ಮಂಗಳೂರು,ಡಿ.18: ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ನಗರದ ಸೈಂಟ್ ಆಗ್ನೆಸ್ ಕಾಲೇಜು ಇದರ ಅಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಎ.ಆರ್.ಡಿಸೋಜ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ’ ಎಂಬ ವಿಷಯದ ಕುರಿತು ಕಾರ್ಯಗಾರವು ನಡೆಯಿತು. ಕನ್ನಡ ಸಾಹಿತ್ಯ ಲೋಕದಲ್ಲಿ ಹತ್ತೊಂಭತ್ತನೇ ಶತಮಾನವನ್ನು ಕ್ರೈಸ್ತರ ಸಾಹಿತ್ಯ ಎಂದು ಪರಿಗಣಿಸಬೇಕು ಎಂದು ಸಾಹಿತಿ ಡಾ.ಮೀನಾಕ್ಷಿ ರಾಮಚಂದ್ರ ಸಲಹೆ ನೀಡಿದರು.
ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಸಿಸ್ಟರ್ ಜೆಸ್ವಿನಾ ಕಾರ್ಯಗಾರ ಉದ್ಘಾಟಿಸಿದರು. ಹೊಸಗನ್ನಡ ಸಾಹಿತ್ಯದಲ್ಲಿ ನಾವು ಈಗ ಯಾವ ಮಟ್ಟದ ಬೆಳವಣಿಗೆಯನ್ನು ಕಂಡಿದ್ದೇವೆಯೋ ಅದಕ್ಕೆಲ್ಲ 19ನೇ ಶತಮಾನದ ಕ್ರೈಸ್ತ ಮಿಷಿನರಿಗಳ ಕೊಡುಗೆಯೇ ಕಾರಣ. ಧರ್ಮ ಪ್ರಚಾರದ ಜತೆಗೆ ಕನ್ನಡ ಭಾಷೆಯನ್ನು ಕಲಿತು ಜನಪದ ಕತೆಗಳು, ಗಾದೆಗಳು, ಪದಗಳು, ಪಾಡ್ದನಗಳನ್ನು ಸಂಗ್ರಹಿಸಿ, ಪಂಚಾಂಗಗಳನ್ನು ರಚಿಸಿ, ಪತ್ರಿಕೆಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ,ಸಾಹಿತ್ಯದ ಸೇವೆ ಎಂದರೆ ಕೇವಲ ಕಥೆ,ಕವನ ಬರೆಯುವುದಲ್ಲ. ನಾಡು ನುಡಿಯ ವಿಚಾರಧಾರೆಯಲ್ಲಿ ತೊಡಗಿಸಿ ಕೊಳ್ಳುವುದೇ ಸಾಹಿತ್ಯದ ಸೇವೆ ಎಂದರು.
ಎ.ಆರ್.ಡಿಸೋಜ ಕುಟುಂಬದ ಪ್ರತಿನಿಧಿ ರಾಮಚಂದ್ರ ಬಿ.,ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ, ಸಮಾಜಸೇವಕಿ ಜುಡಿತ್ ಮಸ್ಕರೇನಸ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಂಪೂರ್ಣಾನಂದ ಬಳ್ಕೂರು ಉಪಸ್ಥಿತರಿದ್ದರು. ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಕಾಲೇಜಿನ ವಿದ್ಯಾರ್ಥಿನಿಯರಾದ ಯಶಸ್ವಿನಿ, ಅನುಷಾ, ವಿಜೇತ ಅವರನ್ನು ಗೌರವಿಸಲಾಯಿತು. ಮಂಗಳೂರು ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಶ್ವಿನಿ ವಂದಿಸಿದರು. ವಾತ್ಸಲ್ಯ ಎಂ.ಆರ್.ಕಾರ್ಯಕ್ರಮ ನಿರೂಪಿಸಿದರು.