ಕನ್ನಡ ವಾರ್ತೆಗಳು

ಎಲ್ಲಿ ಬಸ್ಸು, ಆಟೋ ನಿಲ್ದಾಣ ಮಾಡ್ತಾರೆ..? ಕುಂಭಾಸಿ ನಾಗರೀಕರಿಗೆ ಹಲವು ಗೊಂದಲ

Pinterest LinkedIn Tumblr

ಕುಂದಾಪುರ: ಕುಂಭಾಸಿ ಭಾಗದಲ್ಲಿ ಬಸ್ಸು ಹಾಗೂ ಆಟೋ ರಿಕ್ಷಾ ನಿಲುಗಡೆಯಲ್ಲಿ ಹಲವು ಗೊಂದಲಗಳು ಏರ್ಪಟ್ಟಿದ್ದು ನಾಗರೀಕರು ಈ ಬಗ್ಗೆ ಚಿಂತೆಗೀಡಾಗಿದ್ದಾರೆ.

ಏನು ಸಮಸ್ಯೆ: ಆನೆಗುಡ್ಡೆ ಸ್ವಾಗತ ಗೋಪುರದ ಎದುರು ಭಾಗದಿಂದ ಆರಂಭಗೊಂಡು ಕುಂಭಾಸಿ ಬಸ್ಸು ನಿಲ್ದಾಣದ ಎದುರುಗಡೆಯವರೆಗೂ ಸದ್ಯ ಚತುಷ್ಪತ ಕಾಮಗಾರಿಯ ಇನ್ನೊಂದು ಭಾಗದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಇನ್ನು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೇ ಇದು ಸ್ಥಳೀಯ ಜನರನ್ನು ಆತಂಕಕ್ಕೀಡುಮಾಡಿದ್ದು ಡಿವೈಡರ್ ನಿರ್ಮಾಣ ಹಾಗೂ ಬಸ್ಸು ಹಾಗೂ ರಿಕ್ಷಾ ನಿಲುಗಡೆ ಗೊಂದಲದಿಂದ ಸ್ಥಳಿಯ ನಾಗರೀಕರು ಚಿಂತೆಗೀಡಾಗಿದ್ದಾರೆ.

Kumbasi_Highway_Problem Kumbasi_Highway_Problem (1)

ಎಲ್ಲಿ ಬಸ್ಸು ನಿಲುಗಡೆ?: ಹೆದ್ದಾರಿ ಕಾಮಗಾರಿ ಮುಕ್ಕಾಲು ಭಾಗ ಈ ಪ್ರದೇಶದಲ್ಲಿ ಪೂರ್ಣವಾಗಿದ್ದು, ಸದ್ಯ ಆನೆಗುಡ್ಡೆ ಮಹದ್ವಾರದ ಎದುರು ಡಿವೈಡರ್ ನಿರ್ಮಿಸಲಾಗಿದೆ. ಆದರೇ ಕುಂಭಾಸಿ ಮುಖ್ಯ ಬಸ್ಸು ನಿಲ್ದಾಣ ಸಮುದ್ರ ಕಿನಾರೆ ರಸ್ತೆ ಎದುರಿಗಿದ್ದು ಡಿವೈಡರ್ ಒಂದೆಡೆ ಬಸ್ಸು ತಂಗುದಾಣ ಇನ್ನೊಂದೆಡೆ ಆದರೇ ಪ್ರಯಾಣಿಕರು, ದೂರದಿಂದ ಬರುವ ಪ್ರವಾಸಿಗರು, ಆಟೋ ರಿಕ್ಷಾ ಚಾಲಕರು ಸೇರಿದಂತೆ ನಿತ್ಯ ಸವಾರರು ಪರದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಡಿವೈಡರ್ ನಿರ್ಮಿಸಲಾದ ಕುಂಭಾಸಿ ಆನೆಗುಡ್ಡೆ ಸ್ವಾಗತಗೋಪುರದ ಎದುರುಗಡೆಯೇ ಖಾಸಗಿ ಲೋಕಲ್ ಹಾಗೂ ಎಕ್ಸ್‌ಪ್ರೆಸ್ ನಿಲುಗಡೆ ಹಾಗೂ ರಿಕ್ಷಾ ನಿಲ್ದಾಣವಾಗಬೇಕೆಂಬುದು ಸ್ಥಳೀಯ ಸಾಮಾಜಿಕ ಹೋರಾಟಗಾರ ಮಹೇಶ್ ಶೆಣೈ ಅವರ ಅಭಿಪ್ರಾಯವಾಗಿದೆ.

ಜಟಿಲ ಸಮಸ್ಯೆ: ಈ ಹಿಂದೆ ಕೊರವಡಿ ಕ್ರಾಸ್ ಸಮೀಪದಿಂದ ಅನತಿ ದೂರದಲ್ಲಿ ಒಂದು ಡಿವೈಡರ್ ಹಾಗೂ ಕುಂಭಾಸಿ ಬಸ್ಸು ನಿಲ್ದಾಣದ ಸಮೀಪ ಡಿವೈಡರ್ ಇದ್ದು ಕಾಮಗಾರಿ ಪರಿಪೂರ್ಣವಾದ ಬಳಿಕ ಈ ಎರಡು ಡಿವೈಡರ್ ಮುಚ್ಚುವ ಮೂಲಕ ಆನೆಗುಡ್ಡೆ ಸ್ವಾಗತ ಗೋಪುರದ ಎದುರಿನ ಡಿವೈಡರ್ ಮಾತ್ರ ತೆರೆಯಲಾಗುತ್ತದೆ, ಒಂದೊಮ್ಮೆ ಬಸ್ಸು ನಿಲ್ದಾಣ ಈ ಹಿಂದೆ ಇರುವಲ್ಲಿಯೇ ಇದ್ದಲ್ಲಿ ರಿಕ್ಷಾ ಚಾಲಕರು ಹಾಗೂ ನಿತ್ಯ ಪ್ರಯಾಣಿಕರು ಆನೆಗುಡ್ಡೆಗೆ ತೆರಳಬೇಕಾದಲ್ಲಿ ಬೀಜಾಡಿಗೆ ತೆರಳಿ ವಾಪಾಸ್ಸು ಹಿಂದಕ್ಕೆ ಬರಬೇಕಾಗುತ್ತದೆ. ಆನೆಗುಡ್ಡೆಯಿಂದ ಹೊರಬರುವ ಪ್ರಯಾಣಿಕರು ತೆಕ್ಕಟ್ಟೆಗೆ ತೆರಳಿ ಪುನಃ ಮರಳುವುದು ಅನಿವಾರ್ಯವಾಗಲಿದೆ ಎನ್ನುವುದು ಸ್ಥಳೀಯರಾದ ರಾಮ ಅವರ ಅಭಿಪ್ರಾಯವಾಗಿದೆ.

ಮಾಜಿ ಸಚಿವ ಭೇಟಿ: ಸ್ಥಳೀಯರು ಕುಂಭಾಸಿ ಪ್ರದೇಶದ ಬಸ್ಸು ನಿಲ್ದಾಣ ಗೊಂದಲದ ಬಗ್ಗೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಸ್ಥಳೀಯರೊಂದಿಗೆ ಮಾತನಾಡಿದ ಅವರು ಸಾರ್ವಜನಿಕರು ಹಾಗೂ ಪ್ರಸಿದ್ಧ ಆನೆಗುಡ್ಡೆ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಮಸ್ಯೆಯಾಗದಂತೆ ಬಸ್ಸು ನಿಲ್ದಾಣ ಹಾಗೂ ಆಟೋ ರಿಕ್ಷಾ ನಿಲುಗಡೆ ಸ್ಥಳವಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಥಳಿಯರು ಮನವಿ ಸಲ್ಲಿಸಿದಲ್ಲಿ ಈ ಬಗ್ಗೆ ಸಂಬಂದಪಟ್ಟವರ ಗಮನ ಸೆಳೆಯುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕುಂಭಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕಮಲಾಕ್ಷ ಪೈ, ಗ್ರಾ.ಪಂ. ಸದಸ್ಯ ಮಹಬಲೇಶ್ವರ ಆಚಾರ್ಯ, ಸ್ಥಳಿಯರಾದ ರಾಮ ಪೂಜಾರಿ, ಶ್ರೀಧರ ಆಚಾರ್ಯ, ಕುಂಭಸಿ ಭಾಗದ ಆತೋ ರಿಕ್ಷ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.

ಕುಂಭಾಸಿಯ ಆನೆಗುಡ್ಡೆ ಸ್ವಾಗತ ಗೋಪುರದ ರಸ್ತೆಯಲ್ಲಿಯೇ ಪ್ರಸಿದ್ಧ ಆನೆಗುಡ್ಡೆ ಸ್ವಾಗತ ಗೋಪುರ, ಅಂಚೆಕಛೇರಿ, ಸರಕಾರಿ ಆಸ್ಪತ್ರೆ, ಕುಂಭಾಸಿ ಗ್ರಾಮಪಂಚಾಯತ್, ಪಶು ಆಸ್ಪತ್ರೆ ಮೊದಲಾದ ಜನರಿಗೆ ಅನುಕೂಲವಾದ ವ್ಯವಸ್ಥೆಗಳಿದ್ದು ಈ ಭಾಗದಲ್ಲಿಯೇ ಬಸ್ಸು ಹಾಗೂ ಆಟೋ ರಿಕ್ಷಾ ನಿಲ್ದಾಣವಾಗಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹ.

Write A Comment