ಕನ್ನಡ ವಾರ್ತೆಗಳು

ಕರಾಯದ ಪ್ರದೇಶ ಗಾಯಾಳು ಜನತೆಗೆ ಜಿಲ್ಲಾಡಳಿತದಿಂದ ಚಿಕಿತ್ಸೆ

Pinterest LinkedIn Tumblr

 dc_visit_karaya

ಬೆಳ್ತಂಗಡಿ, ಜ.21  : ಪುತ್ತೂರಿನಲ್ಲಿ ಹಿಂದೂ ಹೃದಯ ಸಂಗಮ ಸಮಾವೇಶ ನಡೆದ ಬಳಿಕ ನಡೆದ ಅಹಿತಕರ ಘಟನೆಗಳಲ್ಲಿ ಗಾಯಗೊಂಡವರನ್ನು ಹಾಗೂ ನಷ್ಟ ಸಂಭವಿಸಿದ ಸ್ಥಳಗಳಿಗೆ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಭೇಟಿ ನೀಡಿ ಸಂತ್ರಸ್ತ ರೊಂದಿಗೆ ಮಾತುಕತೆ ನಡೆಸಿದರು.

ಕರಾಯದಲ್ಲಿ ಹಾನಿಗೊಳಗಾದ ಮಸೀದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪರಿಶೀಲಿಸಿದರು. ಬಳಿಕ ಅದರ ಮುಂಭಾಗದಲ್ಲಿರುವ ಹಾನಿಗೊಳಗಾದ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಭೇಟಿ ನೀಡಿದರು. ಸ್ಥಳೀಯ ಮುಖಂಡರುಗಳೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಬೆಳಗ್ಗೆ ಉಜಿರೆ ಬೆನಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕರಾಯ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿಯ ಸುಶಾಂತ್‌ನನ್ನು ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿದರು.

ಬಳಿಕ ಬೆಳ್ತಂಗಡಿ ಸಂತೆಕಟ್ಟೆ ಹಾಗೂ ಚರ್ಚ್ ರೋಡ್‌ನಲ್ಲಿ ದುಷ್ಕರ್ಮಿಗಳಿಂದ ಬೆಂಕಿ ಹಚ್ಚಲ್ಪಟ್ಟು ಹಾನಿಗೊಳಗಾದ ಅಂಗಡಿಗಳಿಗೆ ಭೇಟಿ ನೀಡಿ ಅದರ ಮಾಲಕರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ವಹಿಸಲಿದೆ. ಹಾನಿಗೊಳಗಾಗಿರುವ ಪ್ರಕರಣಗಳನ್ನು ಪರಿಶೀಲಿಸಿ ಬಳಿಕ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುವುದು. ನಿಷೇಧಾಜ್ಞೆ ಜಾರಿಯಲ್ಲಿದ್ದುದರಿಂದ ತಡವಾಗಿ ಘಟನಾ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಇಡೀ ಘಟನೆ ಪೂರ್ವ ಯೋಜಿತವಾದುದಲ್ಲ.

ಆ ಕ್ಷಣದ ಬೆಳವಣಿಗೆಯ ಹಿನ್ನೆಲೆಯಲ್ಲಿ ಇದು ಸಂಭವಿಸಿದೆ. ಇದೀಗ ಪರಿಸ್ಥಿತಿ ಶಾಂತಿಗೊಂಡಿದೆ. ಇನ್ನು ಮುಂದೆ ಸಂಜೆ 4 ಗಂಟೆಯ ಬಳಿಕ ಸಭಾ ಕಾರ್ಯಕ್ರಮಗಳಿಗೆ ಎಚ್ಚರಿಕೆ ವಹಿಸಲಾ ಗುವುದು. ಪೊಲೀಸ್ ಇಲಾಖೆ ಇಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಿದ್ದರೂ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿವೆ. ಕೇವಲ ಪೊಲೀಸರಿಂದ ಶಾಂತಿ ಕಾಪಾಡಲು ಸಾಧ್ಯವಿಲ್ಲ. ಜನರು ಸ್ವಯಂ ಪ್ರೇರಣೆಯಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ದ.ಕ. ಎಸ್ಪಿ ಡಾ.ಶರಣಪ್ಪ ಮಾತ ನಾಡಿ, ಕರಾಯದ ಅಹಿತಕರ ಘಟನೆಯ ಬಗ್ಗೆ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಯಾವುದೇ ಒತ್ತಡಗಳಿಗೆ ಮಣಿಯದೆ ಆರೋಪಿ ಗಳನ್ನು ಬಂಧಿಸುತ್ತೇವೆ. ಜನರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದರು.

ಜಿಲ್ಲಾಧಿಕಾರಿಯೊಂದಿಗೆ ಎಎಸ್ಪಿ ಶೇಖರಪ್ಪ, ಬೆಳ್ತಂಗಡಿ ತಹಶೀಲ್ದಾರ್ ಪುಟ್ಟ ಶೆಟ್ಟಿ, ಡಿವೈಎಸ್ಪಿ ಭಾಸ್ಕರ ರೈ, ಉಪ್ಪಿನಂಗಡಿ ಎಸ್ಸೈ ಜಗದೀಶ್ ರೆಡ್ಡಿ, ತಾ.ಪಂ. ಸದಸ್ಯ ಮಂಜುನಾಥ ಸಾಲ್ಯಾನ್, ಮಾಜಿ ಜಿ.ಪಂ. ಉಪಾಧ್ಯಕ್ಷ ನಿರಂಜನ್ ಬಾವಂತಬೆಟ್ಟು, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯ ಇಲ್ಯಾಸ್, ಕೆ.ಎಸ್.ಅಬ್ದುಲ್ಲಾ, ರತ್ನಾಕರ ಪೂಜಾರಿ, ಕರಾಯ ಮಸೀದಿ ಅಧ್ಯಕ್ಷ ಅಶ್ರಫ್ ಪಿದಮಲೆ, ಮುಸ್ತಫ ಕೆಂಪಿ ಉಪ್ಪಿನಂಗಡಿ, ಭಜನಾ ಮಂಡಳಿ ಕಾರ್ಯದರ್ಶಿ ರಾಜಶೇಖರ್ ರೈ, ಪ್ರಶಾಂತ್ ಪೈ ಬಾರ್ಯ ಮತ್ತಿತರರು ಇದ್ದರು.

Write A Comment