ಮೂಲ್ಕಿ: ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್.ನಗರದಲ್ಲಿ ವಯುಕ್ತಿಕ ಕಾರಣಕ್ಕಾಗಿ ಎರಡು ತಂಡದ ನಡುವೆ ನಡೆದ ಗುಂಪು ಹಲ್ಲೆಯಿಂದ ಪರಿಸರದಲ್ಲಿ ಎರಡು ಕೋಮಿನ ನಡುವೆ ಪ್ರಕ್ಷಬ್ದ ವಾತಾವರಣ ಕದಡಿದ್ದು ಗುಂಪು ಘರ್ಷಣೆಯಲ್ಲಿ ತೊಡಗಿದ್ದ ಎರಡೂ ತಂಡದ ಒಟ್ಟು 6 ಮಂದಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ರಾವ್.ನಗರದ ನಿವಾಸಿಗಳಾದ ಸಚಿನ್, ನಿತಿನ್, ಮಹಮ್ಮದ್ ನಿಯಾಜ್, ಇಮ್ರಾನ್, ರಜಾಕ್, ಮಹಮ್ಮದ್ ಅಫೀಜ್ರನ್ನು ಪೊಲೀಸರು ತಡರಾತ್ರಿಯೇ ಬಂಧಿಸಿದ್ದಾರೆ. ಇವರೆಲ್ಲರು ಪರಸ್ಪರ ಹಲ್ಲೆ ನಡೆಸಿಕೊಂಡು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಕೆ.ಎಸ್.ರಾವ್ ನಗರದ ನಿವಾಸಿಗಳಾದ ಸಚಿನ್ ಮತ್ತು ನಿತಿನ್ ಎಂಬವರು ಬೈಕ್ (ಕೆಎ೧೯ಯಿಎಚ್3140)ರಲ್ಲಿ ಮನೆ ಕಡೆಗೆ ಬರುತ್ತಿದ್ದಾಗ ಸ್ಥಳೀಯ ನಿವಾಸಿಗಳಾದ ನಿಯಾಜ್ ಮತ್ತು ಫಯಾಜ್ ಎಂಬವರು ಸ್ಥಳೀಯ ಕೋರ್ದಬ್ಬು ದೈವಸ್ಥಾನದ ಮುಂಬಾಗದಲ್ಲಿ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದೇ ಈ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.
ಬೈಕ್ ತೆಗೆಯುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದದಿಂದ ನಿಂದಿಸಿಕೊಂಡು ಕೊನೆಗೆ ಎರಡೂ ತಂಡದವರು ಪರಸ್ಪರ ಹಲ್ಲೆ ನಡೆಸಿಕೊಂಡರಲ್ಲದೆ ಸುಮಾರು 20 ಜನರ ತಂಡವು ಮರದ ರೀಪು, ದೊಣ್ಣೆ ಮತ್ತು ಕಬ್ಬಿಣದ ರಾಡಿನೊಂದಿಗೆ ನಿತಿನ್ ಎಂಬವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿದರು ಎಂದು ದೂರಲಾಗಿದೆ.
ನಿತಿನ್ ಹಾಗೂ ಸಚಿನ್ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ಫಯಾಜ್ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ಈ ಘಟನೆ ನಡೆಯಲು ಹಳೆ ವೈಷಮ್ಯವೇ ಕಾರಣ ಎಂದು ತಿಳಿದು ಬಂದಿದ್ದು ಕೆಲ ತಿಂಗಳ ಹಿಂದೆ ನಡೆದ ಸಣ್ಣ ಜಗಳವೊಂದು ನಡೆದಿದ್ದು ಇದರ ದ್ವೇಷವನ್ನೇ ಇಟ್ಟುಕೊಂಡು ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದ ಸಚಿನ್ ಮತ್ತು ನಿತಿನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಹಮ್ಮದ್ ನಿಯಾಜ್, ಇಮ್ರಾನ್, ರಜಾಕ್, ಮಹಮ್ಮದ್ ಅಫೀಜ್ರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಘಟನಾ ಸ್ಥಳದಲ್ಲಿ ಮೂಲ್ಕಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಪರಿಸರದಲ್ಲಿ ಬಿಗು ವಾತಾವರಣ ಮೂಡಿರುವುದರಿಂದ ವಿಶೇಷ ಬಂದೋಬಸ್ತನ್ನು ಸಹ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
_ನರೇಂದ್ರ ಕೆರೆಕಾಡು




