ಕನ್ನಡ ವಾರ್ತೆಗಳು

ಮೋದಿಯವರದ್ದು ಕೇವಲ ಮಾತಿನ ಮೋಡಿ- ಸಿ.ಪಿ.ಐ.ಎಂ. ರಾಜ್ಯ ಕಾರ್ಯದರ್ಶಿ ನಿತ್ಯಾನಂದ ಸ್ವಾಮಿ ಆರೋಪ

Pinterest LinkedIn Tumblr

Hemmadi_CPIM_Samavesha (7)

ಕುಂದಾಪುರ: ಹತ್ತು ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಬೇಸೆತ್ತ ಜನ ಮೋದಿಯ ಮಾತಿನ ಮೋಡಿಗೆ ಒಳಗಾಗಿ ಬಿಜೆಪಿಯನ್ನು ಗೆಲ್ಲಿಸಿದರು. ಬಿಜೆಪಿ ಚುನಾವಣಾ ಪೂರ್ವದಲ್ಲಿ ನೀಡಿದ ಅಶ್ವಾಸನೆಗಳನ್ನು ಬದಿಗಿಟ್ಟು ಕಾಂಗ್ರೆಸ್ ಹಾದಿಯಲ್ಲಿಯೇ ಸಾಗುತ್ತಿದೆ. ಕಾಂಗ್ರೆಸ್ ಬಿಜೆಪಿಯ ಧೋರಣೆಗಳು ಭಿನ್ನವಲ್ಲ ಎನ್ನುವುದು ಕೇಂದ ಸರ್ಕಾರದ ಆಡಳಿತ ನೋಡಿದಾಗ ಸ್ಪಷ್ಟವಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಧಾರಣೆ ಇಳಿಕೆಯಾದರೂ ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಇಳಿಕೆಯಾಗಿಲ್ಲ. ಸದ್ಯದಲ್ಲಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಲಿದೆ ಎಂದು ಸಿಪಿ‌ಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದ ಸ್ವಾಮಿ ಹೇಳಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕುಂದಾಪುರ ತಾಲೂಕು ಸಮಿತಿ ಹೆಮ್ಮಾಡಿಯಲ್ಲಿ ಹಮ್ಮಿಕೊಂಡ 21ನೇ ತಾಲೂಕು ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಪ್ರಧಾನ ಭಾಷಣ ಮಾಡಿದರು.

Hemmadi_CPIM_Samavesha (5) Hemmadi_CPIM_Samavesha (4) Hemmadi_CPIM_Samavesha (9) Hemmadi_CPIM_Samavesha (6) Hemmadi_CPIM_Samavesha (8) Hemmadi_CPIM_Samavesha (3) Hemmadi_CPIM_Samavesha (2) Hemmadi_CPIM_Samavesha (1) Hemmadi_CPIM_Samavesha

ಚುನಾವಣೆಯ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯ ಮಾತುಗಳನ್ನಾಡಿದ ಬಿಜೆಪಿ ಈಗ ಉದ್ಯೋಗ ನಾಶಕ್ಕೆ ಮುಂದಾಗಿದೆ. ಮೋದಿ ನೇತೃತ್ವದ ಸರ್ಕಾರ ಜನರಿಗೆ ಕೊಟ್ಟ ಮಾತನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಮೊಟಕು ಗೊಳಿಸುವ ಹುನ್ನಾರ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಹುನ್ನಾರವನ್ನು ನಾವು ಬಲವಾಗಿ ಖಂಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಉದ್ಯೋಗ ಖಾತರಿ ಯೋಜನೆ ನಿಲ್ಲಿಸಲು ಬಿಡುವುದಿಲ್ಲ. ಯೋಜನೆಯನ್ನು ಇನ್ನೂ ಬಲಿಷ್ಠಗೊಳಿಸಬೇಕು. ತ್ರಿಪುರದಂತೆ ಪರಿಣಾಮಕಾರಿಯಾಗಿ ಅನುಷ್ಠಾನಿಸಬೇಕು. ಮನೆಯ ಎಲ್ಲ ಸದಸ್ಯರಿಗೂ ಕನಿಷ್ಠ ೧೦೦ ಉದ್ಯೋಗ ನೀಡುವ ಕೆಲಸ ಆಗಬೇಕು ಎಂದರು.

ದೇಶದಲ್ಲಿ ಪೆಟ್ರೊಲ್, ಡಿಸೇಲ್ ಬೆಲೆ ಇಳಿಕೆ ಮೋದಿ ಮೋಡಿಯಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲಗಳ ಬೆಲೆ ಇಳಿಕೆಯಾದ್ದರಿಂದ ಬೆಲೆ ಇಳಿಕೆಯಾಯಿತು. ಹಿಂದಿನ ಸರ್ಕಾರ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿತು. ಈ ಸರ್ಕಾರ ಡಿಸೇಲ್ ನಿಯಂತ್ರಣ ಮುಕ್ತಗೊಳಿಸುವ ಮೂಲಕ ಡಿಸೇಲ್ ಮೇಲಿನ ತೆರಿಗೆ ಹೆಚ್ಚಳ ಮಾಡಲು ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಅನುಷ್ಠಾನವಾಗಲಿದ್ದು ಮತ್ತೆ ಇಂಧನಗಳ ಬೆಲೆ ಏರಿಕೆಯಾಗಲಿದೆ ಎಂದರು.

ದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬಂದರೂ ಕೂಡಾ ೩೩೬ ಸ್ಥಾನಗಳ ಪಡೆದ ಬಿಜೆಪಿ ಪಡೆದ ಮತಗಳ ಪ್ರಮಾಣ ಶೇ.೩೧ ಅಷ್ಟೆ. ನಮ್ಮ ದೇಶದ ಚುನಾವಣಾ ಪದ್ದತಿಯ ದೋಷದ ಪರಿಣಾಮವಾಗಿ ೩೧ಶೇ. ಮತ ಪಡೆದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಈ ಪದ್ದತಿ ಬದಲಾಗಬೇಕು.ಶೇ.೫೦ಕ್ಕಿಂತ ಜಾಸ್ತಿ ಮತ ಪಡೆದವರು ಮಾತ್ರ ಸರ್ಕಾರ ನಡೆಸುವಂತಾಗಬೇಕು ಎಂದು ಅವರು ಹೇಳಿದರು.

ಸಿಪಿ‌ಐ(ಎಂ) ಪಕ್ಷ ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಆ ಪ್ರಯುಕ್ತ ಪ್ರಾಥಮಿಕ ಶಾಖೆಯಿಂದ ಅಖಿಲ ಭಾರತ ಮಟ್ಟದ ತನಕವೂ ಅಧಿವೇಶನ ನಡೆಸಲಿದೆ. ೨೦೧೫ ಏಪ್ರಿಲ್‌ನಲ್ಲಿ ೨೧ನೇ ಮಹಾ ಅಧಿವೇಶನ ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿದೆ ಎಂದರು.

ಸಿಪಿ‌ಐ(ಎಂ) ತಾ.ಸಮಿತಿ ಕಾರ್ಯದರ್ಶಿ ಮಹಾಬಲ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್, ಕೆ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ದಾಸ ಭಂಡಾರಿ, ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಸುರೇಶ ಕಲ್ಲಾಗರ, ಬೈಂದೂರು ವಲಯ ಕಾರ್ಯದರ್ಶಿ ರಾಜೀವ ಪಡುಕೋಣೆ, ಬೀಡಿ ಕಾರ್ಮಿಕ ಸಂಘಟನೆಯ ಮುಖಂಡೆ ಬಿಲ್ಕಿಸಾ, ವಲಯ ಸಮಿತಿಯ ಮುಖಂಡರಾದ ಅಣ್ಣಪ್ಪ ಶೇರುಗಾರ್, ಲಕ್ಷ್ಮಣ ಮೊವತ್ತುಮುಡಿ, ಕರಿಯ ದೇವಾಡಿಗ, ಸುಬ್ರಹ್ಮಣ್ಯ ಆಚಾರ್ ಪಡುಕೋಣೆ, ಡಿ.ಜಿ ಪಂಜು ಕರ್ಕುಂಜೆ, ಸಂತೋಷ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

ಹೆಚ್.ನರಸಿಂಹ ಸ್ವಾಗತಿಸಿ, ಜಿಲ್ಲಾ ಸಮಿತಿಯ ವೆಂಕಟೇಶ ಕೋಣಿ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ ಕಲ್ಲಾಗರ ವಂದಿಸಿದರು.

Write A Comment