ಕನ್ನಡ ವಾರ್ತೆಗಳು

ಅಪಪ್ರಚಾರ ಮಾಡುವುದು ಬಿಜೆಪಿಯ ಜಾಯಮಾನ: ಸಚಿವ ರಮಾನಾಥ ರೈ

Pinterest LinkedIn Tumblr

bntwl_ramnth_rai

ಬಂಟ್ವಾಳ, ಜ.6: ಕೇಂದ್ರದ ಬಿಜೆಪಿ ಆಡಳಿತ ಪ್ರಚಾರ, ಭಾಷಣ ಹಾಗೂ ಘೋಷಣೆಗಳಿಗಷ್ಟೇ ಸೀಮಿತವಾಗಿದ್ದು, ಅಪಪ್ರಚಾರ ಹಾಗೂ ಗೂಬೆ ಕೂರಿಸುವುದೇ ಬಿಜೆಪಿಯ ಜಾಯಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಸೋಮವಾರ ನಡೆದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಜೆಪಿಗರಿಗೆ ಕಾಂಗ್ರೆಸ್ ಕಾರ್ಯಕರ್ತರು, ಈ ಬಾರಿಯ ಸದಸ್ಯತ್ವ ಅಭಿಯಾನದಲ್ಲಿ ದಿಟ್ಟ ಉತ್ತರ ನೀಡಬೇಕೆಂದು ಕರೆ ನೀಡಿದರು.ಯುಪಿಎ ಸರಕಾರದ ಅವಧಿಯಲ್ಲಿ ಪ್ರಸ್ತಾಪಿ ಸಲ್ಪಟ್ಟ ಹುಲಿ ಯೋಜನೆಯ ಬಗ್ಗೆ, ಆಗ ರಾಜ್ಯದ ಜನತೆಯನ್ನು ಎತ್ತಿಕಟ್ಟಿದ್ದ ಸುನೀಲ್‌ಕುಮಾರ್ ಈಗೇನು ಮಾಡುತ್ತಿದ್ದಾರೆ? ಕೇಂದ್ರದ ಮೋದಿ ಸರಕಾರ ಅದನ್ನು ಮುಂದು ವರಿಸುತ್ತಿದ್ದಾರಲ್ಲಾ, ಜನತೆಯ ವಿರುದ್ಧ ನಮ್ಮ ಪಕ್ಷವನ್ನು ಎತ್ತಿಕಟ್ಟುವುದೇ ನಿಮ್ಮ ಕೆಲಸವೇ ಎಂದು ರೈ ಸವಾಲೆಸೆದರು. ಕಪ್ಪುಹಣ, ಬೋಫೋರ್ಸ್, ಆಧಾರ್, ಅಡಿಕೆ ನಿಷೇಧದ ವದಂತಿಗಳನ್ನು ಬಳಸಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದ ಕೇಂದ್ರ ಸರಕಾರ ಭಾಷಣ-ಘೋಷಣೆಗಳಿಗಷ್ಟೇ ತನ್ನ ಆಡಳಿತವನ್ನು ಮಿತಿಗೊಳಿಸಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ದ.ಕ.ಜಿಲ್ಲೆಯನ್ನು ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಅಭಿಯಾನವನ್ನು ಮಾದರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಾರ್ಯಕರ್ತರು ಇದಕ್ಕಾಗಿ ಅಹರ್ನಿಶಿ ದುಡಿಯುವಂತೆ ಮನವಿಮಾಡಿದರು. ಪಕ್ಷ ತಮಗಾಗಿ ನೀಡಿದ ಅವಕಾಶಗಳನ್ನು ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಯಾವತ್ತೂ ನೆನಪಿನಲ್ಲಿರಿಸಬೇಕು ಎಂದ ಅವರು, ತಾನು ಆರು ಬಾರಿ ಶಾಸಕನಾದದ್ದು, ಸರಕಾರದ ಸಚಿವನಾದದ್ದು ಪಕ್ಷ ನೀಡಿದ ಅವಕಾಶಗಳಿಂದ ಹಾಗೂ ಕ್ಷೇತ್ರದ ಜನತೆಯ ಪ್ರೀತಿಯಿಂದ ಎಂದವರು ಸ್ಮರಿಸಿಕೊಂಡರು.

ಜಿ.ಪಂ.ಸದಸ್ಯೆ ಮಮತಾಗಟ್ಟಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಗೆ ಮಂದಿರ ಕಟ್ಟಲು ಹೊರಟಿರುವ ದುಷ್ಟಶಕ್ತಿಗಳಿಗೆ ಸರಕಾರ ಕಡಿವಾಣ ಹಾಕಬೇಕಾಗಿದೆ. ಕರ್ನಾಟಕದಲ್ಲಿ ಗೋಡ್ಸೆಮಂದಿರಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು. ಜಿ.ಪಂ.ಸದಸ್ಯ ಎಂ.ಎಸ್.ಮುಹಮ್ಮದ್ ಮಾತನಾಡಿ, ರೈ ಎದುರು ಹೀನಾಯ ಸೋಲು ಕಂಡ ಬಿಜೆಪಿಯ ರಾಜೇಶ್ ನಾಯ್ಕೆ, ಬಿಜೆಪಿ ಕಾರ್ಯಕರ್ತರ ಜೊತೆ ಸೇರಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.

ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಅಧ್ಯಕ್ಷ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ತಾ.ಪಂ. ಸದಸ್ಯೆ ಹೈಡಾ ಸುರೇಶ್, ಪಕ್ಷದ ಪ್ರಮುಖರಾದ ಪಿಯೂಸ್ ರೋಡ್ರಿಗಸ್, ಸಂಜೀವ ಪೂಜಾರಿ, ಸುದರ್ಶನ್ ಜೈನ್, ಮಹಿಳಾ ಕಾಂಗ್ರೆಸ್ ಹೇಮಲತಾ, ಧನಲಕ್ಷ್ಮೀ, ಯುವ ಕಾಂಗ್ರೆಸ್‌ನ ಪ್ರಶಾಂತ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಪಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿದರು, ಜಗದೀಶ್ ಕೊಲ ವಂದಿಸಿದರು. ನೌಫಲ್ ಕಾರ್ಯಕ್ರಮ ನಿರ್ವಹಿಸಿದರು.

Write A Comment