ಅಂತರಾಷ್ಟ್ರೀಯ

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ನಿಧನ

Pinterest LinkedIn Tumblr

ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ 91 ವರ್ಷ ಪ್ರಾಯದ ಸಯ್ಯದ್ ಅಲಿ ಶಾ ಗಿಲಾನಿ ಕಳೆದ ರಾತ್ರಿ (ಬುಧವಾರ) ಶ್ರೀನಗರದ ತನ್ನ ನಿವಾಸದಲ್ಲಿ ನಿಧನ ಹೊಂದಿದರು. ಕಳೆದ 20 ವರ್ಷಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಗಿಲಾನಿ ಬುಧವಾರ ರಾತ್ರಿ 10.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ತೆಹ್ರಿಕ್-ಎ-ಹುರಿಯತ್ ಎಂಬ ಕಟ್ಟರ್ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕ ಸಯ್ಯದ್ ಅಲಿ ಶಾ ಗಿಲಾನಿ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೈಯದ್ ಗಿಲಾನಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೋರಾಟ ನಡೆಸಿದ್ದರು.

ನೂರಾರು ಕೋಟಿ ರೂ. ಆಸ್ತಿಗಳ ಒಡೆಯ ಸಯ್ಯದ್ ಅಲಿ ಶಾ ಗಿಲಾನಿ ಹಾಗೂ ಮಕ್ಕಳಾದ ನಾಸೀಮ್, ನಯೀಮ್, ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್ಐಎ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಕ್ರಮ ಆಸ್ತಿ ಗಳಿಕೆ, ಪಾಕಿಸ್ತಾನದಿಂದ ಹಣ ಪಡೆದು ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆ ಮುಂತಾದ ಆರೋಪಗಳ ಕುರಿತಾದ ತನಿಖೆ ಜಾರಿಯಲ್ಲಿದೆ.

ಕಾಶ್ಮೀರದ ಉತ್ತರ ಭಾಗದಲ್ಲಿರುವ ಬಾರಮುಲ್ಲಾದ ಸೋಪೋರ್ ಪಟ್ಟಣದಲ್ಲಿ ಜನಿಸಿದ ಸಯದ್ ಗಿಲಾನಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಗಿಲಾನಿ ಅವರ ನಿಧನಕ್ಕೆ ಹಲವು ಕಾಶ್ಮೀರ ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.