ಕನ್ನಡ ವಾರ್ತೆಗಳು

ನಿಧಿ ಶೋಧಕ್ಕೆ ಯತ್ನ : ಗಂಗೊಳ್ಳಿಯಲ್ಲಿ ಇಬ್ಬರ ಬಂಧನ- ಮಂತ್ರವಾದಿ ಸೇರಿದಂತೆ ಹಲವರು ಪರಾರಿ

Pinterest LinkedIn Tumblr

ಕುಂದಾಪುರ: ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಾರವನ್ನು ಹುಡುಕುವುದ್ಕಾಗಿ ಗಂಗೊಳ್ಳಿಯಲ್ಲಿ ಮಂತ್ರವಾದಿ ಸಹಿತ ಸುಮಾರು ಇಪ್ಪತ್ತು ಜನರ ತಂಡ ಕಳೆದ ಕೆಲವು ವಾರಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲಿಸರು ಇಬ್ಬರು ಆರೋಪಿಗಳು ಹಾಗೂ ಕುಕೃತ್ಯಕ್ಕೆ ಬಳಸಲಾದ ಮಾರುತಿ ಓಮ್ನಿ, ಪಿಕಾಸಿ ಹಾಗೂ ಬಲಿಕೊಡಲು ತಂದಿದ್ದ ಕೋಳಿಯನ್ನು ವಶಪಡಿಸಿಕೊಂಡ ಘಟನೆ ಬುಧವಾರ ರಾತ್ರಿ ಗಂಗೊಳ್ಳಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಹೆಮ್ಮಾಡಿಯ ಸಂತೋಷನಗರ ನಿವಾಸಿ ಆರೀಫ್ ಹಾಗೂ ಕೋಡಿ ನಿವಾಸಿ ಶರೀಫ್ ಎಂದು ಗುರುತಿಸಲಾಗಿದ್ದು, ಪರಾರಿಯಾದ ಮಂತ್ರವಾದಿ ಸಹಿತ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Nidhi_Shodha_Gangolli Nidhi_Shodha_Gangolli (2) Nidhi_Shodha_Gangolli (1)

ಘಟನೆಯ ವಿವರ: ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸನ್ಯಾಸಿ ಬಲ್ಲೆ ಎನ್ನುವ ಪ್ರದೇಶವು ಸಮುದ್ರ ತೀರಕ್ಕೆ ಅಂಟಿಕೊಂಡಿದ್ದು, ಸಮುದ್ರ ತೀರದಲ್ಲಿ ಕೋಟ್ಯಂತರ ಬೆಲೆ ಬಾಳುವ ನಿಧಿ ಇದೆ ಎಂದು ಮಂತ್ರವಾದಿಯೊಬ್ಬ ಮಂಗಳೂರು ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ತಿಳಿಸಿದ್ದನೆನ್ನಲಾಗಿದೆ. ಅದಕ್ಕಾಗಿ ಸುಮಾರು ಇಪ್ಪತ್ತು ಜನರ ತಂಡ ಕೆಲವು ವಾರಗಳಿಂದ ರಾತ್ರಿ ಹೊತ್ತು ನಿಧಿಶೋಧಕ್ಕಾಘಿ ಕಾರ್ಯಾಚರಣೆ ನಡೆಸುತ್ತಿತ್ತು. ಸರ್ಚ್‌ಲೈಟ್ ಬಳಸಿ ರಾತ್ರಿ ಸುಮಾರು ೧೨ ಗಂಟೆಯ ನಂತರ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳೀಯರಿಗೆ ಈ ಬಗ್ಗೆ ಹಲವು ಅನುಮಾನಗಳುಂಟಾಗಿತ್ತು. ಆದರೆ ನಿಧಿ ಪತ್ತೆ ತಂಡ ಮಾರಕಾಯುಧಗಳನ್ನಿಟ್ಟುಕೊಂಡಿದ್ದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿದ ಪೊಲೀಸರು ರಾತ್ರಿ ಕೆಲವು ಬಾರಿ ನಡೆಸಿದ ದಾಳಿಯ ಸಂದರ್ಬವೂ ಆರೋಪಿಗಳ ತಂಡ ಬಾರದೇ ಇದ್ದುದರಿಂದ ಪೊಲೀಸರ ಯತ್ನ ವಿಫಲವಾಗಿತ್ತು. ಆದರೆ ಬುಧವಾರ ರಾತ್ರಿ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಹಾಗೂ ಮಾರುತಿ ಓಮ್ನಿ ಮತ್ತು ಕೋಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದು ವಾಹನ ಜೀಪಿನಲ್ಲಿದ್ದ ಮಂತ್ರವಾದಿ ಹಾಗೂ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆಯ ಹಿನ್ನೆಲೆ : ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂದರೆ ೧೯೯೬ರಲ್ಲಿ ದೋಣಿಯೊಂದರಲ್ಲಿ ಸ್ಮಗ್ಲಿಂಗ್ ನಡೆಯುತ್ತಿದ್ದ ವೇಳೆ ದಾಳಿ ನಡೆಯುತ್ತದೆ ಎಂಬಿದನ್ನರಿತ ಸ್ಮಗ್ಲಿಂಗ್ ತಂಡ ಸಮುದ್ರ ಬದಿಯಲ್ಲಿ ದೊಡ್ಡದಾದ ಹೊಂಡ ನಿರ್ಮಿಸಿ ಅದರಲ್ಲಿ ಚಿನ್ನಾಭರಣಗಳನ್ನು ಅಡಗಿಸಿಟ್ಟಿತ್ತೆನ್ನಲಾಗಿದೆ. ಆ ಸಂದರ್ಭ ಪೊಲೀಸರು ಅಡಗಿಸಿಟ್ಟಿದ್ದ ನಿಧಯನ್ನೆ ಶೋಧಿಸಿದ್ದರಾದರೂ ದೊರಕಿರಲಿಲ್ಲ. ತದ ನಂತರ ಹಲವು ಬಾರಿ ಚಿನ್ನಾಭರಣಗಳನ್ನು ಅಡಗಿಸಿಟ್ಟ ಸ್ಥಳ ಶೋಧನೆ ಮಾಡಲು ಹಲವು ತಂಡಗಳು ವಿಫಲ ಯತ್ನ ನಡೆಸಿತ್ತು. ಆದರೆ ಸ್ಥಳೀಯ ಕೆಲವರಿಗೆ ಆಗಾಗ ಚಿನ್ನದ ತುಂಡುಗಳು ದೊರಕಿದ್ದರಿಂದ ಬಚ್ಚಿಟ್ಟ ಚಿನ್ನಾಭರಣಗಳು ಅಲ್ಲಿಯೇ ಯಾವುದೋ ಜಾಗದಲ್ಲಿರುವುದು ಖಚಿತವಾಗಿತ್ತೆನ್ನಲಾಗಿದೆ. ಇದೇ ಸುದ್ದಿ ಚೋರರಿಗೆ ತಲುಪಿದ್ದು, ಕಳೆದ ಕೆಲವು ವಾರಗಳಿಂದ ಮಂತ್ರವಾದಿಯ ಸಹಾಯದಿಂದ ರಹಸ್ಯವಾಗಿರುವ ನಿಧಿಯನ್ನು ಪತ್ತೆ ಹಚ್ಚಲು ರಹಸ್ಯವಾಗಿ ಸಿದ್ಧತೆ ನಡೆಸಿ ರಾಥ್ರಿ ಕಾರ್ಯಾಚರಣೆ ನಡೆಸಿ ವಿಫಲರಾಗಿದ್ದರೆನ್ನಲಾಗಿದೆ. ಹೊಂಡ ತೋಡಲಾಗಿರುವ ಸ್ಥಳದಲ್ಲಿ ಉಪ್ಪಿನ ಪ್ಯಾಕೆಟ್‌ಗಳು ಈ ಹಿಂದೆ ಕೋಳಿ ಬಲಿಕೊಟ್ಟ ರಕ್ತದ ಕಲೆಗಳು, ಬಾಳೆ‌ಎಲೆ, ಎಲೆ, ಕುಂಕುಮ, ನಿಂಬೆ ಹಣ್ಣು ಮೊದಲಾದ ವಸ್ತುಗಳು ಪತ್ತೆಯಾಗಿವೆ.

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Write A Comment