ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2014-15ರ ಪ್ರಯುಕ್ತ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ‘ಪ್ರೊ ಕಬಡ್ಡಿ’ ಪಂದ್ಯಾಟವನ್ನು ಬುಧವಾರ ನಗರದ ನೆಹರೂ ಮೈದಾನದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ‘ಅಡಿಕೆ ಹಿಂಗಾರ’ ಅರಳಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಅರಣ್ಯ ಇಲಾಖೆಯ ಕಬಡ್ಡಿ ಮತ್ತು ವಾಲಿಬಾಲ್ ತಂಡ ರಚಿಸಲು ನಿಯಮಾವಳಿ ರೂಪಿಸಲಾಗುವುದು ಎಂದರು.
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ‘ರಾಜ್ಯ ಸರಕಾರವು ಕ್ರೀಡಾ ಚಟುವಟಿಕೆಗೆ ಸದಾ ಪ್ರೋತ್ಸಾಹ ನೀಡಲು ಬದ್ಧವಾಗಿದೆ. ನಗರದ ಎಮ್ಮೆಕೆರೆ ಮೈದಾನದಲ್ಲಿ ನಿರ್ಮಿಸಲ್ಪಡುವ ಈಜುಕೊಳವು ಮೂರು ತಿಂಗಳೊಳಗೆ ಕ್ರೀಡಾಳುಗಳ ಬಳಕೆಗೆ ಸಿದ್ಧವಾಗಲಿದೆ. ಅಲ್ಲದೆ, 4.50 ಕೋಟಿ ರೂ.ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಸ್ಥಾಪಿಸಲು ಸಿದ್ಧತೆ ನಡೆದಿದೆ. ಜ.16ರಂದು ಮೂಡುಬಿದಿರೆಯಲ್ಲಿ ರಾಷ್ಟ್ರಮಟ್ಟದ ಅಂತರ್ ವಿ.ವಿ. ಕ್ರೀಡಾ ಸ್ಪರ್ಧೆ ಆಯೋಜಿಸಲಾಗುವುದು’ ಎಂದು ಹೇಳಿದರು.
ಮೇಯರ್ ಮಹಾಬಲ ಮಾರ್ಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿ.ಪಂ.ಉಪಕಾರ್ಯದರ್ಶಿ ಉಮೇಶ್, ಮೂಡಾ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಪ್ರಭಾರ ಆಯುಕ್ತ ಗೋಕುಲ್ ದಾಸ್ ನಾಯಕ್, ವಾರ್ತಾಧಿಕಾರಿ ಖಾದರ್ ಷಾ, ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಕೋಟ್ಯಾನ್, ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ತಾಲೂಕು ಅಧ್ಯಕ್ಷ ಗಿರಿಧರ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಕ್ರೀಡಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಎಂ.ಆರ್.ಪೂವಮ್ಮ, ಸಹನಾ ನಾಗರಾಜ್, ರಾಷ್ಟ್ರೀಯ ಕ್ರೀಡಾಪಟುಗಳಾದ ಉದಯ ಚೌಟ, ಸುಕೇಶ್ ಹೆಗ್ಡೆ, ಪ್ರಶಾಂತ್ ರೈಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.










