ಕನ್ನಡ ವಾರ್ತೆಗಳು

ಮಹಿಳೆ ಸುಳ್ಳು ಏಕೆ ಹೇಳ್ತಾಳೆ?

Pinterest LinkedIn Tumblr

karthika

ಉದ್ದೇಶಪೂರ್ವಕವಾಗಿ ಅಥವಾ ಯಾವುದೇ ಉದ್ದೇಶ ಇಲ್ಲದೆ ಮಹಿಳೆಯರು ಕೆಲವೊಂದು ಸಂದರ್ಭಗಳಲ್ಲಿ ಸುಳ್ಳಿಗೆ ಮೊರೆ ಹೋಗುತ್ತಾರೆ. ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಅನಿವಾರ್ಯ ಕಾರಣಗಳಿಂದ ಸುಳ್ಳಿನ ಮುಳ್ಳಿನ ಮೇಲೆ ನಡೆಯಲೇ ಬೇಕಾಗುತ್ತದೆ. ಪಾಪಪ್ರಜ್ಞೆ ಕಾಡುತ್ತಿದ್ದರೂ, ಮನದ ಮೂಲೆಯಲ್ಲಿ ಹಿಂಜರಿಕೆಯ ಕತ್ತಿ ಮೀಟುತಿದ್ದರೂ ವಾಸ್ತವತೆಯಿಂದ ಪಾರಾಗಲು ಸುಳ್ಳಿನ ಕತ್ತಿಗೆ ತನ್ನ ತಲೆಯೊಡ್ಡುತ್ತಾಳೆ. ಅದರಿಂದ ಉಂಟಾಗುವ ಅಭದ್ರತೆಯನ್ನು ಎಳ್ಳಷ್ಟೂ ತೋರಗೊಡದೆ ಹಸನ್ಮುಖರಾಗಿ ಸುಳ್ಳಿನ ಪರದೆಯನ್ನುಹೊದ್ದುಕೊಳ್ಳುತ್ತಾಳೆ.

ಮಹಿಳೆ ಸುಳ್ಳಿನ ತೆಕ್ಕೆಗೆ ಬೀಳಲು ಹಲವಾರು ಕಾರಣಗಳು, ಪರಿಸ್ಥಿತಿಗಳು ಎಡೆಮಾಡಿಕೊಡುತ್ತವೆ. ಅವುಗಳನ್ನು ಅರಿತು ಬಾಳ ಹೆಜ್ಜೆಯಲ್ಲಿ ಬರುವ ತೊಡಕುಗಳ ಮೆಲ್ಲನೆ ಮರೆವಿನ ಮನೆಗೆ ಸರಿಸಲು ಈ ಸಲಹೆಗಳು ಸಹಕಾರಿಯಾಗಲಿವೆ ಎನ್ನುವ ಆಶಯ ಲೇಖನದ್ದು.

ಪರೀಕ್ಷಿಸಲಿಕ್ಕೆ

ನಿಮ್ಮನ್ನು ಪರೀಕ್ಷಿಸಲಿಕ್ಕೆ ಸುಳ್ಳನ್ನು ಹೇಳುವುದು ಅನಿವಾರ್ಯ ಎಂದು ಮಹಿಳೆ ಭಾವಿಸುವಳು. ಹಿಂದಿನ ಸಂಬಂಧದ ಬಗ್ಗೆ ಕಥೆ ಕಟ್ಟಿ ಹೇಳಿ ನಿಮ್ಮ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವಳು. ಅದರಿಂದ ಭವಿಷ್ಯದಲ್ಲಿ ನಿಮಗೆ ಏನನ್ನು ಹೇಳಬಹುದು, ಏನನ್ನು ಹೇಳಬಾರದು ಎನ್ನುವುದನ್ನು ನಿರ್ಧರಿಸುವುದು ಇದರಿಂದಅವಳಿಗೆ ಸುಲಭ. ನಿಮ್ಮಲ್ಲಿರುವ ಅಸೂಯೆ, ಹುಚ್ಚುತನ ಅಥವಾ ನೀವು ಅವರನ್ನು ತಡೆಯಬಹುದೆನ್ನುವ ಭಾವನೆಯನ್ನು ತಿಳಿಯಲುಹಳೆ ಪ್ರೇಮಿಯೊಂದಿಗೆ ಹೊರಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ನಿಮ್ಮ ಪ್ರತಿಕ್ರಿಯೆಯನ್ನು ಅರಿತು ಮುಂದೆ ಅಂತಹ ಸನ್ನಿವೇಶ ಬರದಂತೆ ನೋಡಿಕೊಳ್ಳುವಳು.

ಆಕರ್ಷಿಸಲು

ನಿಮ್ಮನ್ನು ಅವಳೆಡೆಗೆ ಆಕರ್ಷಿಸಲು, ಅವಳತ್ತ ನಿಮ್ಮ ಚಿತ್ತ ಪದೇ ಪದೇ ಹರಿಯುವಂತೆ ಮಾಡಲು, ನಾಲ್ಕು ಜನರ ಮಧ್ಯೆ ನಾನೇ ಉತ್ತಮಳು ಎಂದು ನಿಮ್ಮ ಭಾವನೆಯನ್ನು ತಿರುಚಲು ಸುಳ್ಳು ಹೇಳುವುದು ಅವಳ ದೃಷ್ಟಿಯಲ್ಲಿಅವಶ್ಯಕವೆನಿಸಿಬಿಡುತ್ತದೆ. ಅದಕ್ಕಾಗಿಯೇ ಸುಳ್ಳಿನ ದಾರಿ ಹಿಡಿಯುತ್ತಾಳೆ.

ಪ್ರಭಾವ ಬೀರಲು

ಮಹಿಳೆಯರು ಪುರುಷರನ್ನು ಕೆರಳಿಸಲು ಸುಳ್ಳನ್ನುಹೇಳಬಹುದು, ಹಾಗೆಯೇ ಪುರುಷರ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ತಿಳಿದುಕೊಂಡು ತಮ್ಮ ಇಚ್ಛೆಯಂತೆ ಕಾರ್ಯ ಸಾಧಿಸಲು ಸುಳ್ಳನ್ನು ಹೇಳುತ್ತಾರೆ.

ನೆನಪುಗಳನ್ನು ಮರೆ ಮಾಚಲು

ಮಹಿಳೆಯರು ತಮ್ಮ ಹಳೆಯ ಜೀವನದ ನೆನಪುಗಳನ್ನು ಮರೆಮಾಚಲು ಸುಳ್ಳನ್ನು ಹೇಳುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಉದಾಹರಣೆಗೆ ಹಿಂದಿನ ಘಟನೆಗಳು ಮುಜುಗರ ತರಬಹುದು ಅಥವಾಅವುಗಳು ನಿಮ್ಮ ತೀರ್ಪಿನ ಮೇಲೆ ಅವರ ಮುಂದಿನ ಜೀವನ ನಿರ್ಧರಿಸುವಂತಹದ್ದಾಗಿರಬಹುದು ಅಥವಾ ಆತಂಕಭರಿತವಾಗಿರಬಹುದು.

ಚಿಂತೆಗಳನ್ನು ದೂರ ಮಾಡಲು

ಸಣ್ಣ ಸಣ್ಣ ವಿಷಯಗಳನ್ನು ನಿಮ್ಮ ಮುಂದೆ ತಂದು ದುಃಖಿಸಿ ದೊಡ್ಡದು ಮಾಡುವುದಕ್ಕಿಂತ ತಾನೇ ಪರಿಹರಿಸಿಕೊಂಡರೆ ಚೆನ್ನ ಎನ್ನುವ ಮನೋಭಾವದಿಂದ ಸುಳ್ಳು ಹೇಳಬಹುದು. ಅಂತಹ ಸಂದರ್ಭದಲ್ಲಿ ಸುಳ್ಳಿನ ಸುಳಿವು ಸಿಕ್ಕರೂ ಮತ್ತೆ ಮತ್ತೆ ಕೆದಕಿ ಕೇಳುವುದು ಸರಿಯಲ್ಲ. ಸ್ವಲ್ಪ ಮಟ್ಟಿಗೆಅವಳಿಗೂ ಸ್ವಾತಂತ್ರ್ಯ ಕೊಡಿ. ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಿಕೊಂಡು ಆತ್ಮವಿಶ್ವಾಸದಿಂದಮೆರೆಯಲು ನಿಮ್ಮ ಕೈಯನ್ನೂ ಜೋಡಿಸಿ.

ನಂಬದಿದ್ದಾಗ

ನಿಮ್ಮೊಂದಿಗಿನ ನಂಬಿಕೆಯ ಬಂಧ ಇನ್ನೂ ಗಟ್ಟಿಯಾಗದೇ ಇದ್ದಾಗ ಮಹಿಳೆಯರು ಸುಳ್ಳು ಹೇಳುವುದು ಅವರ ಮಟ್ಟಿಗೆ ಅನಿವಾರ್ಯ.ಅವರ ವೈಯಕ್ತಿಕ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಂಡರೆ ನೀವು  ಅದನ್ನು ಅವಳ ವಿರುದ್ಧ ಉಪಯೋಗಿಸಬಹುದೆಂದು ಸುಳ್ಳಿನ ಮೊರೆಹೋಗುತ್ತಾರೆ. ನಿಮ್ಮ ದೃಷ್ಟಿಯಲ್ಲಿ ಅವಳು ದುರ್ಬಲಳು ಎಂದು ತೋರಿಸಿಕೊಳ್ಳಲು ಆಕೆ ಯಾವತ್ತೂ ಬಯಸುವುದಿಲ್ಲ. ಬಹುಶಃ ನೀವು ಅವರನ್ನು ರಕ್ಷಿಸಲು ಬಯಸದಿರುವುದೇ ಇದಕ್ಕೆ ಮುಖ್ಯಕಾರಣ.

ಸ್ವಯಂ ಮನೋರಂಜನೆಗೆ

ತಮ್ಮ ಸ್ವಂತ ವ್ಯಕ್ತಿತ್ವವನ್ನು ಖುದ್ದು ಸಂತೋಷ ಪಡಿಸಲಿಕ್ಕೆ ಮಹಿಳೆಯರು ಸುಳ್ಳು ಹೇಳುವ ಸಾಧ್ಯತೆ ಇದೆ. ಸ್ವಯಂ ಸಾಧನೆಗಳು ಮತ್ತು ಯಶಸ್ಸಿನ ಬಗ್ಗೆ ತನ್ನ ಬಗ್ಗೆಯೇಅವಳಿಗೆ ಉತ್ಪ್ರೇಕ್ಷೆ ಇರಬಹುದು. ಅಂತಹ ಸಂದರ್ಭದಲ್ಲಿ ಖುದ್ದು ಸ್ವಾಭಿಮಾನವನ್ನು ಹೆಚ್ಚಿಸಲು, ಮೆಚ್ಚಿಸಲು, ಅಸುರಕ್ಷತೆಯನ್ನು ದೂರ ಮಾಡಲು ಆಕೆ ಸುಳ್ಳಿನಮೊರೆಹೋಗುತ್ತಾಳೆ.

ರಕ್ಷಣೆಗಾಗಿ

ನಿಮ್ಮ ಭಾವನೆಗಳನ್ನು ರಕ್ಷಿಸಲು ಸುಳ್ಳಿನ ಸರಮಾಲೆಯನ್ನು ಹಾಕಿಕೊಳ್ಳುವ ಸಾಧ್ಯತೆ ಇದೆ. ಉದಾಹರಣೆಗೆ ನಿಮ್ಮ ಉಸಿರಾಟ (ಬಾಯಿಯ ದುರ್ಗಂಧ) ಅಥವಾ ಗೊರಕೆ ಅವಳಿಗೆ ತೊಂದರೆ ಮಾಡುತ್ತಿರಬಹುದು. ಆದರೆ ಯಾವ ಕಾರಣಕ್ಕೂ ಅವಳ ಅಸಹನೆ ನಿಮ್ಮ ಮುಂದೆ ಬರದು. ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಭಾವನೆಗಳ ಮುಗಿಲಿಗೆ ಧಕ್ಕೆ ತರದಿರುವುದೇ ಅವಳ ಧ್ಯೇಯ.

ಬಹಳಷ್ಟು ಮಹಿಳೆಯರು ಸುಳ್ಳು ಹೇಳುವುದನ್ನು ಪಾಪ ಎಂದು ಭಾವಿಸುತ್ತಾರೆ. ಆದರೆ ಸಂಬಂಧಗಳ ರಕ್ಷಣೆಗಾಗಿ ಒಂದು ಸಣ್ಣ ಸುಳ್ಳು ಉತ್ತಮ ಬಾಂಧವ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂದರೆ ಅಂತಹ ಕಾರ್ಯಕ್ಕೆ ಕೈಹಾಕಲು ಹಿಂದೆ ಮುಂದೆ ನೋಡುವುದಿಲ್ಲ. ಅಂತಹ ಪರಿಸ್ಥಿತಿ ನಿಮ್ಮ ಸಂಗಾತಿಯದ್ದಾಗಿದ್ದರೆ ಅವರಿಗೆ ಗೊತ್ತಿಲ್ಲದ ಹಾಗೆ ಒಮ್ಮೆ ಕ್ಷಮಿಸಿ ಮುನ್ನಡೆಯುವುದು ಮುಖ್ಯ.

ಇಷ್ಟೆಲ್ಲಾ ಕಾರಣಗಳು ಕೊಟ್ಟರೂ ಇಲ್ಲಿ ಎಲ್ಲಿಯೂ ಪುರುಷರಿಗೆ (ಸಂಗಾತಿಗೆ) ಯಾವುದೇ ಕೆಡುಕುಂಟು ಮಾಡುವ ಉದ್ದೇಶ ಮಹಿಳೆಯದ್ದಲ್ಲವೇ ಅಲ್ಲ ಎಂದು ನಿಮಗೆಅರಿವಾಗಿದೆ ಅಲ್ಲವಾ…? ನಾರಿ ಪುರುಷನ ಸುಖ, ದುಃಖ, ಕಷ್ಟ, ಸಂತೋಷ… ಎಲ್ಲಾ ಮೆಟ್ಟಿಲುಗಳಲ್ಲೂ ಭಾಗಿ, ಹಾಗೆಯೇ ಯಾವುದು ನೆಮ್ಮದಿಯ ಬದುಕಿನ ತಿರುವು ಎನ್ನುವುದನ್ನು ಅತ್ಯಂತ ಸಮರ್ಥವಾಗಿ ಅರಿತಿರುವ ಜೀವಂತ ಬೊಂಬೆ. ಆ ಬೊಂಬೆ ನಿಮ್ಮ ತಾಳಕ್ಕೆ, ಏಳಿಗೆಗೆ ತಕ್ಕಂತೆ ಕುಣಿಯುವುದಂತೂ ಗ್ಯಾರೆಂಟಿ. ಆದರೆ ನಿಮ್ಮ ಬೇಕು- ಬೇಡ, ಆಕಾಂಕ್ಷೆ, ಭಾವನೆಗಳ ದೋಣಿಯಲ್ಲಿ ಕೆಲವೊಂದು ಸುಳ್ಳಿನ ಹುಟ್ಟಿಗೆ ಜನ್ಮವ ನೀಡುತ್ತಾಳೆ… ನಿಮ್ಮೊಟ್ಟಿಗೆ ಸುಂದರ ಬಾಳಿನೊಂದಿಗೆ.. ನಾಳೆಗಳಾಚೆಗೂ…

ಈಗ ಹೇಳಿ ನಿಮ್ಮ ಸಂಗಾತಿ ಅಥವಾ ಹೆಂಡತಿ ಹೇಳುವ ಸುಳ್ಳಿನ ಕಂತೆಯ ಹಿಂದೆ ಯಾವುದಾದರೂ ಕೆಟ್ಟ ಉದ್ದೇಶ ಇದೆಯಾ…? ಇನ್ನು ಮುಂದೆ ಅವಳಾಡುವ ಸುಳ್ಳುಗಳೂ ನಿಮ್ಮ ಮುಖದಲ್ಲಿ ಮುಗುಳ್ನಗೆಯ ತುಂಬುತ್ತವೆ.

-ಜಮುನಾ ರಾಣಿ

Write A Comment