ಕನ್ನಡ ವಾರ್ತೆಗಳು

ಬಂಟ ಸಮಾಜದ ಕೆಳಸ್ತರದಲ್ಲಿರುವವರನ್ನುಗುರುತಿಸಿ: ಅಜಿತ್ ಕುಮಾರ್ ರೈ ಮಾಲಾಡಿ

Pinterest LinkedIn Tumblr

bunt_sanga_photo_1

ಮಂಗಳೂರು,ಜ.೨೦ : ಬಂಟ ಸಮಾಜದ ಕೆಳಸ್ತರದಲ್ಲಿರುವವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಕಾರ್ಯ ಬಂಟರ ಸಂಘಗಳಿಂದ ನಡೆಯಬೇಕು. ಕಡುಬಡತನದಲ್ಲಿರುವ ಕುಟುಂಬಗಳಿಗೆ ಮನೆಕಟ್ಟಿಸಿಕೊಡುವ ಮೂಲಕ ಸಮಾಜಪರವಾಗಿ ಕೈಗೊಳ್ಳುವ ಕಾರ್ಯ ಶ್ಲಾಘನೀಯ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ತಿಳಿಸಿದರು.
ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮನೆ ಹಸ್ತಾಂತರ ಮತ್ತು ಸಾಧಕರಿಗೆ ಗೌರವ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಂಟರ ಸಮಾಜ ಇತರ ಸಮಾಜದವರನ್ನು ಯಾವತ್ತೂ ಗೌರವದಿಂದ ಕಾಣುತ್ತದೆ. ಈ ನಿಟ್ಟಿನಲ್ಲಿ ಇತರ ಸಮಾಜದವರನ್ನು ಗೌರವಿಸುವುದು ಶ್ರೇಷ್ಠಕಾರ್ಯ. ಬಡವರ ಏಳಿಗೆಗೆ ಮತ್ತು ಸಂಕಷ್ಟಗಳಿಗೆ ಬಂಟರ ಮಾತೃ ಸಂಘ ಯಾವತ್ತೂ ಕೈ ಜೋಡಿಸಿ ಕೆಲಸ ಮಾಡುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಮತ್ತು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಸಮಾರಂಭದಲ್ಲಿ ಕಲಾವಿದರಾದ ಸಂಪಾಜೆ ಶೀನಪ್ಪ ರೈ, ದಿಲೀಪ್ ಸುವರ್ಣ, ನವಗಿರಿ ಗಣೇಶ್, ಮಹಮ್ಮದ್ ಇಕ್ಬಾಲ್ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

bunt_sanga_photo_2

ಸಮಾರಂಭದಲ್ಲಿ ಮುಂಬಾಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಇನ್ಸ್‌ಪೆಕ್ಟರ್ ದಿನಕರ ಶೆಟ್ಟಿ ಪಡ್ರೆ, ನಾಗರಿಕ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಉದ್ಯಮಿ ದೇವಾನಂದ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಆರ್ ಶೆಟ್ಟಿ, ಪದಾಧಿಕಾರಿಗಳಾದ ಸುಧಾಕರ ಪೂಂಜ, ದೇವೇಂದ್ರ ಶೆಟ್ಟಿ, ಸೀತಾರಾಮ ರೈ, ಪ್ರವೀಣ್ ಶೆಟ್ಟಿ, ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ವಿಜಯ ಭಾರತಿಶೆಟ್ಟಿ ಮತ್ತು ರಾಜೇಶ್ವರಿ ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜೈಮಾತಾ ಕಲಾತಂಡದಿಂದ ‘ನನದಾದ ಮಲ್ಪುನು’ ನಾಟಕ ಪ್ರದರ್ಶನಗೊಂಡಿತು.

ಬಂಟರ ಸಂಘದಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ಸುರತ್ಕಲ್ ಬಂಟರ ಸಂಘದ ವತಿಯಿಂದ ಕುಳಾಯಿಯ ಬಡ ಕುಟುಂವೊಂದಕ್ಕೆ ಮನೆ ಹಸ್ತಾಂತರಿಸ ಲಾಯಿತು. ಸುರತ್ಕಲ್ ಬಂಟರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಲಿ ಕೆಲಸ ಮಾಡುವ ಕುಳಾಯಿಯ ಚಂದ್ರಹಾಸ್ ಶೆಟ್ಟಿ ಕುಟುಂಬಕ್ಕೆ ಮನೆಯ ಬೀಗದ ಕೈ ಹಸ್ತಾಂತರ ನಡೆಯಿತು

ವರ್ಷಕ್ಕೊಂದು ಮನೆ ಕೊಡುಗೆ:
ಸಂಘದ ವತಿಯಿಂದ ಕಳೆದ ವರ್ಷ ಮುಂಚೂರು ನಿವಾಸಿ ಕಲ್ಯಾಣಿ ಶೆಡ್ತಿ ಅವರಿಗೆ ಮನೆ ನಿರ್ಮಿಸಿಕೊಟ್ಟಿದ್ದೇವೆ, ಮುಂದಿನ ವರ್ಷ ಬಾಳ ಒಟ್ಟೆಕಾಯೆರ್‌ನ ವಿಜಯಲಕ್ಷ್ಮೀ ಅವರಿಗೆ ಮನೆ ನಿರ್ಮಿಸಿಕೊಡುತ್ತೇವೆ. ಈ ವರ್ಷ ಸಂಘದ ವತಿಯಿಂದ 3 ಲಕ್ಷ ರೂ ವ್ಯಯಿಸಿ 4  ಕೋಣೆಗಳಿರುವ ಒಟ್ಟು 250 ಚದರ ಅಡಿಯ ನೂತನ ಮನೆ ನಿರ್ಮಿಸಿಕೊಡಲಾಗಿದೆ. ಪ್ರತಿವರ್ಷ ಸಂಘದ ವತಿಯಿಂದ ಸ್ಕಾಲರ್‌ಶಿಪ್ ವಿತರಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೆ ದಾನಿಗಳ ಮೂಲಕ ಹತ್ತು ವಿದ್ಯಾರ್ಥಿಗಳ ದತ್ತು ಸ್ವೀಕರಿಸಿ ಅವರ ಎಲ್ಲ ಶೈಕ್ಷಣಿಕ ವೆಚ್ಚ ಭರಿಸಲಾಗುತ್ತಿದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಹೇಳಿದರು.

Write A Comment