ಕನ್ನಡ ವಾರ್ತೆಗಳು

ಒಂಭತ್ತರ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ : ದೂರು ದಾಖಲು

Pinterest LinkedIn Tumblr

rape_33

ಕುಂದಾಪುರ: ಐದನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಟ್ಯೂಷನ್ ಮುಗಿಸಿ ವಾಪಾಸು ಬರುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಹಾದಿ ತಪ್ಪಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬುಧವಾರ ಸಂಜೆ ಗಂಗೊಳ್ಳಿಯ ಕೆ‌ಎಫ್‌ಡಿಸಿ ವಠಾರದಲ್ಲಿ ನಡೆದಿದೆ.

ಘಟನೆಯ ವಿವರ: ಗಂಗೊಳ್ಳಿಯ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ೫ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳು ಎಂದಿನಂತೆ ಟ್ಯೂಷನ್ ಮುಗಿಸಿ ಸಂಜೆ ಸುಮಾರು ಆರು ಮುಕ್ಕಾಲರ ಸುಮಾರಿಗೆ ಮನೆಗೆ ನಡೆದು ಬರುತ್ತಿದ್ದಳೆನ್ನಲಾಗಿದೆ. ಅದಾಗಲೇ ಕತ್ತಲಾಗಿದ್ದು, ಖಾರ್ವಿ ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯೋರ್ವ ಆಕೆಯನ್ನು ಮಾತನಾಡಿಸಿ ಈ ದಾರಿಯಲ್ಲಿ ಮುಂದೆ ಕಚ್ಚುವ ನಾಯಿಗಳಿವೆ. ಅಲ್ಲಿ ಹೋಗಬೇಡ. ನಿನ್ನ ತಂದೆಯ ಪರಿಚಯವಿದೆ. ನಾನು ನಿನ್ನನ್ನು ಬೇರೆ ದಾರಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಪುಸಲಾಯಿಸಿದ್ದಾನೆ.

ಆತನ ಮಾತನ್ನು ನಂಬಿದ ಬಾಲಕಿ ಆತನೊಂದಿಗೆ ಸುಮಾರು ಅರ್ಧ ಫರ್ಲಾಂಗ್ ದೂರ ಹೋದ ಮೇಲೆ ಕೆ‌ಎಫ್‌ಡಿಸಿ ವಠಾರ ಸಮೀಪ ಯಾರೂ ಇಲ್ಲದ ಸ್ಥಳ ನೋಡಿ ಆಕೆಯನ್ನು ಹಿಡಿದುಕೊಂಡು ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಯತ್ನಿಸಿದಾಗ ಆಕೆ ಅಲ್ಲಿ ಕೂಗಾಡಿ ತಪ್ಪಿಸಿಕೊಂಡು ವಾಪಾಸು ಓಡಿ ಬಂದು ಸಮೀಪದ ಅಂಗಡಿಯವರಲ್ಲಿ ಹೇಳಿದ್ದಾಳೆ. ತಕ್ಷಣ ಸ್ಥಳೀಯ ಯುವಕರ ಗುಂಪು ಆತನನ್ನು ಬೆನ್ನಟ್ಟಿದರಾದರೂ ಆತ ತಪ್ಪಿಸಿಕೊಂಡಿದ್ದಾನೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನ್ಕೆ ಬಲೆ ಬೀಸಲಾಗಿದೆ.

ಬೀದಿ ದೀಪ ಇಲ್ಲ: ಈ ಪ್ರದೇಶದ ರಸ್ತೆಯಲ್ಲಿ ಬೀದಿ ದೀಪ ಇಲ್ಲದೇ ಇದ್ದು ಸಂಜೆಯ ನಂತರ ಮಹಿಳೆಯರು ಮಕ್ಕಳು ಸಂಚರಿಸುವುದೇ ಕಷ್ಟವಾಗಿದೆ. ಈ ಪ್ರಕರಣಕ್ಕೂ ಬೀದಿದೀಪ ಇಲ್ಲದಿರುವುದೇ ಕಾರಣವಾಗಿದೆ. ಸಂಬಂಧಪಟ್ಟವರು ಬೀದಿ ದೀಪ ಇಲ್ಲದ ಎಲ್ಲಾ ರಸ್ತೆಗಳಿಗೂ ಬೀದಿ ದೀಪ ಅಳವಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Write A Comment