ಕನ್ನಡ ವಾರ್ತೆಗಳು

ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ | ಯೆನೆಪೊಯ ಸ್ಕೂಲ್‌ ವತಿಯಿಂದ ‘ಬಚ್‌ಪನ್’ ಕಾರ್ಯಕ್ರಮ

Pinterest LinkedIn Tumblr

chile_abusee_bacpan_photo

ಮಂಗಳೂರು, ನ. 17 : ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪ್ರತಿ ಮನೆಯಲ್ಲೂ ಮಕ್ಕಳ ಹೆತ್ತವರು ಎಚ್ಚರ ವಹಿಸಬೇಕು. ಪ್ರತಿಮನೆಯಲ್ಲೂ ಸೆನ್ಸಾರ್ ಮಂಡಳಿ ಯಂತಹ ವ್ಯವಸ್ಥೆ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಅಗತ್ಯ ಎಂದು ಮಕ್ಕಳ ತಜ್ಞೆ ಡಾ.ಎಲಿಝಬೆತ್ ಡೇನಿಯಲ್ ತಿಳಿಸಿದರು. ಅವರು ಫೋರಂ ಫಿಝಾ ಮಾಲ್ ಮತ್ತು ಯೆನೆಪೊಯ ಸ್ಕೂಲ್ ಸಹಯೋಗದೊಂದಿಗೆ ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ‘ಬಚ್‌ಪನ್’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಪ್ರಸಕ್ತ ನಮ್ಮ ಸುತ್ತಮುತ್ತ ಎಳೆಯ ಮಕ್ಕಳ ಮೇಲೆ ಅವರ ಕುಟುಂಬದ ಸದಸ್ಯರಿಂದ, ಪರಿಚಿತರಿಂದಲೇ ದೌರ್ಜನ್ಯ ನಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಬಾಲ್ಯದ ರಕ್ಷಣೆಯೊಂದಿಗೆ ಅವರೊಂದಿಗೆ ವರ್ತಿಸುವ ವ್ಯಕ್ತಿಗಳು ಎಲ್ಲಿ ಸ್ಪರ್ಶಿಸುತ್ತಾರೆ, ಯಾವ ರೀತಿಯ ಸ್ಪರ್ಶ ಸರಿಯಲ್ಲ ಎನ್ನುವ ಬಗ್ಗೆ ಮಕ್ಕಳಿಗೂ ಹೇಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಲಿಝಬೆತ್ ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಿಸಿ, ಮಕ್ಕಳನ್ನು ರಕ್ಷಿಸಿ, ಅವರ ಕನಸುಗಳಿಗೆ ಹಾನಿಮಾಡಬೇಡಿ, ಮಕ್ಕಳು ಆಟವಾಡುತ್ತಾ, ಕನಸು ಕಾಣುತ್ತಾ ಹೂವಿನಂತೆ ಅರಳುತ್ತಾ ಬೆಳೆಯುತ್ತಾ ಇರುವವರು ಅವರ ಬಾಲ್ಯವನ್ನು ರಕ್ಷಿಸಿ… ಎಂದು ಯೆನೆಪೊಯ ಶಾಲೆಯ ಪುಟಾಣಿಗಳು ಹಾಡಿ ಕುಣಿದು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧವಾದ ಜಾಗೃತಿ ಸಂದೇಶಗಳನ್ನು ಸಾರ್ವಜನಿಕರಿಗೆ ತಿಳಿಸಿದರು.

ಸಮಾರಂಭದಲ್ಲಿ ಯೆನೆಪೊಯ ಶಾಲೆಯ ಪೋಷಕರ ಪರವಾಗಿ ಡಾ.ರೋಹನ್ ಮೆಂಡೋನ್ಸ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಈ ರೀತಿಯ ಕಾರ್ಯಕ್ರಮ ಸಂಯೋಜಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿರುವುದು ಸೂಕ್ತ ಎಂದರು. ಯೆನೆಪೊಯ ಶಾಲೆಯ ಮುಖ್ಯ ಶಿಕ್ಷಕಿ ರೇಶ್ಮಾ ನಾಯಕ್ ಸ್ವಾಗತಿಸಿದರು. ಫೋರಂ ಫಿಝಾ ಮಾಲ್‌ನ ವ್ಯವಸ್ಥಾಪಕ ನಿಖಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment