ಕನ್ನಡ ವಾರ್ತೆಗಳು

ಜನವರಿ 24ರಿಂದ 26 : ಪುತ್ತೂರಿನಲ್ಲಿ “ಕ್ಯಾಂಪ್ಕೋ ಕೃಷಿಯಂತ್ರ ಮೇಳ – III -2015″|ಕೃಷಿಯಂತ್ರ ಮೇಳ ಹೊಸ ದಾಖಲೆ ನಿರ್ಮಿಸಲಿದೆ :ಕೊಂಕೋಡಿ

Pinterest LinkedIn Tumblr

Campco_Krisi_yantra_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಜ.22: ಕ್ಯಾಂಪ್ಕೋ ಅಡಿಕೆ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ (ರಿ.) ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮತ್ತು ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇವುಗಳ ಸಹಯೋಗದಲ್ಲಿ “ಕೃಷಿಯಂತ್ರ ಮೇಳ – III -2015” ಜನವರಿ 24ರಿಂದ 26ರವರೆಗೆ ಮೂರು ದಿನಗಳ ಕಾಲ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಆವರಣದಲ್ಲಿ ನಡೆಯಲಿದ್ದು, ಭರದ ಸಿದ್ದತೆಯೊಂದಿಗೆ ಕಾಮಗಾರಿಗಳು ಅಂತಿಮ ಹಂತದಲ್ಲಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ತಿಳಿಸಿದ್ದಾರೆ.

ಗುರುವಾರ ಸಂಸ್ಥೆಯ ಮಂಗಳೂರಿನ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯಲಿರುವ ಈ ಕೃಷಿಯಂತ್ರ ಮೇಳದ ಉದ್ಘಾಟನಾ ಸಮಾರಂಭ ಜನವರಿ 24ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾದ ಸತೀಶ್ ಮರಾಠೆ ಅವರು ಸಹಕಾರಿ ಧ್ವಜಾರೋಹಣ ನೆರವೇರಿಸಲಿರುವರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಮುಖ್ಯಮಂತ್ರಿ, ಕೇಂದ್ರದ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಪ್ರದರ್ಶಿನಿ ಮಳಿಗೆಗಳನ್ನು ಉದ್ಘಾಟಿಸಲಿರುವರು. ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಅನಂತ್ ಕುಮಾರ್ ಅವರು “ಕೃಷಿಯಂತ್ರ ಮೇಳವನ್ನು ಉದ್ಘಾಟಿಸಲಿರುವರು.

ಗೌರವಾನ್ವಿತ ಅತಿಥಿಗಳಾಗಿ ಸಚಿವರಾದ ಜಿ.ಎಂ.ಸಿದ್ದೇಶ್ವರ್, ಶಾಮನೂರು ಶಿವಶಂಕರಪ್ಪ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್ ಮುಂತಾದವರು ಭಾಗವಹಿಸಲಿರುವರು. ಗೌರವಾನ್ವಿತ ಅಧಿಕಾರಿಗಳಾದ ಡಾ.ಎಸ್.ಅಯ್ಯಪ್ಪನ್ – ಸೆಕ್ರೆಟರಿ ( ಡಿಎಆರ್‌ಇ) ಮತ್ತು ಡೈರೆಕ್ಟರ್ ಜನರಲ್ (ಐಸಿಎಆರ್), ನವದೆಹಲಿ, ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೆನಿ ಉಪಸ್ಥಿತರಿರುವರು ಎಂದು ತಿಳಿಸಿದರು.

Campco_Krisi_yantra_2

ಮಧ್ಯಾಹ್ನ 2ಗಂಟೆಯಿಂದ “ಕಿಸಾನ್ ಸಂಸತ್” ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಸಂಸದರುಗಳಾದ ನಳಿನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗ್ಡೆ, ಕರುಣಾಕರನ್ ಪಿ, ಶೋಭಾ ಕರಂದ್ಲಾಜೆ, ಮುದ್ದಹನುಮೇ ಗೌಡ, ಪ್ರತಾಪ್ ಸಿಂಹ, ಚಂದ್ರಪ್ಪ ಮುಂತಾದವರು ಅತಿಥಿಗಳಾಗಿರುವರು.

ಸಂಜೆ 4.30ರಿಂದ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಬಳಿಕ 6ರಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾ ಸಂಸ್ಥೆಗಳಿಂದ “ಸಾಂಸ್ಕೃತಿಕ ವೈಭವ” ಜರಗಲಿರುವುದು ಎಂದು ವಿವರಿಸಿದರು.

ದಿನಾಂಕ 26-01-2015ರ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ವಹಿಸಲಿರುವರು.ಗೌರವಾನ್ವಿತ ಅತಿಥಿಗಳಾಗಿ ಅರಣ್ಯ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕೇರಳ ಸರಕಾರದ ಕೃಷಿ ಸಚಿವರು ಹಾಗೂ ಪಶುಸಂಗೋಪನಾ ಸಚಿವರಾದ ಕೆ.ಪಿ.ಮೋಹನ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮುಂತಾದವರು ಭಾಗವಹಿಸಲಿರುವರು.

ಕ್ಯಾಂಪ್ಕೋ ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ.ಎಂ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಇದರ ಅಧ್ಯಕ್ಷ ಬಲರಾಮ ಆಚಾರ್ಯ, ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಅಧ್ಯಕ್ಷ ಪ್ರೋ| ಎ.ವಿ.ನಾರಾಯಣ, ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಇ.ಶಿವಪ್ರಸಾದ್, ಎ.ಆರ್.ಡಿ.ಎಫ್ ಮಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ಡಾ| ಎಸ್. ಕೇಶವ ಭಟ್ ಮುಂತಾದವರು ಉಪಸ್ಥಿತರಿರುವರು ಎಂದು ಕೊಂಕೋಡಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕೃಷಿಯಂತ್ರ ಮೇಳದಲ್ಲಿ ಪ್ರತೀ ದಿನಾ ತೆಂಗಿನಿಂದ ನೀರಾ ತಯಾರಿ, ಸೌರ ಶಕ್ತಿ, ಕಾಡು ಪ್ರಾಣಿಗಳ ನಿಯಂತ್ರಣ ಮುಂತಾದ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಮಾತ್ರವಲ್ಲದೇ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಇಂದ್ರಜಾಲ ಪ್ರದರ್ಶನಗಳೂ ನಡೆಯಲಿದೆ ಎಂದು ಕೊಂಕೋಡಿ ಹೇಳಿದರು.

Campco_Krisi_yantra_3

ಕೃಷಿ ಮೇಳದ ವೈಶಿಷ್ಟತೆಗಳು :

240 ಮಳಿಗೆಗಳು ಕೂಡಾ ಭರ್ತಿಯಾಗಿದ್ದು ಇನ್ನೂ ಮಳಿಗೆಗಳಿಗೆ ಬೇಡಿಕೆಗಳು ಬರುತ್ತಿದ್ದು ಸುಮಾರು 1.5 ಕಿ.ಮೀ. ನಷ್ಟು ವ್ಯಾಪ್ತಿಯನ್ನು ಹೊಂದಿದೆ.

*ಸುಮಾರು ನಾಲ್ಕು ಲಕ್ಷ ಕೃಷಿಕರ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿರುವ ಈ ಕೃಷಿಯಂತ್ರ ಮೇಳಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಜಿಲ್ಲೆಗಳಿಂದ ಸುಮಾರು 1.5 ಲಕ್ಷ ಜನ ಕೃಷಿಕರು ಭಾಗವಹಿಸಲು ಸಿದ್ಧತೆ ನಡೆದಿದೆ.

*ರಾಜ್ಯದ ಟಿ.ಎಸ್.ಎಸ್., ಮ್ಯಾಮ್ಕೋಸ್, ತುಮ್ಕೋಸ್ ನಂತಹ ಹಲವಾರು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳು ವಿಶೇಷವಾಗಿ ಕೃಷಿಕರನ್ನು ಯಂತ್ರ ಮೇಳಕ್ಕೆ ಕರೆತರುವ ಯೋಜನೆ ಹಾಕಿದ್ದಾರೆ.

*ಕ್ಯಾಂಪ್ಕೋದ ಮಂಗಳೂರು, ಪುತ್ತೂರು, ಕಾಸರಗೋಡು, ಶಿವಮೊಗ್ಗ, ಶಿರಸಿ ಮತ್ತು ತುಮಕೂರು ಪ್ರಾದೇಶಿಕ ಕಛೇರಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಖೆಗಳಿಂದ ರೈತರ ಸಂಪರ್ಕವಾಗಿದ್ದು ಬಹಳ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳವ ಆಶಯ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದರು.

Campco_Krisi_yantra_4

ವಿಶೇಷತೆ :

*ಕೊಯಂಬತ್ತೂರಿನ ಕೇಂದ್ರೀಯ ಕೃಷಿ ಇಂಜಿನಿಯರಿಂಗ್, ಹಾಸನ ಕೃಷಿ ಇಲಾಖೆ, ತ್ರಿಶೂರು ಕೃಷಿ ಇಲಾಖೆ ತಮ್ಮಲ್ಲಿರುವ ವಿಶೇಷ ಯಂತ್ರಗಳನ್ನು ಪ್ರದರ್ಶಿಸುತ್ತಿವೆ.    *ವಾರಾಣಾಸಿ ಸುಬ್ರಾಯ ಭಟ್ ಪ್ರಶಸ್ತಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸುಮಾರು 45 ಯಂತ್ರೋಪಕರಣಗಳ ಪ್ರದರ್ಶನ.     *ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಉಪಸ್ಥಿತಿಯಲ್ಲಿ ಕಿಸಾನ್ ಸಂಸತ್.    ಅನುಭವಿ ತಜ್ಞರಿಂದ ಸೌರಶಕ್ತಿ, ತೆಂಗಿನಿಂದ ನೀರಾ ತಯಾರಿ, ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ವಿಚಾರ ಸಂಕಿರಣ.  *ಸುಬ್ರಾಯ ಭಟ್‌ರ ಭಾವಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ.     *ವಿವಿಧ ಯಂತ್ರಗಳ ಮಾಹಿತಿ ಇರುವ ಡೈರೆಕ್ಟರಿ ಬಿಡುಗಡೆ.     *ಪತ್ರಿಕೋಧ್ಯಮ ವಿದ್ಯಾರ್ಥಿಗಳಿಂದ ವಿಕಸನ ಪತ್ರಿಕೆ ಬಿಡುಗಡೆ.    *ದಿನಂಪ್ರತಿ ಯಂತ್ರಮೇಳಕ್ಕೆ ಆಗಮಿಸುವ ಕೃಷಿಕರಿಗೆ ಕ್ಯಾಂಪ್ಕೋ ಚಾಕೋಲೇಟ್ ಕಾರ್ಖಾನೆ ವೀಕ್ಷಿಸುವ ಸದವಕಾಶ.      *ಆಹಾರ ಪದಾರ್ಥಗಳಿಗೆ ಪ್ರತ್ಯೇಕ ಪುಡ್ ಕೋರ್ಟ್.     *ಸಾಂಸ್ಕೃತಿಕ ವೈಭವ ಮತ್ತು ಇಂದ್ರಜಾಲ ಪ್ರದರ್ಶನ ಕಾರ್ಯಕ್ರಮ.    *ಸುಮಾರು 10ಕ್ಕೂ ಮಿಕ್ಕಿ ವಿವಿಧ ಮಾದರಿಯ ಮರಹತ್ತುವ ಯಂತ್ರಗಳ ಪ್ರದರ್ಶನ, ಸುಮಾರು 20ಕ್ಕೂ ಮಿಕ್ಕಿ ಸುದಾರಿತ ಅಡಿಕೆ ಸುಲಿಯುವ ಯಂತ್ರಗಳು, ಕೈಗಾಡಿಗಳು, ಮೋಟೋ ಕಾರ್ಟ್‌ಗಳು. *ಪ್ರಸಿದ್ದ ವಿದೇಶಿ ಕಂಪೆನಿಗಳ ಪರವಾಗಿ ಅದರ ವಿತರಕರಿಂದ ಅಂತರಾಷ್ಟ್ರೀಯ ಗುಣಮಟ್ಟದ ಯಂತ್ರಗಳ ಪ್ರದರ್ಶನ. *ಕೃಷಿಕ ಸಂಶೋಧಕರಿಂದ ತಾವೇ ತಯಾರಿಸಿದ ಯಂತ್ರೋಪಕರಣಗಳ ಪ್ರದರ್ಶನ. *ತೋಟದೊಳಗೆ ಮಣ್ಣು ಅಗೆಯುವ ಸಣ್ಣ ಸಣ್ಣ ಸಾಧನಗಳ ಪ್ರದರ್ಶನ. *ಮಂಗಳೂರು ಆಕಾಶವಾಣಿಯಲ್ಲಿ ಮೂರುದಿನಗಳ ಕಾಲ ಕಾರ್ಯಕ್ರಮಗಳ ನೇರಪ್ರಸಾರ. *ಕ್ಯಾಂಪ್ಕೋ ಸಂಸ್ಥೆಯು ತಯಾರಿಸಿದ ಜಪಾನ ಮಾದರಿಯ ಮರ ಹತ್ತುವ ಸಾಧನದ ಪ್ರದರ್ಶನ.

ವಿಶೇಷ ರಿಯಾಯಿತಿ :ಯಂತ್ರಮೇಳ ವೀಕ್ಷಿಸಲು ಬರುವ ಎಲ್ಲರಿಗೂ ಕ್ಯಾಂಪ್ಕೋ ಚಾಕೋಲೇಟ್‌ಗಳನ್ನು ಶೇಕಡಾ 40 ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ | ರೂ.10/- ಸರಳ ಗಂಜಿ ಊಟದ ವ್ಯೆವಸ್ಥೆ | ಅಡಿಕೆ ಕೊಳೆರೋಗಕ್ಕೆ ಹೊಸ ಸಾವಯವ ಔಷದ ಸಂಶೋಧನೆ ಮಾಡಿದ ಡಾ.ಭಾಮೀ ಸಿ. ಶೆಣೈ ಅವರಿಗೆ ಕ್ಯಾಂಪ್ಕೋದಿಂದ ಸಹಕಾರ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

Write A Comment