ಕನ್ನಡ ವಾರ್ತೆಗಳು

ಸೌಮ್ಯಳನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಪ್ರಕರಣದ ಅಪರಾಧಿಗೆ ಜೀವನ ಪರ್ಯಂತ ಶಿಕ್ಷೆ ಪ್ರಕಟಿಸಿದ ಕೋರ್ಟ್

Pinterest LinkedIn Tumblr

bantwal_rape_photo_1a

ಮಂಗಳೂರು, ಡಿ.10 : ಬೆಳ್ತಂಗಡಿಯ ಶಿಬಾಜೆ ಕಶೆಕೋಡಿ ಎಂಬಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಸತೀಶ್ (25) ಎಂಬಾತನಿಗೆ ದ.ಕ. ಜಿಲ್ಲಾ ಆರನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮತ್ತು ಅತ್ಯಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ಜೀವಾವಧಿ ಜೈಲು ವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದದ್ದಕ್ಕೆ ಜೀವನ ಪರ್ಯಂತ (ಉಸಿರು ಇರುವವರೆಗೆ ಜೈಲು ವಾಸ) ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸುಲಿಗೆಗೈದದ್ದಕ್ಕೆ 5 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 2 ವರ್ಷ ಕಠಿಣ ಶಿಕ್ಷೆ ಹಾಗೂ ಸಾಕ್ಷಿ ನಾಶ ಮಾಡಿದ್ದಕ್ಕೆ 3 ವರ್ಷ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ವರ್ಷ ಸಾದಾ ಶಿಕ್ಷೆಯ ತೀರ್ಪು ನೀಡಲಾಗಿದೆ. ಸರಕಾರದ ಪರವಾಗಿ ಶಿವಪ್ರಸಾದ್ ಆಳ್ವ ವಾದಿಸಿದ್ದರು.

ಘಟನೆಯ ವಿವರ: 2013ರ ಫೆ. 24ರಂದು ಶಿಬಾಜೆ ಕಶೆಕೋಡಿಯ ಸತೀಶ್ ಸ್ಥಳೀಯ ನಿವಾಸಿ ಸೌಮ್ಯಾ ಎಂಬಾಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ. ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯಾ ಅಂದು ರಾತ್ರಿ ತಾಯಿಗೆ ಕರೆ ಮಾಡಿ ತಾನು ಮರುದಿನ ಊರಿಗೆ ಬರುವುದಾಗಿ ತಿಳಿಸಿದ್ದಳು.

ಆದರೆ ಫೆ. 25ರಂದು ಸೌಮ್ಯಾ ನಿಗದಿತ ಸಮಯಕ್ಕೆ ಮನೆಗೆ ಬಾರದಿದ್ದಾಗ ತಾಯಿ ಆಕೆಯ ಮೊಬೈಲ್‌ಗೆ ಕರೆ ಮಾಡಿದ್ದರು. ಮೊಬೈಲ್ ಕರೆ ಸ್ವೀಕರಿಸಿದ ವ್ಯಕ್ತಿ ತನಗೆ ಕಾಡಿನಲ್ಲಿ ಮೊಬೈಲ್ ಸಿಕ್ಕಿರುವುದಾಗಿ ತಿಳಿಸಿದ್ದ. ಅದರಂತೆ ಸೌಮ್ಯಾಳ ತಾಯಿ ಹಾಗೂ ಸಹೋದರಿಯು ಹುಡುಕಿಕೊಂಡು ಕಾಡಿಗೆ ತೆರಳಿದ್ದರು. ಅಲ್ಲಿ ಸೌಮ್ಯಾಳ ಪರ್ಸ್ ಹಾಗೂ ಚಪ್ಪಲಿ ಕಂಡಿತ್ತು. ಗಿಡಗಂಟಿಗಳಲ್ಲಿ ಎಳೆದೊಯ್ದ ಕುರುಹುಗಳೂ ಕಂಡಿದ್ದು, ಪರಿಶೀಲಿಸಿದಾಗ ಹತ್ತಿರದ ಬಾವಿಯಲ್ಲಿ ಸೌಮ್ಯಾಳ ಮೃತ ದೇಹ ಪತ್ತೆಯಾಗಿತ್ತು.

ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಸತೀಶ್‌ನನ್ನು ಬಂಧಿಸಿ ಆತನ ವಿರುದ್ಧ ಅತ್ಯಾಚಾರಕ್ಕೆ ಯತ್ನ ಹಾಗೂ ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರು 26 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಸ್ಥಳೀಯರಾದ ಲೂಸಿಯು ಎಂಬವರು ಅಪರಾಧಿ ಸತೀಶ್ ಸೌಮ್ಯಾಳನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವುದನ್ನು ಕಂಡಿದ್ದು, ಅದನ್ನು ತಕ್ಷಣ ಸ್ಥಳೀಯರಿಗೆ ತಿಳಿಸಿದ್ದೆ ಎಂದು ಸಾಕ್ಷಿ ನುಡಿದಿದ್ದರು.

ಘಟನಾ ಸ್ಥಳದ ಸಮೀಪವಿರುವ ಅಂಗಡಿ ಯಲ್ಲಿ ತಾನು ಸತೀಶ್‌ನನ್ನು ಆ ಸಮಯದಲ್ಲಿ ನೋಡಿರುವುದಾಗಿ ಚಂದ್ರಹಾಸ್ ಎಂಬವರು ಸಾಕ್ಷಿ ಹೇಳಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಪುಷ್ಪಾಂಜಲಿ ದೇವಿಯು ಅಪರಾಧಿ ಸತೀಶ್‌ನನ್ನು ಅಪರಾಧಿ ಎಂದು ಡಿ. 2ರಂದು ತೀರ್ಪು ನೀಡಿದ್ದರಲ್ಲದೆ ಶಿಕ್ಷೆ ಪ್ರಮಾಣವನ್ನು ಡಿ.9ರಂದು ಘೋಷಿಸುವುದಾಗಿ ತಿಳಿಸಿದ್ದರು. ಅದರಂತೆ ಮಂಗಳವಾರ ಕಠಿಣ ಶಿಕ್ಷೆ ವಿಧಿಸಿ ಅಪರಾಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

Write A Comment