ಕನ್ನಡ ವಾರ್ತೆಗಳು

ವೇಗ ನಿಯಂತ್ರಿಕ (ಹಂಪ್ಸ್) ಅಳವಡಿಕೆಯಲ್ಲಿ ಕಳಪೆ – ಸದಸ್ಯರ ಆರೋಪ; ಪುರಸಭೆ ಸಾಲ ಮನ್ನಾಕ್ಕೆ ಆಗ್ರಹ

Pinterest LinkedIn Tumblr

ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾದ ವೇಗ ನಿಯಂತ್ರಕಗಳು ಕೆಲವೇ ತಿಂಗಳಲ್ಲಿ ಹದಗೆಟ್ಟು ಹೋಗಿದ್ದು, ಗುತ್ತಿಗೆದಾರರಿಗೆ ಬಿಲ್ ಪಾವತಿಯನ್ನು ತಡೆಹಿಡಿಯಬೇಕು ಎನ್ನುವ ಬಲವಾದ ಆಗ್ರಹ ಪುರಸಭಾ ಸದಸ್ಯರಿಂದ ವ್ಯಕ್ತವಾಗಿದೆ. ಕಾಮಗಾರಿಯಲ್ಲಿ ನ್ಯೂನತೆ ಇದ್ದು ಇದನ್ನು ಸರಿಪಡಿಸದ ವಿನಃ ಹಣ ಪಾವತಿ ಮಾಡಬಾರದು ಎನ್ನುವ ಒತ್ತಾಯ ಪುರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಳಿ ಬಂತು.

Kundapura_Purasabhe_Meeting

ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂತು. ಪುರಸಭೆಯ ವ್ಯಾಪ್ತಿಯ ರಸ್ತೆಯಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸುವ ಸಲುವಾಗಿ ಪುರಸಭೆ ಹಾಗೂ ಸಂಚಾರ ಪೊಲೀಸ್ ರಸ್ತೆಗಳಿಗೆ ಹಂಪ್ಸ್‌ಗಳನ್ನು ಅಳವಡಿಸಿದ್ದು ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು. ಈಗ ಅದು ವಾಯಿದೆಯ ಒಳಗೆ ಹಾಳಾಗುತ್ತಿದ್ದು, ಈ ಬಗ್ಗೆ ಪುರಸಭೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂತು.

ರಾಜೇಶ ಕಾವೇರಿ, ವಿಜಯ ಎಸ್.ಪೂಜಾರಿ, ರವಿಕಲಾ, ಪ್ರಭಾಕರ ಕೋಡಿ, ದೇವಕಿ ಸಣ್ಣಯ್ಯ, ಶ್ರೀಧರ್ ಮೊದಲಾದ ಸದಸ್ಯರು ಹಂಪ್ಸ್ ದುರವಸ್ಥೆ ಬಗ್ಗೆ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರು, ಕಳೆದ ಬಾರಿಯ ಸಭೆಯಲ್ಲಿ ಹಂಪ್ಸ್‌ನ ಸಾಧಕ-ಬಾಧಕಗಳ ನೋಡಿಕೊಂಡು ಬಿಲ್ ಪಾವತಿ ನಿರ್ಧಾರ ಮಾಡಲಾಗಿತ್ತು. ಈ ತನಕ ಬಿಲ್ ಪಾವತಿ ಆಗಿಲ್ಲ. ಮುಂದೆ ಏನು ಮಾಡಬೇಕು ಎನ್ನುವುದು ಸದಸ್ಯರ ತೀರ್ಮಾನ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ್ದೇನೆ ಎಂದರು. ಉಪಾಧ್ಯಕ್ಷ ನಾಗರಾಜ ಕಾಮಧೇನು ಮಾತನಾಡಿ, ಹಂಪ್ಸ್‌ಗಳು ಹದಗೆಟ್ಟಿರುವುದರ ಬಗ್ಗೆ ಚರ್ಚೆ ಆಗುತ್ತಿದೆ. ಇದಕ್ಕೆ ಪರ್ಯಾಯವಾದ ವ್ಯವಸ್ಥೆ ಆಗಬೇಕು. ಈಗಾಗಲೇ ಮಣಿಪಾಲದಲ್ಲಿರುವ ವಿಧಾನವನ್ನು ಪ್ರಾಯೋಗಿಕವಾಗಿ ಕುಂದಾಪುರದಲ್ಲಿ ಅನುಷ್ಠಾನಿಸಿ, ನಂತರ ಮುಂದುವರಿಯೋಣ. ಈಗಾಗಲೇ ಹಂಪ್‌ನ ಗುತ್ತಿಗೆ ನಿರ್ವಹಿಸಿದ ಸಂಸ್ಥೆ ಪೋನ್‌ಕರೆಗೂ ಸಿಗುತ್ತಿಲ್ಲ. ಇ-ಮೇಲ್ ಮಾಡಿದರೂ ಸ್ಪಂದನೆ ಇಲ್ಲವಾಗಿದೆ ಎಂದರು.

ಸದಸ್ಯೆ ಗುಣರತ್ನ ಮಾಡಿ ಹಾಳಾಗಿರುವಲ್ಲಿ ಪ್ಯಾಚ್‌ವರ್ಕ್ಸ ಮಾಡುವುದೇ ಬೇಡ. ಬದಲಿ ವ್ಯವಸ್ಥೆ ಕಲ್ಪಿಸಿ ಎಂದರು. ಈ ಬಗ್ಗೆ ಅಧ್ಯಕ್ಷರು ಮಾತನಾಡಬೇಕು ಎಂದು ಸಂದೀಪ ಕೋಡಿ ಆಗ್ರಹಿಸಿದರು.

ಪುರಸಭೆ ಸಾಲ ಮನ್ನಾಕ್ಕೆ ಆಗ್ರಹ : ಪುರಸಭೆಗೆ ಎಡಿಬಿಯಿಂದ ನೀಡಲಾದ 9 ಕೋಟಿ ಸಾಲಕ್ಕೆ ಇಂದು ಬಡ್ಡಿಯೇ ದೊಡ್ಡದಾಗುತ್ತಿದೆ. ಪುರಸಭೆ ಸಾಲ ಇದೆ ಎಂದು ನೀರಿಗೆ ತೆರಿಗೆ ಹೆಚ್ಚಳ, ಇತ್ಯಾದಿ ಕರಗಳ ಹೆಚ್ಚಳ ಮಾಡಿ ಜನರ ತಲೆಮೇಲೆ ಭಾರ ಹಾಕುವುದು ಸರಿಯಲ್ಲ. ಎಡಿಬಿಯಿಂದ ಸಾಲ ಪಡೆಯುವ ಸಂದರ್ಭದಲ್ಲಿಯೂ ಗಂಭೀರ ಚರ್ಚೆಗಳು ನಡೆದಿದ್ದವು. ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ತಜ್ಞರು ಕೂಡಾ ಸಭೆಯಲ್ಲಿ ಸಲಹೆಗಳ ನೀಡಿದ್ದರು. ಸಾಲದ ಪಾವತಿ ಹೇಗೆ ಎನ್ನುವ ವಿಚಾರವೂ ಅಂದು ಚರ್ಚಿತವಾಗಿತ್ತು. ಈಗ ಸಾಲದ ಮೊತ್ತ ಹದಿನಾಲ್ಕುವರೆ ಕೋಟಿ ಆಗಿದೆ. ಈ ಮೊತ್ತವನ್ನು ಸರ್ಕಾರ ಮನ್ನಾ ಮಾಡಬೇಕು. ಈ ಬಗ್ಗೆ ನಾವು ನಿರ್ಣಯ ಮಾಡಬೇಕು ಎಂದು ಹಿರಿಯ ಸದಸ್ಯೆ ಗುಣರತ್ನ ಆಗ್ರಹಿಸಿದರು.
ಮುಖ್ಯಾಧಿಕಾರಿಗಳು ಮಾತನಾಡಿ ಪುರಸಭೆಯ ವಾರ್ಷಿಕ ಆಧಾಯ ಎಲ್ಲಿಗೂ ಸಾಲುವುದಿಲ್ಲ. ಬಾಡಿಗೆಯಿಂದ ೩.೪೦ಲಕ್ಷ, ನೀರಿನ ಕರದ ಮೊತ್ತ ನೀರು ನಿರ್ವಹಣೆಗೆ ಇತ್ಯಾದಿಗೆ ಆಗುತ್ತದೆ. ವ್ಯಾಪಾರ ತೆರಿಗೆ 15 ವರ್ಷಗಳ ನಂತರ ಏರಿಕೆಯಾಗಿದೆ. 4 ಲಕ್ಷದಿಂದ 11 ಲಕ್ಷಕ್ಕೆ ಏರಿದೆ. ವಾರ್ಷಿಕ ಆಧಾಯ ೩.೫ಕೋಟಿ ಮಾತ್ರವಿದ್ದು ವಾರ್ಷಿಕ 1.30 ಕೋಟಿ ಬಡ್ಡಿ ಬರುತ್ತದೆ ಎಂದರು.

ನಾಥಮಯ ಕುಂದಾಪುರ : ಕೊಳಚೆಯಿಂದ ಕುಂದಾಪುರ ನಾಥಯಯವಾಗಿದೆ. ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದುರ್ನಾತ ಬರುತ್ತಿದೆ. ಬೇರೆ ಬೇರೆ ಊರುಗಳಿಂದ ಬರುವ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಅಲ್ಲಿದೆ ಎಂದು ನಾಮನಿರ್ದೇಶಿತ ಸದಸ್ಯ ಶಿವರಾಮ ಪುತ್ರನ್ ಹೇಳಿದರು. ಚಂದ್ರಶೇಖರ್ ಖಾರ್ವಿ ಮಾತನಾಡಿ ಆಸ್ಪತ್ರೆಗಳ ತ್ಯಾಜ್ಯಗಳು ಬೇಕಾಬಿಟ್ಟಿ ವಿಲೇವಾರಿ ಆಗುತ್ತಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಸೆಸ್‌ಪುಲ್ ಮೂಲಕ ತ್ಯಾಜ್ಯವನ್ನು ಸಂಗಂನ ಮೊದಲಿನ ಡಂಪಿಂಗ್ ಯಾರ್ಡ್‌ನಲ್ಲಿ ಬಿಡಲಾಗುತ್ತಿದೆ. ಇದೆಲ್ಲವನ್ನೂ ಕಂದಾವರದ ಡಂಪಿಂಗ್ ಯಾರ್ಡ್‌ಗೆ ಕಳುಹಿಸಬಹುದಲ್ಲ ಎಂದರು.

ಕುಂದಾಪುರ ತಹಶೀಲ್ದಾರ್ ಪುರಸಭೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಗಡಿ ಗುರುತು ಮಾಡುವ ಕೆಲಸ ಇನ್ನೂ ಆಗಿಲ್ಲ. ಈ ಬಗ್ಗೆ ನಾವು ಲಿಖಿತವಾಗಿ ಕೇಳಿದರೂ ಅವರು ಲಿಖಿತವಾಗಿ ಮಾಹಿತಿ ನೀಡುತ್ತಿಲ್ಲ.ಪುರಸಭಾ ಸದಸ್ಯರಿಗೆ ಗೌರವ ಕೊಡುವ ಔದಾರ್ಯತೆಯೂ ಅವರಿಗಿಲ್ಲ ಎಂದರು. ಕಡ್ಗಿ ರಸ್ತೆಯಲ್ಲಿ ಕಳಪೆ ಕಾಮಗಾರಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ರವಿಕಲಾ ಹೇಳಿದರು. ನಿಲ್ದಾಣವಲ್ಲದ ಸ್ಥಳಗಳಲ್ಲಿ ಖಾಸಗಿ ಬಸ್ಸಗಳ್ನು ಸಾಕಷ್ಟು ಸಮಯ ನಿಲ್ಲಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ತಗೆದುಕೊಳ್ಳಬೇಕು. ಪುರಸಭೆಯ ನಿರ್ಣಯಗಳು ಹಾಗೆಯೇ ಕಡತದಲ್ಲಿಯೇ ಉಳಿಯಲ್ಪಡುತ್ತವೆಯೇ ಹೊರತು ಅನುಷ್ಠಾನ ಆಗುವುದಿಲ್ಲ ಎಂದು ಪುಷ್ಪಶೇಟ್ ದೂರಿದರು.

ಬೀದಿ ನಾಯಿಗಳ ಉಪಟಳ ತಪ್ಪಿಸಿ : ಪುರಸಭೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದೆ. ಈಗಾಗಲೇ ಜನರಿಗೆ ಇದರಿಂದ ತೊಂದರೆಯಾಗಿದೆ. ದ್ವಿಚಕ್ರ ವಾಹನ ಸವಾರರು ಕೂಡಾ ತೊಂದರೆಗೆ ಒಳಗಾಗಿದ್ದಾರೆ. ಕೂಡಲೇ ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ವಸಂತಿ ಸಾರಂಗ ಹೇಳಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಈಗಾಗಲೇ ಬೀದಿನಾಯಿಗಳ ಸಂತಾನ ಹರಣಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದ್ದು, ಟೆಂಡರ್ ಕರೆಯಲಾಗಿದೆ. ಕೂಡಲೆ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಮಾಡುವ ಕ್ರಿಯೆ ನಡೆಯಲಿದೆ ಎಂದರು.

ಉಪಾಧ್ಯಕ್ಷ ನಾಗರಾಜ ಕಾಮಧೇನು, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Write A Comment