸ್.ರಾವ್ ನಗರದಲ್ಲಿ ಗುರುವಾರ ರಾತ್ರಿ ನಡೆದ ಎರಡು ತಂಡಗಳ ಹೊಡೆದಾಟದಲ್ಲಿ ಪೊಲೀಸರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು ಬಿಜೆಪಿ ನಾಯಕರು ಕಾರ್ಯಕರ್ತರೊಂದಿಗೆ ಮೂಲ್ಕಿ ಪೊಲೀಸ್ ಠಾಣೆಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ ಪ್ರಸ್ತುತ ಘಟನೆಯಲ್ಲಿ ಹಲ್ಲೆಗೊಳಗಾದವರ ಮೇಲೇಯೇ ಕೊಲೆಯತ್ನ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವುದು ಖಂಡನೀಯ ಅಮಾಯಕ ಯುವಕರ ಮೇಲೆ ಹಲ್ಲೆ ನಡೆಸಿದ ತಂಡವು ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದರು ಪೊಲೀಸರು ಮಾತ್ರ ಮೃದು ಧೋರಣೆ ತಳೆದಿರುವುದು ಸಂಶಯಕ್ಕೆ ಕಾರಣವಾಗಿದೆ. ಹಲ್ಲೆ ನಡೆಸಿದ ತಂಡದಲ್ಲಿ ಸುಮಾರು 20 ಮಂದಿ ಇದ್ದರು ಕೇವಲ ನಾಲ್ವರನ್ನು ಬಂಧಿಸಿದ್ದಾರೆ. ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುವಂತೆ ಮಾಡಿರುವುದಲ್ಲದೆ, ಇನ್ನುಳಿದವರನ್ನು ಶೀಘ್ರವಾಗಿ ಬಂಧಿಸಬೇಕು, ಪ್ರಕರಣದ ತನಿಖೆಯನ್ನು ಮರುಪರಿಶೀಲಿಸಬೇಕು ಇಲ್ಲದಿದ್ದಲ್ಲಿ ಮೂಲ್ಕಿ ಬಂದ್ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರ ಮನವಿಯನ್ನು ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಸ್ವೀಕರಿಸಿ ಪ್ರಕರಣದ ಬಗ್ಗೆ ಮರು ಪರಿಶೀಲಿಸಲಾಗುವುದು, ಪ್ರಕರಣದಲ್ಲಿನ ಇನ್ನುಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.

ಬಿಜೆಪಿಯ ನಾಯಕರುಗಳಾದ ಸುಚರಿತ ಶೆಟ್ಟಿ, ಕೆ ಭುವನಾಭಿರಾಮ ಉಡುಪ, ಸತೀಶ್ ಅಂಚನ್, ಸುನೀಲ್ ಆಳ್ವ, ಸುದರ್ಶನ್, ಈಶ್ವರ್ ಕಟೀಲು, ಶೈಲೇಶ್, ದೇವ ಪ್ರಸಾದ್ ಪುನರೂರು, ಕಸ್ತೂರಿ ಪಂಜ, ರಂಗನಾಥ ಶೆಟ್ಟಿ, ವಿನೋದ್ ಬೊಳ್ಳುರು, ಮೋಹನ್ ಕುಬೆವೂರು ಇನ್ನಿತರರು ಉಪಸ್ಥಿತರಿದ್ದರು.

_ನರೇಂದ್ರ ಕೆರೆಕಾಡು

Write A Comment