ಮುಂಬೈ: ನಟ, ಬಿಗ್ ಬಾಸ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ(40) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು ಈ ಬಗ್ಗೆ ಕೂಪರ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಅವರಿಗೆ ಇಂದು (ಗುರುವಾರ) ಬೆಳಗ್ಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಸಿದ್ಧಾರ್ಥ್ ಬಿಗ್ ಬಾಸ್ 13ರ ವಿನ್ನರ್ ಆಗಿದ್ದು, ಹಂಪ್ಟಿ ಶರ್ಮಾ ಕೆ ದುಲ್ಹನಿಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್ತಾ ಕಪೂರ್ ಅವರ ಜನಪ್ರಿಯ ಶೋ ಬ್ರೋಕನ್ ಬಟ್ ಬ್ಯೂಟಿಫುಲ್ 3 ನಲ್ಲಿ ಕೊನೆಯದಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು ಇದರಲ್ಲಿ ಅಗಸ್ತ್ಯ ಪಾತ್ರವನ್ನು ನಿರ್ವಹಿಸಿದ್ದರು.
ಅಶೋಕ್ ಶುಕ್ಲಾ, ರೀಟಾ ಶುಕ್ಲಾ ದಂಪತಿ ಪುತ್ರನಾಗಿ 12 ಡಿಸೆಂಬರ್ 1980ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸಿದ್ಧಾರ್ಥ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಫೋರ್ಟ್ನ ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್ನಲ್ಲಿ ಮುಗಿಸಿದ್ದರು. ರಚನಾ ಸಂಸದ್ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ ಸಂಸ್ಥೆಯಲ್ಲಿ ಇಂಟೀರಿಯರ್ ಡಿಸೈನ್ನಲ್ಲಿ ಪದವಿ ಪಡೆದಿದ್ದಾರೆ.
ಸಿದ್ಧಾರ್ಥ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೃತ ಸುದ್ದಿ ತಿಳಿದ ಅಭಿಮಾನಿಗಳಿಗೆ ಆಘಾತವಾಗಿದೆ.
Comments are closed.