ಕನ್ನಡ ವಾರ್ತೆಗಳು

ಕುಂಭಾಸಿ : ರಾಷ್ಟ್ರೀಯ ಹೆದ್ದಾರಿ ವಿಭಾಜಕಕ್ಕೆ ಆಗ್ರಹಿಸಿ ಇಂದು ಪ್ರತಿಭಟನೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇತ್ತಂಡಗಳ ಸಭೆ

Pinterest LinkedIn Tumblr

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದಿಂದಾಗಿ ಎಲ್ಲೆಡೆ ಅಪಘಾತ ವಲಯಗಳು ನಿರ್ಮಾಣಗೊಳ್ಳುತ್ತಿದ್ದು, ಕುಂಭಾಸಿ ಸ್ವಾಗತ ಗೋಪುರದ ಎದುರು ಕೂಡಾ ಇದೇ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹರಿಹರೇಶ್ವರ ದೇವಸ್ಥಾನ ಹಾಗೂ ಬೀಚಿಗೆ ಹೋಗುವ ಸ್ಥಳದಲ್ಲಿ ರಸ್ತೆ ವಿಭಾಜಕ ನಿರ್ಮಾಣ ಮಾಡುವುದು ಮತ್ತು ಅಲ್ಲಿಯೇ ಕರ್ಣಾಟಕ ಬ್ಯಾಂಕ್ ಎದುರು ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಆಗ್ರಹಿಸಿ ಜನವರಿ ೧೪ರಂದು ಬೆಳಿಗ್ಗೆ ಹತ್ತು ಗಂಟೆಗೆ ಕುಂಭಾಸಿಯ ಕರ್ಣಾಟಕ ಬ್ಯಾಂಕ್ ಎದುರು ಪ್ರತಿಭಟನೆ ನಡೆಯಲಿದೆ.

Kumbasi_Divaider_Problem

ಈ ಬಗ್ಗೆ ಕುಂದಾಪುರ ವೃತ್ತ ನಿರೀಕ್ಷಕರಿಗೆ ದೂರು ನೀಡಲಾಗಿದ್ದು, ಮಂಗಳವಾರ ಸಂಜೆ ಹೆದ್ದಾರಿ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರೊಂದಿಗೆ ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಹೆದ್ದಾರಿ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ವಿವರಿಸಿದ ಹರಿಹರೇಶ್ವರ ದೇವಸ್ಥಾನ ಸಮಿತಿಯ ಶ್ರೀಪತಿ ಉಪಾದ್ಯ, ಸುಮಾರು ನೂರು ವರ್ಷಗಳ ಇತಿಹಾಸವಿರುವ ಬಸ್ ನಿಲ್ದಾಣ ತೆರವು ಮಾಡುವುದು ಸರಿಯಲ್ಲ. ಅಲ್ಲದೇ ಬೀಚ್ ರಸ್ತೆಯಲ್ಲಿ ಸುಮಾರು ಐದು ವಾರ್ಡಿನ ಜನರು ಇದೇ ರಸ್ತೆ ಬಳಸುತ್ತೊದ್ದಾರೆ. ಅತೀ ಅಪರೂಪದ ೯೮ ಮೆಟ್ಟಿಲುಗಳ ಹರಿಹರ ದೇವಸ್ಥಾನಕ್ಕೂ ಇದೇ ರಸ್ತೆಯಲ್ಲಿ ಹೋಗಬೇಕು. ಇದೇ ರಸ್ತೆಯಲ್ಲಿ ಸರ್ಕಾರೀ ಶಾಲೆಯೂ ಇದ್ದು, ಅಲ್ಲಿ ರಸ್ತೆ ವಿಭಾಜಕ ಮಾಡದೇ ಇದ್ದರೆ ಈಗಿನ ರಸ್ತೆ ವಿಭಾಜಕವಿರುವಲ್ಲಿಯ ತನಕ ನಡೆದೇ ಸಾಗಬೇಕು. ಅದು ಅಪಘಾತ ವಲಯವಾಗಿರುವುದರಿಂದ ಮಕ್ಕಳಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆಯುಂಟಾಗುತ್ತದೆ ಎಂದರು.

ಆಗ ಪ್ರತಿಕ್ರಿಯಿಸಿದ ಹೆದ್ದಾರಿ ಅಧಿಕಾರಿಗಳು, ಬಸ್ ನಿಲ್ದಾಣವನ್ನು ಕರ್ಣಾಟಕ ಬ್ಯಾಂಕಿನ ಎದುರೇ ನಿರ್ಮಿಸಲಾಗುತ್ತದೆ. ವಿಭಾಜಕವನ್ನು ಬದಲಾಯಿಸಬೇಕಾದರೆ ಮೇಲಧಿಕಾರಿಗಳು ಒಪ್ಪಿಗೆ ಸೂಚಿಸಬೇಕು ಎಂದರು. ಈ ಹಿನ್ನೆಲೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಗುತ್ತದೆ ಎಂದಾಗ, ವೃತ್ತ ನಿರೀಕ್ಷಕ ಯಾವುದೇ ಕಾರಣಕ್ಕೂ ಹೆದ್ದಾರಿ ತಡೆಯುವಂತಿಲ್ಲ ಮತ್ತು ಮಕ್ಕಳನ್ನು ಪ್ರತಿಭಟನೆಯಲ್ಲಿ ಬಳಸಿಕೊಳ್ಳುವಂತಿಲ್ಲ. ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ನಾಗೇಶ್ ಕುಂದರ್, ಆಟೋ ಯೂನಿಯನ್ನಿನ ಚಂದ್ರಶೇಖರ್, ರಮೇಶ್ ಮಂಜು ಕುಂಭಾಸಿ, ಶೇಷ ದೇವಾಡಿಗ, ಲಕ್ಷ್ಮಣ, ರಾಜೇಶ್, ಚಂದ್ರ, ದಿನೇಶ್ ಶೆರೆಗಾರ್ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

ಇಂದು ಪ್ರತಿಭಟನೆ : ರಸ್ತೆ ವಿಭಾಜಕ ಹಾಗೂ ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಬುಧವಾರ ಬೆಳಿಗ್ಗೆ ಹತ್ತು ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಆಡಳಿತ ಮಂಡಳಿ, ಕುಂಭಾಸಿ, ಗೋಪಾಡಿ ಹಾಗೂ ಬೀಜಾಡಿ ಗ್ರಾಮಸ್ಥರು, ಯುವಕ ಮಂಡಲ, ಯುವತಿ ಮಂಡಲ, ಆಟೋ ರಿಕ್ಷಾ/ ವಾಹನ ಚಾಲಕರು ಹಾಗೂ ಮಾಲಕರು, ಹರಿಹರ ದೇವಸ್ಥಾನ, ನಾಗಾಚಲ ಅಯ್ಯಪ್ಪ ದೇವಸ್ಥಾನ, ಶ್ರೀ ಸೂರ್ಯನಾರಾಯಣ ದೇವಸ್ಥಾನ, ಜನತಾ ಕಾಲೋನಿ ಗ್ರಾಮಸ್ಥರು, ಕುಂಭಾಸಿಯ ರಥಬೀದಿ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

Write A Comment