ಮಂಗಳೂರು, ಜ.15 : ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ ಬೈಕ್ ಸವಾರ ರಸ್ತೆ ಬದಿಯ ಕಲ್ಲಿನ ಮೇಲೆ ಎಸೆಯಲ್ಪಟ್ಟು ಧಾರುಣವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಗಂಟೆ 10.30ರ ಸುಮಾರಿಗೆ ನಗರದ ದೇರಬೈಲ್ ಕೊಂಚಾಡಿಯ ಮಹಾಕಾಳಿ ದೈವಸ್ಥಾನದ ಸಮೀಪ ಸಂಭವಿಸಿದೆ.
ದುರ್ಘಟನೆಯಲ್ಲಿ ಪ್ರಾಣ ಕಳೆದು ಕೊಂಡ ಯುವಕನನ್ನು ಮೇರಿಹಿಲ್ ನಿವಾಸಿ ಸೂರಜ್ ಶೆಟ್ಟಿ (21) ಎಂಬುವುದಾಗಿ ಗುರುತಿಸಲಾಗಿದೆ. ಈತ ನಗರದ ಕಾಲೇಜೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಸೂರಜ್ ಶೆಟ್ಟಿ ಇತ್ತೀಚಿನ ಅಧುನಿಕ ಶೈಲಿಯ ಬೈಕ್‌ನಲ್ಲಿ ಅಕಾಶ್ ಭವನದಿಂದ ಕುಂಟಿಕಾನ್ ಕಡೆ ವೇಗವಾಗಿ ಸಂಚಾರಿಸುತ್ತಿದ್ದ ವೇಳೆ ದೇರೆಬೈಲ್ ಕೊಂಚಾಡಿಯಲ್ಲಿರುವ ಮಹಾಕಾಳಿ ದೇವಸ್ಥಾನದ ಬಳಿ ಇರುವ ಹಂಪ್ಸ್ ನ ಮೇಲಿನಿಂದ ಹಾರಿದ ಬೈಕ್ ನಿಯಂತ್ರಣ ಕಳೆದುಕೊಂಡು ಕಲ್ಲೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯ ಮೇಲೆ ಎಸಯಲ್ಪಟ್ಟ ಶಿವರಾಜನ ತಲೆ ರಸ್ತೆ ಬದಿಯಲ್ಲಿ ಹಾಕಿದ್ದ ಕಲ್ಲೊಂದಕ್ಕೆ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೈಕ್ ಸವಾರನ ಅತಿಯಾದ ವೇಗ ಹಾಗೂ ಹೆಲ್ಮೇಟ್ ದರಿಸದೇ ಇರುವುದು ಯುವಕನ ಸಾವಿಗೆ ಕಾರಣವೆಂದು ತಿಳಿದು ಬಂದಿದೆ. ಸುರತ್ಕಲ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.