ಮಂಗಳೂರು,ಡಿ.18 : ಯೇಸು ಕ್ರಿಸ್ತರಲ್ಲಿದ್ದ ಮುಗ್ಧ ಮನಸ್ಸು ಮತ್ತು ತಮ್ಮನ್ನು ತಾವು ಸಾಮಾನ್ಯರು ಎಂಬುದಾಗಿ ಅವರಲ್ಲಿದ್ದ ಭಾವನೆ ಎಲ್ಲರೂ ಅಳವಡಿಸಿಕೊಳ್ಳುವುದೇ ಕ್ರಿಸ್ಮಸ್ ಹಬ್ಬದ ಸಂದೇಶ . ತಾನು ತನ್ನದು ಎಂಬ ಸ್ವಾರ್ಥ ತ್ಯಜಿಸಿದಾಗ ಮಾತ್ರ ಶಾಂತಿ ಸೌಹಾರ್ದತೆ ಎಲ್ಲೆಡೆ ನೆಲೆಸಬಲ್ಲದು ಎಂದು ಬಲ್ಮಠ ಕರ್ನಾಟಕ ಥಿಯಾಲಜಿಕಲ್ ಕಾಲೇಜಿನ ಪ್ರಿನ್ಸಿಪಾಲ್ ರೆ.ಡಾ. ಹನಿ ಕಬ್ರಾಲ್ ಅವರು ಹೇಳಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯ ಪಾಲನ ಸಮಿತಿಯ ಎಪಿಸ್ಕೊಪಲ್ ಸಿಟಿ ವಲಯ ವತಿಯಿಂದ ನಗರದ ಮಿಲಾಗ್ರಿಸ್ ಸಭಾಭವನದಲ್ಲಿ ಬುಧವಾರ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯ ಉಪಕುಲಸಚಿವ ಪ್ರೊ.ಪ್ರಭಾಕರ ನೀರುಮಾರ್ಗ, ಶಾಂತಿ ಪ್ರಕಾಶನದ ನಿರ್ವಾಹಕ ಮಹಮ್ಮದ್ ಕುಂಞಿ ಮುಖ್ಯ ಅತಿಥಿಯಾಗಿದ್ದರು. ಮಂಗಳೂರು ಧರ್ಮಪ್ರಾಂತ್ಯ ಪಾಲನ ಸಮಿತಿಯ ಎಪಿಸ್ಕೊಪಲ್ ಸಿಟಿ ವಲಯ ಅಧ್ಯಕ್ಷ ರೆ. ಫಾ.ಜೆ.ಬಿ.ಕ್ರಾಸ್ತ ಸ್ವಾಗತಿಸಿದರು. ಕಾರ್ಯದರ್ಶಿ ಅರುಣ್ ರಾಜ್ ಉಪಸ್ಥಿತರಿದ್ದರು.