ಮಂಗಳೂರು,ನ.17 : ಕೆಥೋಲಿಕ್ ಕ್ರೈಸ್ತರ ವ್ಯಾಪಾರ ಮತ್ತು ಉದ್ದಿಮೆದಾರರ ಸಂಸ್ಥೆ ‘ರಚನಾ’ ಇದರ 12ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಹಾಲ್‌ನಲ್ಲಿ ರವಿವಾರ ಸಂಜೆ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಐವರು ಗಣ್ಯರಿಗೆ ರಚನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪೆರಾರ ಗಂಜಿಮಠದ ಗ್ಯಾಬ್ರಿಯೆಲ್ ಸ್ಟ್ಯಾನಿ ವೇಗಸ್ ಅವರಿಗೆ ಅತ್ಯುತ್ತಮ ಕೃಷಿಕ, ಮುಂಬೈನ ಶಿಕ್ಷಣ ತಜ್ಞೆ ಡಾ.ಜಿನೆಟ್ ಪಿಂಟೊ ಅವರಿಗೆ ವರ್ಷದ ಮಹಿಳೆ, ಮುಂಬೈನ ಉದ್ಯಮಿ ರಫಾಯೆಲ್ ಸಿಕ್ವೇರಾ ಅವರಿಗೆ ಅತ್ಯುತ್ತಮ ಉದ್ಯಮಿ, ಡಾ.ಅನಿಲ್ ಕೀತ್ ಡಿಕ್ರೂಜ್ ಅವರಿಗೆ ರಚನಾ ವೃತ್ತಿಪರ, ಒಮಾನ್‌ನ ಲಿಗೊರಿ ಡಿಮೆಲ್ಲೊ ಅವರಿಗೆ ರಚನಾ ಅನಿವಾಸಿ ಉದ್ಯಮಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿ ವಿ.ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಕರಾವಳಿ ಭಾಗದಲ್ಲಿರುವ ಕೆಥೊಲಿಕ್ ಉದ್ಯಮಿಗಳು ಎಲ್ಲರು ಒಟ್ಟು ಸೇರಿಕೊಂಡು, ತಾಯ್ನೆಲದಲ್ಲೇ ಉದ್ಯಮ ಕೇಂದ್ರಗಳನ್ನು ಸ್ಥಾಪಿಸಿದರೆ, ಸಮಾಜದ ಸಾವಿರಾರು ಜನರಿಗೆ ಉಪಯೋಗವಾಗಬಹುದು ಹಾಗೂ ಸಮಾಜವು ಇನ್ನಷ್ಟು ಬಲಿಷ್ಠಗೊಳ್ಳಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೋ ಅವರು, ಕೆಥೊಲಿಕ್ ಸಮುದಾಯದ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ತೊಡಗಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ರಚನಾ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕೆಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು ಹಾಗೂ ಮಹಿಳೆಯರು ಹಾಗೂ ಅನಿವಾಸಿ ಭಾರತೀಯರನ್ನು ಗುರುತಿಸಿ ಹುರಿದುಂಬಿಸುವ ಸಲುವಾಗಿ ರಚನಾ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡುವುದು ಅತ್ಯಂತ ಪೂರಕ ಎಂದರು. ಉದ್ಯಮಿ ಐವನ್ ಫೆರ್ನಾಂಡೀಸ್ ಮುಖ್ಯ ಅತಿಥಿಯಾಗಿದ್ದರು. ರಚನಾ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಲೋಬೋ ಉಪಸ್ಥಿತರಿದ್ದರು.
ರಚನಾ ಉಪಾಧ್ಯಕ್ಷ ಹಾಗೂ ರಚನಾ ಪ್ರಶಸ್ತಿ ಸಮಿತಿ ಸಂಚಾಲಕ ಸ್ಟ್ಯಾನಿ ಅಲ್ವಾರಿಸ್ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರಸ್ತಾವಿಕ ಮಾತನಾಡಿದರು. ರಚನಾ ಕಾರ್ಯದರ್ಶಿ ಅನಿಲ್ ಲೋಬೊ ಉಪಸ್ಥಿತರಿದ್ದರು. ರಚನಾ ಅಧ್ಯಕ್ಷೆ ಜೋನ್ ಬಿ. ಮೊಂತೇರೊ ಸ್ವಾಗತಿಸಿದರು. ಆಲ್ವಿನ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.