ಕನ್ನಡ ವಾರ್ತೆಗಳು

ಸಾಹಸ ಪ್ರದರ್ಶನಕ್ಕೂ ಸೈ…ಸಾಂಸ್ಕೃತಿಕ ಪ್ರದರ್ಶನಕ್ಕೂ ಸೈ..; ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ 6ನೇ ಹೊನಲು ಬೆಳಕಿನ ಕ್ರೀಡೋತ್ಸವ

Pinterest LinkedIn Tumblr

ಕುಂದಾಪುರ: ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ಶಾಲಾ ಕ್ರೀಡೋತ್ಸವವು ಶಾಲೆಯ ವೈಶಿಷ್ಟ್ಯಗಳಲ್ಲಿ ಒಂದು. ಶಾಲೆಯು ಎಲ್ಲಾ ವಿದ್ಯಾರ್ಥಿಗಳಿಂದ ಏಕ ರೀತಿಯ ವಸ್ತ್ರ ವಿನ್ಯಾಸದೊಂದಿಗೆ ಶಾಲಾ ಮೈದಾನದಲ್ಲಿ ನಡೆಯುವ ವೈವಿಧ್ಯಮಯ ಸಾಮೂಹಿಕ ಪ್ರದರ್ಶನಗಳು ಸಂಪನ್ನಗೊಂಡಿತು. ಪ್ರಕೃತ 5 ಕ್ರೀಡೋತ್ಸವಗಳು ನಡೆದಿದ್ದು ಪ್ರತಿ ಬಾರಿಯೂ ಪ್ರದರ್ಶನಗಳಲ್ಲಿ ವಿಭಿನ್ನತೆ, ವೈವಿಧ್ಯತೆಗಳು ಕಾರ್ಯಕ್ರಮದ ವಿಶೇಷತೆ. ಮಕ್ಕಳ ಸಾಹಸ ಸಾಂಸ್ಕೃತಿಕ ಹಾಗೂ ಕ್ರೀಡಾಸ್ಫೂರ್ತಿ ಮತ್ತು ಸಶಕ್ತತೆಗೆ ತೋರಿಸುವ ಈ ಕ್ರೀಡಾಕೂಟ  ಶಾಲೆಯ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.

SevaSangama_Vidya Kendra_Tekkatte (12) SevaSangama_Vidya Kendra_Tekkatte (13) SevaSangama_Vidya Kendra_Tekkatte (10) SevaSangama_Vidya Kendra_Tekkatte (11) SevaSangama_Vidya Kendra_Tekkatte (8) SevaSangama_Vidya Kendra_Tekkatte (7) SevaSangama_Vidya Kendra_Tekkatte (6) SevaSangama_Vidya Kendra_Tekkatte (9) SevaSangama_Vidya Kendra_Tekkatte (3) SevaSangama_Vidya Kendra_Tekkatte SevaSangama_Vidya Kendra_Tekkatte (5) SevaSangama_Vidya Kendra_Tekkatte (4) SevaSangama_Vidya Kendra_Tekkatte (2) SevaSangama_Vidya Kendra_Tekkatte (14) SevaSangama_Vidya Kendra_Tekkatte (1)

ಒಂದೇ ರೀತಿಯ ತಾಳ, ವಾದ್ಯ ಮತ್ತು ಲಯಬದ್ಧವಾದ ಸಂಪುರ್ಣ ಸ್ವದೇಶಿ ವಾದನ ತಂಡ ಏಕ ರೀತಿಯ ವಂಶಿ, ಆನಕ, ಶಂಖ, ತ್ರಿಭುಜ, ಪಣವ, ಜಲ್ಲರಿ ಬಾರಿಸುವ ಘೋಷ್ ಪ್ರದರ್ಶನದೊಂದಿಗೆ ಆರಂಭಗೊಂಡ ಕ್ರೀಡೋತ್ಸವವು ಪಥ ಸಂಚಲನಗೈಯುವ ಘೋಷ್ ಪತಕದ ಪ್ರದರ್ಶನ, ಶಿಶುನೃತ್ಯ, ಮೋಹಿನಿ ಅಟ್ಟಂ ವಸ್ತ್ರ ವಿನ್ಯಾಸದಲ್ಲಿ ನಡೆಯುವ ಬಾಲಕಿಯರ ವಿಶೇಷ ನೃತ್ಯ ಶ್ರೀಕೃಷ್ಣನ ಗೋಕುಲ ವೃಂದಾವನಗಳ ವೈಭವವನ್ನು ನೆನಪಿಸುವ ಜಡೆಕೋಲಾಟ, ಜಾನಪದ /ಹಾಡುಗಳ ಹಿನ್ನಲೆಯಲ್ಲಿ ಏಕನಾದದಲ್ಲಿ ಕೋಲನ್ನು ಹೊಡೆಯುತ್ತಾ ವಿವಿಧ ಆಕೃತಿಗಳನ್ನು ರಚಿಸುವ ಬಾಲಕ – ಬಾಲಕಿಯರ ಸಾಮೂಹಿಕ ನೃತ್ಯ, ಕೊಡೆ ನೃತ್ಯ, ಕೊಡಪಾನ ನೃತ್ಯ ಹೀಗೆ ವಿವಿಧ ನೃತ್ಯಗಳಲ್ಲಿ ಒಂದೇ ಬಾರಿ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನರ್ತಿಸಿದರು. ದೀಪಾರತಿಯುವ ಕ್ರೀಡೋತ್ಸವದ ಇನ್ನೊಂದು ಪ್ರಮುಖ ಆಕರ್ಷಣೆ ಕೈಯಲ್ಲಿ ದೀಪ ಹಿಡಿದ ಬಾಲಕ – ಬಾಲಕಿಯರು ದೀಪಗಳಿಂದಲೇ ವಿವಿಧ ಆಕೃತಿಗಳನ್ನು ರಚಿಸಿದರು.

ದೊಂದಿಯೊಂದಿಗೆ ಯಕ್ಷ ರೂಪಕ: ಹಿಂದಿನ ಕಾಲದ ದೊಂದಿ ಬೆಳಕಿನ ಯಕ್ಷಗಾನದಿಂದ ಪ್ರೇರಣೆ ಪಡೆದ ದೊಂದಿ ಬೆಳಕಿನೊಂದಿಗೆ ಮತ್ತು ಯಕ್ಷ ರೂಪಕ ಕ್ರೀಡೋತ್ಸವದ ಮತ್ತೊಂದು ವಿಶೇಷವಾಗಿತ್ತು. ಉರಿಯುತ್ತಿರುವ ದೊಂದಿ ಬೆಳಕಿನ ನಡುವೆ ಕರಾವಳಿಯ ಗಂಡುಕಲೆ ಯಕ್ಷಗಾನದ ಪ್ರಸಂಗ ‘ ಅಭಿಮನ್ಯು ಚಕ್ರವ್ಯೂವ ಪ್ರವೇಶ’ ಜನರನ್ನು ಮಂಕ್ತಮುಗ್ಧರನ್ನಾಗಿಸಿತ್ತು.

ಸಾಹಸಕ್ಕೂ ಇಲ್ಲಿ ಪ್ರಾಮುಖ್ಯತೆ: ಇಲ್ಲಿ ನಡೆದ ಕ್ರೀಡೋತ್ಸವದಲ್ಲಿ ಕೇವಲ ಸಾಮೂಹಿಕ ನೃತ್ಯಗಳಷ್ಟೇ ಅಲ್ಲ, ಸಾಹಸಕ್ಕೂ ಸಮಾನ ಆದ್ಯತೆ ನೀಡಲಾಗಿತ್ತು. ಆದರೇ ಇದು ಕೇವಲ ಶಕ್ತಿ ಪ್ರದರ್ಶನವಾಗಿರಲಿಲ್ಲ. ಸರ್ಕಸ್ ಮತ್ತು ಟಿ.ವಿ. ಶೋಗಳಲ್ಲಿ ಪರಿಣಿತರು ಪ್ರದರ್ಶಿಸುವ ಬೆಂಕಿ ದ್ವಿ ಚಕ್ರ ವಾಹನ ಮತ್ತು ಹಗ್ಗಗಳನ್ನು ಬಳಸಿ ಮಾಡುವ ಸಾಹಸಗಳು ವಿದ್ಯಾರ್ಥಿಗಳ ಸಾಹಸ ಮನೋಭಾವಕ್ಕೆ ಹಿಡಿದ ಕೈಗನ್ನಡಿ, ಏಕ ಚಕ್ರದ (ಸಿಂಗಲ್ ವೀಲ್) ಸೈಕಲ್‌ನಲ್ಲಿ ಬಾಲಕಿಯರು ರಚಿಸಿದ ಸರಪಳಿ ಚಕ್ರ ಜನರನ್ನು ಬೆರಗುಗೊಳಿಸಿತ್ತು. ನಿಯುದ್ಧ (ಕರಾಟೆ), ಯೋಗ ಗುಚ್ಛ, ಪಿರಾಮಿಡ್ ಪ್ರದರ್ಶನ ಹೀಗೆ ಎಲ್ಲಾ ಸಾಹಸ ಪ್ರದರ್ಶನಗಳು ಕ್ರೀಡೋತ್ಸವದಲ್ಲಿ ಗಮನ ಸೆಳೆದ ಅಂಶಗಳಾಗಿತ್ತು.

ವಿಶೇಷ ಪ್ರದರ್ಶನಗಳು: ಮಹಾರಾಷ್ಟ್ರದ ವಿಶ್ವ ವಿಖ್ಯಾತ ಸಾಹಸ ಕಲೆಯಾದ ಮಲ್ಲಕಂಭವನ್ನು ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಬಹಳ ಸಲೀಸಾಗಿ ಮಾಡಿದರು. ಕಠಿಣವಾದ ಕಂಭವನ್ನು ಸರಸರನೆ ಏರಿ ಯೋಗಾಸನ, ಯೋಗ ಗುಚ್ಛಗಳನ್ನು ಮಾಡಿದರು. ಈ ಬಾರೀ ವಿದ್ಯಾರ್ಥಿನೀಯರು ಮಲ್ಲಕಂಬ ಏರಿ ಕಸರತ್ತು ಮಾಡಿದ್ದು ಇನ್ನೊಂದು ವಿಶೇಷ. ಅಲ್ಲದೇ ಹಗ್ಗದ ಮೇಲಿನ ಸಾಹಸ (ರೋಫ್ ಬ್ಯಾಲೆನ್ಸ್) ಹಗ್ಗದ ಮೇಲೆ ಯೋಗಾಸನ, ಉರಿಯುತ್ತಿರುವ ಬೆಂಕಿಯ ರಿಂಗ್‌ನೊಳಗೆ ಹಾರುವ ವಿದ್ಯಾರ್ಥಿಗಳ ಧೈರ್ಯ, ಸಾಹಸ, ಶೃದ್ಧೆ ಸಮಯ ಪಾಲನೆಗೆ ಇಡೀ ಪ್ರೇಕ್ಷಕ ಸಮುದಾಯವೇ ತಲೆದೂಗಿಸಿತ್ತು. ಗಾಜಿನ ಬಾಟಲಿಗಳ ಮೇಲೆ ಸಾಹಸ (ಬಾಟಲ್ ಬ್ಯಾಲೆನ್ಸ್) ಬಾಡಲಿಗಳ ಮೇಲೆ ನ್ನು ಬಳಸಿ ಅದರ ಮೇಲೆ ಸ್ಟೂಲ್‌ಗಳನ್ನಿಟ್ಟು 3-4 ಸ್ಥರಗಳನ್ನು ಬಾಟಲಿ ಸ್ಟೂಲ್‌ಗಳಿಂದ ರಚಿಸಿ ಅದರ ಮೇಲೆ ಕುಳಿತು ಯೋಗಾಸನವನ್ನು ಪ್ರದರ್ಶನ ನೋಡುಗರ ಮೈನವರೇಳಿಸಿತ್ತು.

ಏನೇನು ಇತ್ತು; ಮಕ್ಕಳ ಸಾಮೂಹಿಕ ನೃತ್ಯ, ಯೋಗಾಸನ, ಪಿರಾಮಿಡ್, ಬೆಂಕಿಯಲ್ಲಿ ಸಾಹಸ, ಕೂಪಿಕಾ ಸಮತೋಲನ, ದೊಂದಿ ಮತ್ತು ಯಕ್ಷ ರೂಪಕ, ದೀಪಾರತಿ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ, ದಂಡ ಪ್ರದರ್ಶನ, ಸಾಮೂಹಿಕ ಸ್ತ್ರೀ ವೇಷ ನೃತ್ಯ, ಜಾನಪದ ಹಾಡಿಗೆ ರೂಪಕ ಪ್ರಕಾರದ ನೃತ್ಯ, ಹಗ್ಗದ ಮೇಲಿನ ಸಮತೋಲನ, ಬೆಂಕಿಯ ಸಾವಿರ ಕೈಗಳ ನೃತ್ಯ,ಜನಮನಸೂರೆಗೊಂಡಿತ್ತು. ಆದರ್ಶಗಳ ಪೀಠಿಕೆಯಲ್ಲಿ ಸಂಯೋಜನೆಗೊಂಡ ಶಾಲಾ ಸಾಮೂಹಿಕ ಪ್ರದರ್ಶನದಲ್ಲಿ ಪವಿತ್ರ ಗಂಗೆ ಹರಿದು ಬಂದ ಬಗೆ, ಗಂಗೆಯ ಪಾವಿತ್ರ್ಯತೆ, ಗಂಗಾ ಶುದ್ಧೀಕರಣ ಅಗತ್ಯ, ಗಂಗೆ ಮಲೀನವಾಗುತ್ತಿರುವ ಬಗ್ಗೆ ಶಾಲೆಯ ಸರ್ವ ಮಕ್ಕಳು ನಡೆಸಿದ ‘ಗಂಗಾವತರಣ’ ರೂಪಕ ನಿಜಕ್ಕೂ ಅದ್ಭುತವೆನಿಸಿತ್ತು. ಇದೇ ಸಂದರ್ಭದಲ್ಲಿ ಸ್ವಚ್ಚಭಾರತ ಪರಿಕಲ್ಪನೆಯ ಬಗೆಯೂ ನೆರೆದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿತ್ತು.

15 ದಿನಗಳ ತರಭೇತಿ: ಇಲ್ಲಿನ ಮಕ್ಕಳು ಇಷ್ಟೆಲ್ಲಾ ಕಸರತ್ತು ಮಾಡಿದ್ದು ನಿಜ. ಆದರೇ ಇದನ್ನೆಲ್ಲಾ ಕಲಿಯಲು ಪಡೆದ ತರಬೇತಿ ಮಾತ್ರ ಕೇವಲ 15 ದಿನಗಳು. ಇದೇ ಶಾಲೆಯ ನೂರಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳು, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಸೇರಿದಂತೆ ಹಲವು ಸಾರ್ವಜನಿಕರ ಸಹಕಾರದಲ್ಲಿ ಸಂಪೂರ್ಣ ಕ್ರೀಡೋತ್ಸವದ ತಯಾರು ನಡೆದಿತ್ತು.

ಕಿರು ತರಬೇತಿಯೊಂದಿಗೆ ಹೊನಲು ಬೆಳಕಿನಲ್ಲಿ 3 ಗಂಟೆಗಳ ಕಾಲ ಸತತವಾಗಿ ಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನಡೆದ ಕ್ರೀಡೋತ್ಸವ ಯಶಸ್ವಿಯಾಗಿದೆ ಎನ್ನುವುದು ಸಂಪೂರ್ಣ ಕ್ರೀಡೋತ್ಸವವನ್ನು ವೀಕ್ಷಿಸಿದವರ ಮಾತು. ಕ್ರೀಡೋತ್ಸವದ ಯಶಸ್ವಿ ಪ್ರದರ್ಶನಕ್ಕೆ ಶಾಲೆಯ ಹಿರಿಯ ವಿದ್ಯಾರ್ಥಿಗಳ ಪಾತ್ರ ಗಣನೀಯವಾದುದು ಎಂದು ಶಾಲೆಯ ಸಂಚಾಲಕ ರಮೇಶ್ ನಾಯಕ್ ತೆಕ್ಕಟ್ಟೆ ಹೇಳುತ್ತಾರೆ.

ಸಾವಿರಾರು ಜನರು: ಹೀಗೆ ನೂತನ ನೃತ್ಯಗಳು, ಹೊಸತನದ ವಸ್ತ್ರ ವಿನ್ಯಾಸ, ನವ ಸಂದೇಶದೊಂದಿಗೆ ಮೂಡಿ ಬಂದ ಕ್ರೀಡೋತ್ಸವಕ್ಕೆ ಸಹಸ್ರಾರು ಜನ ಸಾಕ್ಷಿಯಾಗಿದ್ದರು.
ವಾರ್ಷಿಕೋತ್ಸವ ನಡೆಸಿದರೇ ಶಾಲೆಯ ಎಲ್ಲಾ ಮಕ್ಕಳಿಗೂ ಅವಕಾಶ ಕಲ್ಪಿಸಲು ಕಷ್ಟಸಾಧ್ಯವಾಗುತ್ತದೆ. ಹಾಗಾಗಿಯೇ ನೂತನ ಪ್ರಯತ್ನದೊಂದಿಗೆ ಕ್ರೀಡೋತ್ಸವವನ್ನು ಕಳೆದ ಹಲವು ವರ್ಷಗಳಿಂದ ನಡೆಸುತ್ತಿದ್ದು ಈ ಬಾರಿ 6 ನೇ ವರ್ಷವಾಗಿದೆ. ಈ ಕ್ರೀಡೋತ್ಸವದ ಮೂಲಕ ಶಾಲೆಯಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳಿಗೂ ಇದರಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅನುಕೂಲಕರವಾಗಲಿದೆ.
– ದಿವ್ಯಾ ನಾಯಕ್ (ಹಿರಿಯ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ)

ಚಿತ್ರಗಳು- ದರ್ಶನ್ ಸ್ಟುಡಿಯೋ ತೆಕ್ಕಟ್ಟೆ

Write A Comment