ಮಂಗಳೂರು / ಮೂಡಬಿದಿರೆ : “ಡಾ.ಎಂ. ಮೋಹನ್ ಆಳ್ವ ಒಬ್ಬ ಅಸಾಧಾರಣ ವ್ಯಕ್ತಿ. ನಮ್ಮ ದೇಶದ ವಿಶಿಷ್ಟ ಪರಂಪರೆಯನ್ನು ಉಳಿಸುವ, ಅಸಾಮಾನ್ಯ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಬೃಹತ್ ಕೊಡುಗೆಯನ್ನು ಅವರು ನೀಡುತ್ತಿದ್ದಾರೆ” ಎಂದು ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ. ವಿನಯ್ ಹೆಗ್ಡೆ ಹೇಳಿದರು. ಮೂಡುಬಿದಿರೆಯಲ್ಲಿ ಗುರುವಾರ ಉದ್ಘಾಟನೆಗೊಂಡ ಆಳ್ವಾಸ್ ವಿರಾಸತ್-2015 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಆಳ್ವಾಸ್ ವಿರಾಸತ್‌ನಂತಹ ಕಾರ್ಯಕ್ರಮ ನೋಡುವಾಗ ಬಹಳ ವಿಸ್ಮಯವಾಗುತ್ತದೆ. ಈ ಸಲದ ಕಾರ್ಯಕ್ರಮ ತುಂಬಾ ವಿಶಿಷ್ಟವಾದುದು. ಒಂದು ಶಿಕ್ಷಣ ಸಂಸ್ಥೆಗಿರಬೇಕಾದ ಅಚ್ಚುಕಟ್ಟುತನವನ್ನು ಬೆಳೆಸುವುದರೊಂದಿಗೆ, ಸಾಂಸ್ಕೃತಿಕ ಉತ್ಸವಗಳನ್ನು ಮಾಡಿ ಪ್ರತಿಭಾನ್ವಿತರನ್ನು ಗುರುತಿಸಿ ಪುರಸ್ಕರಿಸುವ ಕಾರ್ಯವನ್ನು ಡಾ.ಆಳ್ವರು ಮಾಡುತ್ತಿದ್ದಾರೆ. ಬೇರೆ ಗಣ್ಯರು ಇಂತಹ ಕೆಲಸ ಮಾಡಬಹುದಾದರೂ ಅವರು ಮನಸ್ಸು ಮಾಡುತ್ತಿಲ್ಲ. ಆದರೆ ಡಾ. ಮೋಹನ್ ಆಳ್ವರು ತಮ್ಮ ವಿದ್ಯಾಸಂಸ್ಥೆಯಲ್ಲಿ ವಿರಾಸತ್‌ನಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸೃಜನಾತ್ಮಕ ವಾತಾವರಣ ಬೆಳೆಸುತ್ತಿದ್ದಾರೆ. ತನ್ಮೂಲಕ ಒಳ್ಳೆಯ ವ್ಯಕ್ತಿತ್ವವುಳ್ಳ ಯುವ ಸಮುದಾಯವನ್ನು ಬೆಳೆಸುವಲ್ಲಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.ಇದು ನಮ್ಮ ಕಣ್ಮುಂದೆ ಇರುವ ಸತ್ಯ. ಸಮಯಪ್ರಜ್ಞೆ, ಶಿಸ್ತನ್ನು ಒಳಗೊಂಡಿರುವ ಆಳ್ವರು ಮಾದರಿ ವ್ಯಕ್ತಿಯಾಗಬಲ್ಲರು. ಡಾ.ಟಿ.ಎಂ.ಎ.ಪೈರವರ ನಂತರ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಬಹುದಾದ ಮಹತ್ವದ ಹೆಸರು ಡಾ.ಆಳ್ವರದು’ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅರಣ್ಯ, ಪರಿಸರ ಮತ್ತು ವನ್ಯಜೀವಿ ಇಲಾಖಾ ಸಚಿವ ರಮಾನಾಥ ರೈ,` ಬೇರೆ ಯಾವ ಭಾಗದಲ್ಲೂ ಇಂತಹ ಕಾರ್ಯಕ್ರಮವನ್ನು ಕಾಣಲು ಸಾಧ್ಯವಿಲ್ಲ. ಬೇರೆ ಬೇರೆ ಕಲೆಗಳನ್ನು ಜನತೆಗೆ ಪರಿಚಯಿಸುವುದರೊಂದಿಗೆ ಪ್ರತಿಭಾನ್ವಿತರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ಡಾ.ಆಳ್ವರು ಮಾಡುತ್ತಿದ್ದಾರೆ. ನಮ್ಮ ದೇಶದ ವಿಶಿಷ್ಟ ಪರಂಪರೆಯನ್ನು ಉಳಿಸುವ, ಜನರಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. “ಡಾ.ಎಂ. ಮೋಹನ್ ಆಳ್ವ ಒಬ್ಬ ಅಸಾಧಾರಣ ವ್ಯಕ್ತಿ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾನ ಆದ್ಯತೆ ನೀಡುವ , ಭಾವೈಕ್ಯತೆಯನ್ನು ಬೆಳೆಸುವ ಮಾಧ್ಯಮವಾಗಿ ವಿರಾಸತ್ ಬೆಳೆದು ಬಂದಿದೆ.ಇಂದು ಮೂಡುಬಿದಿರೆ ಎಂಬ ಪುಟ್ಟ ಊರು ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಿದೆಯೆಂದರೆ ಅದಕ್ಕೆ ಈ ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳೇ ಕಾರಣ. ಮೂಡುಬಿದಿರೆಗೆ ಅನ್ವರ್ಥವಾಗಿ ಡಾ.ಮೋಹನ್ ಆಳ್ವರು ಗುರುತಿಸಿಕೊಳ್ಳುತ್ತಾರೆ’ ಎಂದರು.
ಆಳ್ವಾಸ್ ವಿರಾಸತ್-2015 ರ ಪ್ರಶಸ್ತಿ ಪುರಸ್ಕೃತರಾದ ಭಾರತದ ಶ್ರೇಷ್ಠ ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಅಲಿಖಾನ್ ಮಾತನಾಡಿ, `ಸಂಗೀತವೆಂದರೆ ಅದು ಜಗತ್ತನ್ನು ಸೃಷ್ಟಿಸಿದ ತಾಯಿ. ಅದರ ಮಹತ್ವವನ್ನು ಹೆಚ್ಚಾಗಿ ಅರ್ಥೈಸಿಕೊಂಡಿರುವುದು ದಕ್ಷಿಣ ಭಾರತದ ಜನತೆ. ಆಳ್ವಾಸ್ ವಿರಾಸತ್‌ನಂತಹ ಕಾರ್ಯಕ್ರಮ ಜಗತ್ತಿನ ಯಾವುದೇ ಭಾಗದಲ್ಲಿ ನಡೆಯುವುದಿಲ್ಲ. ಇದು ಡಾ.ಆಳ್ವರ ಸಮರ್ಥತೆಯಲ್ಲದೇ ಬೇರೇನೂ ಅಲ್ಲ’ಎಂದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡವಿಭಾಗದ ಮುಖ್ಯಸ್ಥ ಕಿದೂರು ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೆನರಾ ಬ್ಯಾಂಕ್ ಸಿಇಒ ಕೃಷ್ಣಕುಮಾರ್, ಕರ್ನಾಟಕ ಬ್ಯಾಂಕ್‌ನ ಸಿಇಒ ಜಯರಾಮ್ ಭಟ್, ಉಡುಪಿಯ ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್, ಎಸ್.ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಸುರೇಶ್ ಭಂಡಾರಿ, ರಾಮಚಂಂದ್ರ ಶೆಟ್ಟಿ, ಶ್ರೀನಿವಾಸ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನಾವರಣಗೊಂಡ ಸಾಂಸ್ಕೃತಿಕ ಲೋಕ:
ವಿರಾಸತ್ ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ವಿರಾಸತ್‌ನ ಭವ್ಯ ವೇದುಕೆಯಲ್ಲಿ ಸಾಂಸ್ಕೃತಿ ಲೋಕ ಅನಾವರಣಗೊಂಡಿತು. ಸುಮಾರು 120ಅಡಿ ಅಗಲ ಹಾಗೂ ಸುಮಾರು 30ಅಡಿ ಎತ್ತರದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜಸ್ಥಾನದ ಶಾಸ್ತ್ರೀಯ ಹಾಗೂ ಜನಪದ ಕಲಾ ವೈಭವ, `ದೀಪ ತರಂಗಿಣಿ’ ವಿಶೇಷ ನೃತ್ಯ, ಪಂಜಾಬಿ ಹಾಗೂ ಗುಜರಾತಿ ಜನಪದನೃತ್ಯ ವೈವಿಧ್ಯ, ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ವೇದಿಕೆಯ ಎರಡೂ ಬದಿಯಲ್ಲಿದ್ದ ಸುಂದರ `ವಾಟರ್ ಫೌಂಟನ್’ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತ್ತು. ಕಾರ್ಯಕ್ರಮ ಆಳ್ವಾಸ್ ಪ್ಯಾಲೇಸ್‌ಗ್ರೌಂಡ್‌ನಲ್ಲಿ ನಡೆಯುತ್ತಿದ್ದು, ಸಾವಿರಾರು ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


































































