ಕನ್ನಡ ವಾರ್ತೆಗಳು

ದ.ಕ ಜಿಲ್ಲೆ ಮತ್ತು ಉಡುಪಿ ಸದಸ್ಯತಾ ಅಭಿಯಾನ 2014-15 ಕಾರ್ಯಕರ್ತರ ಸಭೆ ಉದ್ಘಾಟನೆ.

Pinterest LinkedIn Tumblr

shobh_karndlje_photo_1

ಮಂಗಳೂರು,ಡಿ.31 : ಕಳೆದೆರಡು ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರಕಾರವು ದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಪರಿಣಾಮ ರಕ್ಷಣಾ ವಿಭಾಗವೂ ಸೇರಿದಂತೆ ವಿವಿಧ ಇಲಾಖೆಗಳ ಸ್ಥಿತಿ ಆತಂಕಕಾರಿಯಾಗಿದೆಯಾದರೂ ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಯ ವೇಗ ಹೆಚ್ಚುತ್ತಿದ್ದು, ರಾಜಕೀಯ ಬದಲಾವಣೆಯು ಅನುಭವಕ್ಕೆ ಬರುತ್ತಿದೆ ಎಂದು ಉಡುಪಿ ಸಂಸದೆ ಕು| ಶೋಭಾ ಕರಂದ್ಲಾಜೆಯವರು ಹೇಳಿದರು.

ಅವರು ಜಗನ್ನಾಥರಾವ್ ಜೋಷಿ ಸೌಧ, ಮಂಗಳೂರು ಇಲ್ಲಿ ಜರಗಿದ ಭಾರತೀಯ ಜನತಾ ಪಾರ್ಟಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸದಸ್ಯತಾ ಅಭಿಯಾನದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಸ್ತೂರಿ ರಂಗನ್ ವರದಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದೊಂದಿಗೆ ಕರ್ನಾಟಕ ರಾಜ್ಯ ಸರಕಾರವು ವ್ಯವಹರಿಸಬೇಕಾಗಿದ್ದು, ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ವರದಿಯ ಗುಣಾವಗುಣಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಸಾಮಾನ್ಯ ಜ್ಞಾನದ ಕೊರತೆಯಿದ್ದು, ಸಂತ್ರಸ್ತರ ಸಮಸ್ಯೆಯ ಬಗ್ಗೆ ಉದಾಸೀನತೆ ತೋರ್ಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಪ್ರಧಾನಿಯವರನ್ನು ಭೇಟಿಯಾಗಲು ರಾಜ್ಯದ ಸಂಸದರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

shobh_karndlje_photo_3

ಬಿಜೆಪಿಯ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್ ಸಂತೋಷ್ ಸಂಘಟನಾ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಮುಂಬರುವ ಜನವರಿ 24 ಮತ್ತು 25  ರಂದು ಸದಸ್ಯತ್ವ ಮಹಾ ಅಭಿಯಾನ (ಮೊದಲ ಹಂತ) ಕ್ಕೆ ಕರೆ ನೀಡಲಾಗಿದ್ದು, ಆ ಸಮಯದಲ್ಲಿ ಮನೆ ಮನೆ ಭೇಟಿ ನೀಡಿ ಸದಸ್ಯತ್ವವನ್ನು ನೊಂದಾಯಿಸಬೇಕೆಂದೂ, ಪ್ರತೀ ಸಕ್ರಿಯ ಪ್ರಮುಖ ಕಾರ್ಯಕರ್ತರ ಮನೆಯಲ್ಲಿ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಜನವರಿ 26 ರಂದೇ ನಡೆಸಬೇಕೆಂದು ಸೂಚಿಸಿದರು. ಸಕ್ರಿಯ ಕಾರ್ಯಕರ್ತರ ಸಮಾವೇಶವನ್ನು ಎಲ್ಲಾ ಮಂಡಲ ಮಟ್ಟದಲ್ಲಿ ಜನವರಿ 14 ರೊಳಗೆ ನಡೆಸುವುದೆಂದು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ನಳಿನ್ ಕುಮಾರ್ ಕಟೀಲ್ ಮಾತನಾಡಿ ಸದಸ್ಯತ್ವ ಅಭಿಯಾನದಲ್ಲಿ ಕಾರ್ಯಕರ್ತರು ಹಬ್ಬದ ವಾತವರಣದಲ್ಲಿ ಭಾಗವಹಿಸಿ ನಿರೀಕ್ಷೆಯನ್ನು ಸಾಕಾರಗೊಳಿಸಬೇಕೆಂದೂ, ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಜನಾಭಿಪ್ರಾಯ ರೂಪಿಸಲು ಕಾರ್ಯೋನ್ಮುಖರಾಗಬೇಕೆಂದೂ ಮುಂಬರುವ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬಲ ವೃದ್ಧಿಯಾಗುವಂತೆ ನೋಡಿಕೊಳ್ಳಬೇಕೆಂದು ಕರೆಯಿತ್ತರು.

ಗೋಹತ್ಯಾ ನಿಯಂತ್ರಣ ವಿಧೇಯಕ ಹಿಂತೆಗೆತದ ನಿರ್ಧಾರವು ಗೋ ಕಳ್ಳತನವನ್ನು ಸಕ್ರಮಗೊಳಿಸುವ ಪ್ರಯತ್ನವಾಗಿದ್ದು, ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ದುರುದ್ದೇಶದಿಂದ ಕೂಡಿದೆ. ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ಬಿಜೆಪಿ ರಾಜ್ಯ ಘಟಕವು ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಸಂಘಟಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ದ.ಕ.ಜಿಲ್ಲಾ ಪ್ರಭಾರಿ ಶಾಸಕ ಸುನೀಲ್ ಕುಮಾರ್ ಹೇಳಿದರು.

shobh_karndlje_photo_2

ಕಳೆದ 9 ತಿಂಗಳಿಂದ ರಾಜ್ಯದ ಗ್ರಾಮ ಪಂಚಾಯತ್‌ಗಳಿಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕಳೆದ ಅವಧಿಯ ಬಿಜೆಪಿ ಆಡಳಿತದಲ್ಲಿ ವಿಧಾನಸಭಾ ಕ್ಷೇತ್ರವೊಂದಕ್ಕೆ ವರ್ಷಕ್ಕೆ 100  ಆಶ್ರಯ ವಸತಿ ಮನೆಗಳನ್ನು ನೀಡುತ್ತಿದ್ದರೆ, ಪ್ರಸ್ತುತ ಸರಕಾರವು 20 ಆಶ್ರಯ ಮನೆಗಳನ್ನು ಘೋಷಿಸಿದ್ದರೂ ಯಾವುದೇ ಅನುದಾನವನ್ನು ಒದಗಿಸಿರುವುದಿಲ್ಲ. ರಾಜ್ಯಾದ್ಯಂತ ರೇಷನ್ ಕಾರ್ಡ್ ಸಮಸ್ಯೆ ಬಿಗಡಾಯಿಸುತ್ತಿದ್ದು, ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಕುಮ್ಕಿ ಭೂಮಿ ಮತ್ತು ಡೀಮ್ಡ್ ಅರಣ್ಯ ಬಗ್ಗೆ ಸ್ಪಷ್ಟ ನಿಲುವು ಇಲ್ಲದಿದ್ದರೂ ಭೂಮಿ ಒತ್ತುವರಿ ಮಾಡಿದ ಭೂ ರಹಿತರಿಗೆ ಸರಕಾರ ನೋಟೀಸು ನೀಡಿದೆ. ಮರಳುಗಾರಿಕೆ ದಂಧೆ ವ್ಯಾಪಕವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ಯಾಮಲ ಕುಂದರ್, ಉಭಯ ಜಿಲ್ಲೆಗಳ ಸದಸ್ಯತಾ ಅಭಿಯಾನದ ಪ್ರಮುಖರಾದ ಸಂಜೀವ ಮಠಂದೂರು ಮತ್ತು ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಜೆ.ಕೃಷ್ಣಪಾಲೆಮಾರ್, ಎನ್.ಯೋಗೀಶ್ ಭಟ್, ನಾಗರಾಜ ಶೆಟ್ಟಿ, ರಘುಪತಿ ಭಟ್, ಎ.ರುಕ್ಮಯ್ಯ ಪೂಜಾರಿ, ಕೆ.ಜಯರಾಮ ಶೆಟ್ಟಿ, ಮಲ್ಲಿಕಾ ಪ್ರಸಾದ್, ಕೆ.ಪದ್ಮನಾಭ ಕೊಟ್ಟಾರಿ, ಕೆ.ಮೋನಪ್ಪ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಶ್ರೀ ಬಿ. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Write A Comment