ಕನ್ನಡ ವಾರ್ತೆಗಳು

ಉಡುಪಿ ಜಿಲ್ಲೆ: 2,796 ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ

Pinterest LinkedIn Tumblr

World_Aids_Day

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೊಸದಾಗಿ ಎಚ್‌ಐವಿ ಸೋಂಕಿತರ ಸೇರ್ಪಡೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 4,313 ಮಂದಿ ಎಚ್‌ಐವಿ ಸೋಂಕಿತರು ನೋಂದಣಿಯಾಗಿದ್ದು ಎಆರ್‌ಟಿ ಕೇಂದ್ರಗಳಲ್ಲಿ ಒಟ್ಟು 2,796 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುರೇಂದ್ರ ಚಿಂಬಾಳ್ಕರ್‌ (ಪ್ರಭಾರ) ಮತ್ತು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ನಿಖೀಲ್‌ ಕುಮಾರ್‌ ಶೆಟ್ಟಿ ತಿಳಿಸಿದರು.

2008ರಲ್ಲಿ 1,275 ಮಂದಿ ಎಚ್‌ಐವಿ ಸೋಂಕಿತರು ಸೇರ್ಪಡೆಯಾಗಿದ್ದರು. ಈ ಸಂಖ್ಯೆ 2009ರಲ್ಲಿ 994, 2010ರಲ್ಲಿ 1021, 2011ರಲ್ಲಿ 818, 2012ರಲ್ಲಿ 696, 2013ರಲ್ಲಿ 624 ಆಗಿತ್ತು. ಈ ವರ್ಷದ ಅಕ್ಟೋಬರ್‌ ವರೆಗೆ 394 ಪ್ರಕರಣಗಳು ಮಾತ್ರ ಹೊಸದಾಗಿ ಸೇರ್ಪಡೆಯಾಗಿವೆ. 2008ರಲ್ಲಿ 41 ಮಂದಿ ಎಚ್‌ಐವಿ ಸೋಂಕಿತ ಗರ್ಭಿಣಿಯರು ಹೊಸದಾಗಿ ಸೇರ್ಪಡೆಯಾಗಿದ್ದರು. ಈ ಸಂಖ್ಯೆ 2013ಕ್ಕೆ 11ಕ್ಕೆ ಇಳಿದಿದೆ. 2014ರ ಅಕ್ಟೋಬರ್‌ ವರೆಗೆ 14 ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌ಐವಿ ಪರೀಕ್ಷೆ ಉಚಿತವಾಗಿ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆ ಮತ್ತು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಚ್‌ಐವಿ ಸೋಂಕಿತರಿಗೆ ಉಚಿತ ಎಆರ್‌ಟಿ ಔಷಧಿ ನೀಡಲಾಗುತ್ತಿದೆ. ಅಲ್ಲದೆ ಬ್ರಹ್ಮಾವರ, ಬೈಂದೂರು, ಹೆಬ್ರಿ ಮತ್ತು ಕಾರ್ಕಳ ಆರೋಗ್ಯ ಕೇಂದ್ರಗಳಲ್ಲಿಯೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಎಚ್‌ಐವಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಯಕ್ಷಗಾನದ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ನಡೆಯುತ್ತಿದೆ. ಸರಕಾರ ಇತ್ತೀಚೆಗೆ ಹೊಸ ಯೋಜನೆ ರೂಪಿಸಿ ಎಚ್‌ಐವಿ ಪೀಡಿತ ಬಿಪಿಎಲ್‌ ಕುಟುಂಬಕ್ಕೆ ಮನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಡಿ. 1ರಂದು ಬೆಳಗ್ಗೆ 9ರಿಂದ ಮಲ್ಪೆ ಸರಕಾರಿ ಪ.ಪೂ. ಕಾಲೇಜಿನಲ್ಲಿ ಏಡ್ಸ್‌ ದಿನಾಚರಣೆ ಪ್ರಯುಕ್ತ ವಿವಿಧ ಜಾಗೃತಿ ಕಾರ್ಯಕ್ರಮಗಳು ಜರಗಲಿವೆ ಎಂದು ಅವರು ತಿಳಿಸಿದರು.

ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವುದನ್ನು ಚಿಕಿತ್ಸೆಯ ಮೂಲಕ ತಡೆಯಲು ಸಾಧ್ಯವಿದೆ. ಇದರ ಬಗ್ಗೆಯೂ ಜನತೆ ತಿಳಿದುಕೊಳ್ಳಬೇಕು ಎಂದು ಡಾ| ನಿಖೀಲ್‌ ಹೇಳಿದರು.

Write A Comment