ಕನ್ನಡ ವಾರ್ತೆಗಳು

ಮಕ್ಕಳಿಲ್ಲದ ಕೊರಗಿಗೆ ಕಾಳಾವರದ ಕಾಳಿಂಗ ದೇವರ ದರ್ಶನ ಪರಿಹಾರ: ಗುರುವಾರ ಕಾಳಿಂಗನಿಗೆ ಷಷ್ಠಿ ಸಂಭ್ರಮ

Pinterest LinkedIn Tumblr

Kalavara_Kalinga_Temple.

ಕುಂದಾಪುರ: ಕರಾವಳಿಯಲ್ಲಿ ನಾಗನಿಗೆ ಸಲ್ಲುವಷ್ಟು ಹರಕೆ ಸೇವೆಗಳು ಮತ್ತೆ ಎಲ್ಲಿಯೂ ಸಲ್ಲುವುದಿಲ್ಲ ಎಂಬುವುದಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರ ಬೈಪಾಸ್ ನಿಂದ ೩ ಕಿ.ಲೋ ಮೀಟರ್ ದೂರದಲ್ಲಿರುವ ಕಾಳಾವರ ಶ್ರೀ ಕಾಳಿಂಗ ದೇವರ ಸನ್ನಿಧಿ ಸಾಕ್ಷಿ. ಪ್ರಮುಖ ಮೂಲಸ್ಥಾನವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಿಟ್ಟರೆ ೨ನೇ ಮೂಲಸ್ಥಾನ ಎಂಬ ಹೆಗ್ಗಳಿಕೆ, ಪುರಾತನ ವೈಶಿಷ್ಟತೆ ಪಡೆದ ದೇವಸ್ಥಾನವೇ ಕುಂದಾಪುರ ತಾಲೂಕಿನ ಕಾಳಾವರದ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ.

Kalavara_Kalinga_Temple (3) Kalavara_Kalinga_Temple (2) Kalavara_Kalinga_Temple Kalavara_Kalinga_Temple (1)

ಇತಿಹಾಸ: ಎಂಟು ಶತಮಾನಗಳ ಹಿಂದೆ ಇಲ್ಲಿ ಈಶ್ವರ ದೇವಸ್ಥಾನ ಇತ್ತೆಂಬುದಕ್ಕೆ ಹಳೆಯ ಶಿಲಾ ಶಾಸನಗಳು ಸಾಕಿ ನುಡಿಯುತ್ತವೆ. ಈಶ್ವರ ದೇವಸ್ಥಾನದ ಬಲಭಾಗದಲ್ಲಿ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನವಿದೆ. ಸುಮಾರು ೫೦೦ ವರ್ಷಗಳ ಇತಿಹಾಸ ಸಾರುವ ಕಾಳಾವರ ಶ್ರೀ ಕಾಳಿಂಗ ದೇವಸ್ಥಾನಕ್ಕೆ ಕಕ್ಕೆ ಶ್ರೀ ಸುಬ್ರಹ್ಮಣ್ಯದಿಂದ ಕಾಳಿಂಗ ಸರ್ಪವೊಂದು ತೆವಳುತ್ತಾ ಇಲ್ಲಿ ಬಂದು ನೆಲೆ ನಿಂತ ಸ್ಥಳಕ್ಕೆ ಕಾಳಾವರ ಎಂಬ ಹೆಸರು ಬರುವುದಕ್ಕೆ ಕಾರಣವಾಗಿದೆ ಎಂಬುವುದು ಪ್ರತೀತಿ. ಇದಕ್ಕೆ ಸಾಕ್ಷಿಯೆಂಬಂತೆ ದೇವಸ್ಥಾನದ ಒಂದೂವರೆ ಕಿ.ಮೀ. ದೂರದಲ್ಲಿ ಹಾವು ತೆವಳಿದಂತಿರುವ ಹೊಳೆ ಹಾಗು ಉದ್ಭವಗೊಂಡಿರುವ ಸ್ಥಳದಲ್ಲಿ ಬಾವಿಯಾಕಾರದ ಹೊಂಡ ಕಣ್ಣಿಗೆ ಕಾಣಸಿಗುತ್ತದೆ! ಅಲ್ಲದೇ ಕಾಳಿಂಗ ದೇವರ ಹಿಂಗದಿಯಲ್ಲಿ ಮುನಿಯೊಬ್ಬರು ತಪಸ್ಸು ಮಾಡಿದ್ದರೆನ್ನಲಾದ ಬಾವಿಯೊಂದರಲ್ಲಿ ಹುತ್ತ ಬೆಳೆದು ನಿಂತಿದೆ!

ಕಾಳಾವರದ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಬಂದು ದೇವರಿಗೆ ಹರಕೆ ಹೊತ್ತುಕೊಂಡರೆ ಸಂತಾನ ಭಾಗ್ಯ ದೊರೆಯದವರಿಗೆ ಮಕ್ಕಳಾಗುತ್ತವೆ. ಚರ್ಮರೋಗ ಮೊದಲಾದ ವ್ಯಾಧಿಗಳಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ನಂಬಿಕೆ ಭಕ್ತರದ್ದು.

ಜೀರ್ಣೋದ್ಧಾರದ ಬಾಗ್ಯ ಕೂಡಿ ಬಂದಿಲ್ಲ: 2೦೦ ವರ್ಷಗಳ ಹಿಂದೆ ಈ ದೇವಸ್ಥಾನವು ಮಣ್ಣಿನ ಗೊಡೆಯಿಂದ ಕಟ್ಟಲ್ಪಟ್ಟಿದ್ದು ತೀರಾ ಶಿಥಿಲಾವಸ್ಥೆಯಲ್ಲಿದೆ. ಸುತ್ತಮುತ್ತಲಿನ ಎಲ್ಲಾ ದೇವಸ್ಥಾನಗಳು ಅಭಿವೃದ್ಧಿಗೊಂಡಿದ್ದರೂ ಇಲ್ಲಿಯವರೆಗೂ ಈ ದೇವಸ್ಥಾನದ ಜೀರ್ಣೋದ್ದಾರದ ಬಾಗ್ಯ ಕೂಡಿ ಬಂದಿರಲಿಲ್ಲ. ಆದರೆ ಮುಜರಾಯಿ ಇಲಾಖೆ ಉತ್ಸವ ಸಮಿತಿ ರಚಿಸಿ ನಿವೃತ್ತ ಪ್ರೊಫೆಸರ್ ಆಗಿರುವ ಶಂಕರರಾವ್ ಎಂಬುವರನ್ನು ಅಧ್ಯಕ್ಷರನ್ನಾಗಿ ಮಾಡಿದ ನಂತರ ಇತ್ತೀಚಿನ ಎರಡು ವರ್ಷಗಳಲ್ಲಿ ದೇವಸ್ಥಾನದ ಅಭಿವೃದ್ಧಿ ನಡೆಯುತ್ತಿದೆ.

ಸ್ಥಳಾವಕಾಶದ ಕೊರತೆ: ಈ ದೇವಸ್ಥಾನದಲ್ಲಿ ವರ್ಷದಲ್ಲಿ ಒಂದು ಹಿರಿ ಷಷ್ಟಿ ಅಥವಾ ಚಂಪಾ ಷಷ್ಟಿ ಹಾಗೂ ಒಂದು ತಿಂಗಳ ನಂತರ ಸ್ಕಂದ ಷಷ್ಟಿ ಅಥವಾ ಕಿರು ಷಷ್ಟಿ ನಡೆಯುತ್ತದೆ. ಚಂಪಾ ಷಷ್ಟಿಯು ಎರಡು ದಿನಗಳ ತನಕ ನಡೆಯುತ್ತಿದ್ದು ಕಿರು ಷಷ್ಟಿಯು ಒಂದು ದಿನ ವಿಜೃಂಭಣೆಯಿಂದ ನಡೆಯುತ್ತದೆ. ಇದಲ್ಲದೇ ವೃಷಭ ಸಂಕ್ರಾಂತಿ, ವೃಶ್ಚಿಕ ಸಂಕ್ರಾಂತಿ ಹಾಗೂ ಸಿಂಹ ಸಂಕ್ರಾಂತಿಯಂದು ವಿಶೇಷ ಪೂಜೆಗಳು ನಡೆಯುತ್ತವೆ ಈ ಸಂದರ್ಭಗಳ್ಲಿ ರಾಜ್ಯದ ನಾನಾ ಊರುಗಳಿಂದ ಇಲ್ಲಿಗೆ ಮೂಲ ಕ್ಷೇತ್ರ ಎಂದು ನಂಬಿದ ಭಕ್ತಾಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದು, ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತಿದೆ. ಆದರೆ ಕಳೆದೊಂದು ವರ್ಷದಿಂದ ದೇವಸ್ಥಾನದ ಸುತ್ತಲಿನ ಮರಗಳನ್ನು ಕಡಿದು ನೆಲ ಸಮತಟ್ಟು ಮಾಡಿದ್ದು, ಭಕ್ತಾದಿಗಳಿಗೆ ಈ ಹಿಂದೆಗಿಂತ ಹೆಚ್ಚು ಅನುಕೂಲ ಕಲ್ಪಿಸುವ ಪ್ರಯತ್ನ ನಡೆಸಲಾಗಿದೆ.
ಚಂಪಾ ಷಷ್ಟಿ :ನವೆಂಬರ್ 27 ರಿಂದ ಎರಡು ದಿನಗಳ ಕಾಲ ಸುಬ್ರಹ್ಮಣ್ಯ ದೇವಸ್ಥಾನದ ರೀತಿಯಲ್ಲಿಯೇ ಚಂಪಾ ಷಷ್ಟಿ ಉತ್ಸವ ನಡೆಯುತ್ತದೆ. ರಾಜ್ಯ ಬೇರೆ ಬೇರೆ ಊರುಗಳಿಂದ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಸಂದರ್ಭದಲ್ಲಿ ಮಹಾ ಪೂಜೆ, ಪಂಚಾಮೃತ, ಮುಡಿ ಪ್ರದಕ್ಷಿಣೆ, ಶುದ್ಧ ಕಲಶ, ಈಶ್ವರನಿಗೆ ರುದ್ರಾಭಿಶೇಕ, ಉರುಳು ಸೇವೆ, ತುಲಾಭಾರ, ಆಶ್ಲೇಷ ಬಲಿ, ನಾಗಮಂಡಲ, ಹೂ-ಕಾಯಿ ಅರ್ಪಣೆ, ನಾಗಸಂಸ್ಕಾರ ಮುಂತಾದ ಸೇವೆಗಳು ನಡೆಯಲಿವೆ.

ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆ ತರಲಾಗಿದೆ. ಈ ಬಾರಿಯ ಚಂಪಾಷಷ್ಟಿಯಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಗೆ ಹಾಗೂ ಸ್ವಯಂ ಸೇವಕರಿಗೆ ಪ್ರತ್ಯೇಕ ಊಟದ, ಉಪಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

– ಪ್ರೊ. ಶಂಕರ ರಾವ್ ಕಾಳಾವರ, ಅಧ್ಯಕ್ಷರು, ಉತ್ಸವ ಸಮಿತಿ.

Write A Comment