ರಾಷ್ಟ್ರೀಯ

ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಅಕ್ಟೋಬರ್ 7ರವರೆಗೂ ಎನ್‌ಸಿಬಿ ಕಸ್ಟಡಿಗೆ ಆರ್ಯನ್ ಖಾನ್

Pinterest LinkedIn Tumblr

ಮುಂಬೈ: ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನ ಮತ್ತೆ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಇಂದು ಮುಂಬೈನ ಕಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಅಕ್ಟೋಬರ್ 7ರವರೆಗೂ ಆರ್ಯನ್ ಖಾನ್‌ರನ್ನು ಎನ್‌ಸಿಬಿ ಕಸ್ಟಡಿಗೆ ಕೊಟ್ಟಿದೆ. ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮೂನ್‌ಮೂನ್ ಎನ್ನುವರನ್ನು ಎನ್‌ಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ಶನಿವಾರ (ಅಕ್ಟೋಬರ್ 2) ರಾತ್ರಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಐಷಾರಾಮಿ ಹಡಗಿನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದವು.

ಆರ್ಯನ್ ಖಾನ್‌ ಸೇರಿದಂತೆ 8ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಎನ್‌ಸಿಬಿ ಹಾಜರುಪಡಿಸಿತ್ತು. ಅಕ್ಟೋಬರ್ 3 ರಂದು ಒಂದು ದಿನದ ಮಟ್ಟಿಗೆ ಆರ್ಯನ್ ಖಾನ್‌ರನ್ನು ಎನ್‌ಸಿಬಿ ವಶಕ್ಕೆ ಕೋರ್ಟ್ ನೀಡಿತ್ತು. ಇವತ್ತು ಆ ಅವಧಿ ಮುಕ್ತಾಯವಾಗುತ್ತಿತ್ತು. ಹೀಗಾಗಿ ಇಂದು ಪುನಃ ನ್ಯಾಯಾಧೀಶರ ಮುಂದೆ ಆರ್ಯನ್ ಖಾನ್‌ ಹಾಗೂ ಇತರೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಮುಂಬೈನ ಕಿಲ್ಲಾ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಆರ್ಯನ್ ಖಾನ್ ತಾಯಿ ಗೌರಿ ಖಾನ್ ಹಾಜರಿದ್ದರು.

Comments are closed.