ಕನ್ನಡ ವಾರ್ತೆಗಳು

16 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ಅವಕಾಶ ಭಾಗ್ಯ

Pinterest LinkedIn Tumblr

Vidhana_Soudha_photo

ಬೆಂಗಳೂರು, ಜ.14 : ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಆಯ್ಕೆ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದ್ದು, ಹೈದರಾಬಾದ್ ಕರ್ನಾಟಕ ಭಾಗಕ್ಕೂ ಆದ್ಯತೆ ನೀಡಲಾಗುತ್ತದೆ.

ಗೆಜೆಟೆಡ್ ಪ್ರೊಬೆಷನರಿ ಗ್ರೇಡ್ – 1, ಗ್ರೇಡ್ – 2, ಗ್ರೇಡ್ – 3, ಗ್ರೇಡ್ – 4 ಹುದ್ದೆಗಳನ್ನು ಹೊರತುಪಡಿಸಿ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ಮುಂದಾಗಿದೆ.

ಮಾರ್ಚ್ ತಿಂಗಳ ಅಂತ್ಯದಲ್ಲಿ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆ ಸಹ ಅನುಮೋದನೆ ನೀಡಿದೆ. ಈ ಕುರಿತ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ನಗರಾಭಿವೃದ್ಧಿ, ಕಂದಾಯ, ಲೋಕೋಪಯೋಗಿ, ಸಾರಿಗೆ, ಸಹಕಾರ, ಇಂಧನ, ಅಬಕಾರಿ, ಅರಣ್ಯ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ಇವುಗಳನ್ನು ಭರ್ತಿ ಮಾಡಲು ನಿರ್ಧರಿಸಿರುವ ಸರ್ಕಾರ ಮೊದಲ ಹಂತದಲ್ಲಿ 16 ಸಾವಿರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಿದೆ. ಹೈದರಾಬಾದ್-ಕರ್ನಾಟಕ ವಿಭಾಗಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕಾಗಿದ್ದು, ನೇಮಕಾತಿ ಸಂದರ್ಭದಲ್ಲಿ ಹೈ-ಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಕೆಪಿಎಸ್‌ಸಿ ಮೂಲಕ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ. ಆದರೆ, ಅಧ್ಯಕ್ಷರು ಮತ್ತು ಸದಸ್ಯರ ಶಿಫಾರಸು ಪಟ್ಟಿ ವಿವಾದದ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ. ಶಿಫಾರಸು ಪಟ್ಟಿಗೆ ಒಪ್ಪಿಗೆ ದೊರೆತರೆ ಗ್ರೇಡ್-1ರಿಂದ ಗ್ರೇಡ್-4 ವರೆಗಿನ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ.

Write A Comment