ಕನ್ನಡ ವಾರ್ತೆಗಳು

ನ. 22-23: ಮಂಗಳೂರಿನಲ್ಲಿ ರಾಜ್ಯ ಮಟ್ಟದ ಆಯುಷ್ ವೈದ್ಯರ ಸಮಾವೇಶ |”ಆಯುಷ್ ಉತ್ಸವ”: ಸಚಿವ ಖಾದರ್

Pinterest LinkedIn Tumblr

Aush_utsava_Press

ಮಂಗಳೂರು, ನ.17: ರಾಜ್ಯ ಮಟ್ಟದ ಆಯುಷ್ ವೈದ್ಯರ ಸಮಾವೇಶ ನ.22 ಮತ್ತು 23ರಂದು ನಗರದ ನೆಹರೂ ಮೈದಾನದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಮಾವೇಶದಲ್ಲಿ ಆಯುಷ್ ಘಟಕಗಳಾದ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಹಾಗೂ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ವಿಭಾಗಗಳ ವೈದ್ಯರು ಭಾಗವಹಿಸಲಿದ್ದಾರೆ.

ಗ್ರಾಮೀಣ ಸೇವೆಯಲ್ಲಿ ಆಯುಷ್ ಮುಂಚೂಣಿಯತ್ತ ಎಂಬ ಧ್ಯೇಯ ವಾಕ್ಯದಡಿ ಆಯುಷ್ ವೈದ್ಯರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಕರ್ನಾಟಕ ಆಯುರ್ವೇದ ಯುನಾನಿ ಮಂಡಳಿ, ಆಯುಷ್ ಇಲಾಖೆ, ಆಯುಷ್‌ನ ವಿವಿಧ ಸಂಘಟನೆಗಳು, ಎಎಫ್‌ಐ, ನೀಮಾ, ಆಯುಷ್ ಫಾರ್ಮಸ್ಯೂಟಿಕಲ್ ಅಸೋಸಿಯೇಶನ್, ಆಯುಷ್ ಪ್ರಿನ್ಸಿಪಲ್ಸ್ ಅಸೋಸಿಯೇಶನ್ಸ್ ಜಂಟಿ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಪೂರ್ವಸಿದ್ಧತೆಗಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆಯುಷ್ ವಿಭಾಗದಲ್ಲಿ ಆಯುಷ್ ಉತ್ಸವ 2014 ಕಚೇರಿ ತೆರೆಯಲಾಗಿದೆ ಎಂದು ಅವರು ಹೇಳಿದರು.

ಆಯುರ್ವೇದಿಕ್ ಮತ್ತು ಯುನಾನಿ ಪ್ರಾಕ್ಟೀಸ್ ಬೋರ್ಡ್‌ನ ಸತ್ಯಾನಂದ ಮೂರ್ತಿ ಮಾತನಾಡಿ, ಗ್ರಾಮೀಣ ಆರೋಗ್ಯದಲ್ಲಿರುವ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಬೆಳಕು ಬೀರಲಿದೆ ಎಂದರು.

ರಾಜ್ಯದಲ್ಲಿ ಒಟ್ಟು 38,000 ಆಯುರ್ವೇದಿಕ್, 12,000 ಹೋಮಿಯೋಪತಿ ಹಾಗೂ 1,05,000 ಅಲೋಪತಿ ವೈದ್ಯರು ನೋಂದಾವಣೆಗೊಂಡಿದ್ದರೂ, ರಾಜ್ಯದಲ್ಲಿ ಸೇವೆ ನೀಡುತ್ತಿರುವವರ ಸಂಖ್ಯೆ ಶೇ.40ರಷ್ಟು ಮಾತ್ರ. ಇದರಲ್ಲೂ ಶೇ.90ರಷ್ಟು ವೈದ್ಯರೂ ನಗರ ಪ್ರದೇಶಗಳಲ್ಲೇ ಸೇವೆ ನೀಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸೇವೆಯನ್ನು ಹಂಚುವ ಅಗತ್ಯವಿದೆ. ಈ ಬಗ್ಗೆ ಸಚಿವರನ್ನು ಮನವಿ ಮಾಡುತ್ತಿರುವುದಾಗಿ ಹೇಳಿದರು.

Write A Comment