ಮಂಗಳೂರು,ಡಿ.11 : ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಡಿಸೆಂಬರ್ರಿಂ 12ದ 14 ರ ವರೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವತುಳುವೆರೆ ಪರ್ಬ 2014 ಕಾರ್ಯಕ್ರಮದಲ್ಲಿ ಡಿಸೆಂಬರ್ 14 ರಂದು ಭಾನುವಾರ ಸಂಜೆ 3 ಗಂಟೆಗೆ ಎಸ್. ಆರ್.ಹೆಗ್ಡೆ ಚಾವಡಿ ವೇದಿಕೆಯಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯ ಕಲಾವಿದರಿಂದ ತುಳುನಾಡ್ದ ಪೊರ್‍ಲುತಿರ್‍ಲ್ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಡೆಯುವ ತುಳುನಾಡ್ದ ಪೊರ್‍ಲುತಿರ್‍ಲ್ ಸಾಂಸ್ಕೃತಿಕ ಕಾರ್ಯಕ್ರಮ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಸಂಯೋಜನೆಯಲ್ಲಿ ನವೀನ್ ಶೆಟ್ಟಿ ಅಳಕೆ ನಿರ್ದೇಶನ ನೀಡಿದ್ದಾರೆ.
ತುಳುನಾಡ್ದ ಪೊರ್‍ಲು -ತಿರ್‍ಲ್‌ನಲ್ಲಿ ತುಳುನಾಡಿನ ಆಚಾರ ವಿಚಾರ, ಸಂಸ್ಕೃತಿ ಮತ್ತು ಭಾವೈಕ್ಯವನ್ನು ಬಿಂಬಿಸಲಾಗಿದೆ. ಪರಶುರಾಮ ಸೃಷ್ಟಿ, ನಾಗಾರಾಧನೆ, ಜನಜೀವನ, ಕೃಷಿ ಚಟುವಟಿಕೆ, ತುಳುನಾಡ ಸಂಸ್ಕೃತಿ ಸೀಮಂತ, ಯಕ್ಷಗಾನ, ದೈವಾರಾಧನೆ, ತುಳುನಾಡಿನ ವೀರ ಪುರುಷರು, ಉತ್ತರಕ್ರಿಯೆ ಮೊದಲಾದ ಆಚಾರಗಳನ್ನು ಅಳವಡಿಸಲಾಗಿದೆ. ಪ್ರಹಸನದಲ್ಲಿ ಒಕ್ಕೆಲಾಯ, ಮೀನುಗಾರ, ಮೂರ್ತೆದಾರ, ಕುಂಬಾರ, ಕ್ರೈಸ್ತ, ಮುಸ್ಲಿಂ, ಬಡಗಿ ಹೀಗೆ ಎಲ್ಲಾ ಸಮುದಾಯದವರು ಕೃಷಿ ಚಟುವಟಿಕೆಯಲ್ಲಿ ತೊಡಗುವ ದೃಶ್ಯ ಹೆಚ್ಚು ಕುತೂಹಲಭರಿತವಾಗಿದೆ. ಜತೆಗೆ ಗುತ್ತಿನ ಮನೆ, ತೆನೆ ಕಟ್ಟುವುದು, ಬಲೀಂದ್ರ ಪೂಜೆ, ತುಡರ್, ಗೋಪೂಜೆ, ಕೊಜಂಬು, ಕರಪತ್ತನವು, ಕೆಡ್ಡೆಸ ಮುಂತಾದ ಆಚರಣೆಗಳ ಪ್ರದರ್ಶನವೂ ಇಲ್ಲಿದೆ.
“ಪುಟ್ಟಿ ನರಮಾನಿ ಸೈಯೆರೆ ಉಂಡು ಉಂದುವೆ ಜಗದ ನಿಯಮ, ತುಳುವ ನಾಡ್‌ಡ್ ಪುಟ್ಟಿನವೇ ನಮ್ಮ ಸಾರ ಜನ್ಮಪುಣ್ಯ, ಒರಿಪುಗ ತುಳುವನಾಡ ಧರ್ಮ” ಎನ್ನುವ ಕ್ಲೈಮಾಕ್ಸ್ ಹಾಡು ಪ್ರಹಸನದ ಹೈಲೈಟ್ಸ್ ಆಗಿದೆ.ತುಳುನಾಡ್ದ ಪೊರ್‍ಲು-ತಿರ್‍ಲ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ತಿಂಗಳ ಮಗುವಿನಿಂದ 80 ವರ್ಷದ ವೃದ್ದರ ತನಕ ಸುಮಾರು102 ಮಂದಿ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿ ನೇತೃತ್ವದಲ್ಲಿ ತಂಡ ಭಾಗವಹಿಸಲಿದೆ. ರಾಜೇಶ್ವರಿ ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

