ಕನ್ನಡ ವಾರ್ತೆಗಳು

ಹಿರಿಯ ನಾಗರೀಕರ ಗುರುತಿನ ಚೀಟಿಯನ್ನೇ ಪರಿಗಣಿಸಿ: ಕೆಡಿಪಿ ನಿರ್ಣಯ

Pinterest LinkedIn Tumblr

kdp_press_meet_1

ಮಂಗಳೂರು, ಜ.12: ಹಿರಿಯ ನಾಗರೀಕರಿಗೆ ಸರಕಾರದಿಂದ ನೀಡುವ ಗುರುತಿನ ಚೀಟಿಯನ್ನೇ ವಿವಿಧ ಸೌಲಭ್ಯಗಳಿಗೆ ಪರಿಗಣಿಸುವಂತೆ ಜಿಲ್ಲಾ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸೋಮವಾರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಅಧ್ಯಕ್ಷರು ಮಾತನಾಡಿ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಿಂದ ಹಿರಿಯ ನಾಗರೀಕರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ವಿವಿಧ ಸೌಲಭ್ಯಗಳ ಪ್ರಯೋಜನ ಪಡೆಯಲು ಇದನ್ನು ಬಳಸಬಹುದು. ಆದರೆ ಕೆ‌ಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ ಟಿಕೇಟ್ ದರದಲ್ಲಿ ರಿಯಾಯಿತಿ ನೀಡಲು ಈ ಗುರುತಿನ ಚೀಟಿಯನ್ನು ಮಾನ್ಯ ಮಾಡಲು ನಿರಾಕರಿಸಿ, ಕೆ‌ಎಸ್‌ಆರ್‌ಟಿಸಿಯಿಂದಲೇ ಪ್ರತ್ಯೇಕ ಗುರುತಿನ ಚೀಟಿ ಪಡೆಯಲು ಒತ್ತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಇದರಿಂದ ಹಿರಿಯ ನಾಗರೀಕರಿಗೆ ಅನಗತ್ಯ ಅಲೆದಾಟವಾಗುತ್ತಿದೆ. ಇದನ್ನು ತಪ್ಪಿಸಿ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಿಂದಲೇ ನೀಡಿರುವ ಗುರುತಿನ ಚೀಟಿಯನ್ನು ಎಲ್ಲಾ ಇಲಾಖೆಗಳು ಮಾನ್ಯ ಮಾಡಬೇಕು ಎಂದು ಅವರು ಸೂಚಿಸಿದರು

ಇದುವರೆಗೆ ಜಿಲ್ಲೆಯಲ್ಲಿ ಸುಮಾರು 2೦೦೦೦ಕ್ಕೂ ಅಧಿಕ ಹಿರಿಯ ನಾಗರೀಕರ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿದ ಬಳಿಕವಷ್ಟೇ ಕಾರ್ಡುಗಳನ್ನು ನೀಡಲಾಗುತ್ತದೆ ಎಂದು ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸರಕಾರಿ ಶಾಲೆಗಳ ಮಕ್ಕಳಿಗೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಚಿಕಿತ್ಸೆ ನೀಡುವ ಸಂದರ್ಭ ಬಂದಾಗ, ಮಕ್ಕಳು ಬಿಪಿ‌ಎಲ್ ಅಥವಾ ಎಪಿ‌ಎಲ್ ಕುಟುಂಬ ಎಂದು ಪರಿಗಣಿಸದೇ ಎಲ್ಲಾ ಮಕ್ಕಳಿಗೆ ಸೌಲಭ್ಯ ನೀಡಬೇಕು. ಈ ಕಾರ್ಯಕ್ರಮದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಸಮರ್ಪಕವಾದ ಮಾಹಿತಿ ನೀಡುವಂತೆ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ಸೂಚಿಸಿದರು.

kdp_press_meet_2

ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಕಂತು ಬಿಡುಗಡೆಯಾಗಿದ್ದರೂ, ನಿಗದಿತ ಅವಧಿಯಲ್ಲಿ ಮನೆ ಪೂರ್ಣಗೊಳಿಸದ ಫಲಾನುಭವಿಗಳಿಗೆ ಮನೆ ಪೂರ್ಣಗೊಳಿಸುವಂತೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ 271 ಫಲಾನುಭವಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಉಪಾ ಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ವಸತಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಯೋಜನೆಯಲ್ಲಿ ಫಲಾನುಭವಿಗಳನು ಆಯ್ಕೆ ಮಾಡುವಾಗ ಸಮರ್ಪಕವಾಗಿ ನಡೆಸಿದರೆ, ಮುಂದಿನ ದಿನಗಳಲ್ಲಿ ಯೋಜನೆ ವಿಳಂಭ ತಪ್ಪಲಿದೆ ಎಂದರು.

ದೇರಳಕಟ್ಟೆ, ಕುತ್ತಾರು ಮುಖ್ಯರಸ್ತೆ ಅಭಿವೃದ್ಧಿಯಾಗುತ್ತಿದ್ದರೂ, ತ್ಯಾಜ್ಯ ನೀರುಗಳನ್ನು ಮುಖ್ಯರಸ್ತೆಯ ತೆರೆದ ಚರಂಡಿಗೆ ಬಿಡುತ್ತಿರುವುದರಿಂದ ವ್ಯಾಪಕ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂಗತ ಒಳಚರಂಡಿ ವ್ಯವಸ್ಥೆಯನ್ನು ಮುಖ್ಯರಸ್ತೆಯಲ್ಲಿ ಕಲ್ಪಿಸುವ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಸಲ್ಲಿಸುವಂತೆ ಉಪಾಧ್ಯಕ್ಷರು ಹೆದ್ದಾರಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲು ಕೆಲವೆಡೆ ಬ್ಯಾಂಕುಗಳು ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಸತೀಶ್ ಕುಂಪಲ ಲೀಡ್‌ಬ್ಯಾಂಕ್‌ಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಸಭೆಯಲ್ಲಿ ಮಾತನಾಡಿ, ಗ್ರಾಮಪಂಚಾಯತ್‌ಗಳು ತೆರಿಗೆ ವಸೂಲಿಯನ್ನು ಸಮರ್ಪಕವಾಗಿ ನಡೆಸಿ, ನಿಗದಿತ ಗುರಿ ಸಾಧಿಸಬೇಕು. ಶೇಕಡಾ 80 ಕ್ಕಿಂತ ಕಡಿಮೆ ತೆರಿಗೆ ಸಂಗ್ರಹಿಸುವ ಗ್ರಾಮ ಪಂಚಾಯತ್‌ಗಳಿಗೆ 4 ನೇ ಕಂತಿನ ಅನುದಾನ ಬಿಡುಗಡೆಯಾಗುವುದಿಲ್ಲ ಎಂದರು. ಸಾರ್ವಜನಿಕರ ಬೇಡಿಕೆ ಮೇರೆಗೆ ಜಿಲ್ಲೆಯ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ಸು ಓಡಾಟಕ್ಕೆ ಪರ್ಮಿಟ್ ಪಡೆಯಲು ಕೆ‌ಎಸ್‌ಆರ್‌ಟಿಸಿಯಿಂದ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಮುಂದಿನ ಆರ್‌ಟಿ‌ಎ ಸಭೆಯಲ್ಲಿಡುವಂತೆ ಅವರು ಆರ್‌ಟಿ‌ಓ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತೀ ಗ್ರಾಮ ಪಂಚಾಯತ್ 10 ಕಾಲುಸಂಕ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಲುಸಂಕ ನಿರ್ಮಿಸಲು ಅವಕಾಶ ಇದೀಗ ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 10 ಕಾಲುಸಂಕ ನಿರ್ಮಿಸಲು ಅವಕಾಶವಿದೆ. ಪ್ರತೀ ಕಾಲು ಸಂಕಕ್ಕೆ 5 ಲಕ್ಷ ರೂ.ವರೆಗೆ ವೆಚ್ಚ ಮಾಡಬಹುದಾಗಿದೆ. ಇದರಿಂದ ಪ್ರತೀ ಗ್ರಾ.ಪಂ.ನಲ್ಲಿ 10 ಕಾಲುಸಂಕ ನಿರ್ಮಾಣಕ್ಕೆ50  ಲಕ್ಷ ರೂ. ವರೆಗೆ ಅನುದಾನ ಲಭ್ಯವಾಗಲಿದೆ. 2015-16ರಲ್ಲಿ ಯೋಜನೆ ಜಾರಿಯಾಗಲಿದ್ದು, ಎಲ್ಲ ಗ್ರಾ.ಪಂ.ಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಸಾಂಸ್ಕೃತಿಕ ಸಂಘಗಳಿಗೆ ಅನುದಾನ: ಜಿಲ್ಲೆಯಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮಿಕೊಳ್ಳುತ್ತಿರುವ ನೋಂದಾಯಿತ ಸಂಘಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ವರ್ಷ ಧನ ಸಹಾಯ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 24  ಸಂಘಸಂಸ್ಥೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಮೂಡಬಿದ್ರೆ ಆಳ್ವಾಸ್ ಫೌಂಡೇಶನ್‌ಗೆ 25  ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭಯಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ. ಮೀನಾಕ್ಷಿ, ಸಿ.ಕೆ. ಚಂದ್ರಕಲಾ, ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು. ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಸ್ವಾಗತಿಸಿದರು.

Write A Comment