ಕರಾವಳಿ

ಉರ್ವಾ ಹೊಸ ಮಾರ್ಕೆಟ್‌ನ ಸಮಸ್ಯೆಗಳನ್ನು ನಿವಾರಿಸಿ ಶೀಘ್ರದಲ್ಲೇ ವ್ಯಾಪಾರಿಗಳಿಗೆ ಅವಕಾಶ : ರವಿಶಂಕರ್ ಮಿಜಾರು

Pinterest LinkedIn Tumblr

ಮಂಗಳೂರು : ಮಂಗಳೂರಿನ ಉರ್ವಾದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ಮಾರುಕಟ್ಟೆ ಕಟ್ಟಡದಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಶೀಘ್ರದಲ್ಲೇ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಮೂಡ ಅಧ್ಯಕ್ಷ ರವಿಶಂಕರ್ ಮಿಜಾರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರು ತಾಲೂಕಿನ ಬೋಳೂರು ಗ್ರಾಮದ ಉರ್ವಾ ಮಾರ್ಕೆಟ್ ಬಳಿ 68 ಸೆಂಟ್ಸ್ ಜಮೀನಲ್ಲಿ ಮಾರುಕಟ್ಟೆ ಸಹಿತ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾಮಗಾರಿ 2019 ರಲ್ಲಿ ಪೂರ್ಣಗೊಂಡಿರುತ್ತದೆ.

ಅಂಗಡಿಕೋಣೆ/ಕಛೇರಿ ಸ್ಥಳಾವಕಾಶಗಳ ಟೆಂಡರು/ಏಲಂನ್ನು ದಿನಾಂಕ:19-04-2021ರಂದು ಕರೆಯಲಾಗಿ, ಕೆಳ ಮಹಡಿಯಲ್ಲಿನ 5 ಅಂಗಡಿಕೋಣೆಗಳು, ನೆಲ ಮಹಡಿಯಲ್ಲಿ 3 ಅಂಗಡಿಕೋಣೆಗಳು, 2ನೇ ಮಹಡಿಯಲ್ಲಿನ 4ಕಛೇರಿ ಸ್ಥಳಾವಕಾಶಗಳು, ಹಾಗೂ 3ನೇ ಮಹಡಿಯಲ್ಲಿನ 2 ಕಛೇರಿ ಸ್ಥಳಾವಕಾಶಗಳು ಒಟ್ಟು 14 ಅಂಗಡಿಕೋಣೆ /ಕಛೇರಿ ಸ್ಥಳಾವಕಾಶಗಳಿಗೆ ಬಾಡಿಗೆ ಆಧಾರದಲ್ಲಿ ಪಡೆಯುವ ಬಗ್ಗೆ ಕರಾರು ಆಗಿದ್ದು ಉಳಿದ ಅಂಗಡಿ ಕೋಣೆಗಳಿಗೆ ಟೆಂಡರು ಯಾ ಏಲಂ ಕರೆದಿದ್ದು,16-07-2021 ಟೆಂಡರು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಮುಡಾದಿಂದ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಈ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಿದ್ದು, ಕಟ್ಟಡದಲ್ಲಿ ಗಾಳಿ, ಬೆಳಕು ಸೇರಿದಂತೆ ಕೆಲವೊಂದು ಬದಲಾವಣೆ ಹಾಗೂ ಕೋವಿಡ್ ಕಾರಣದಿಂದ ವ್ಯಾಪಾರಿಗಳ ಸ್ಥಳಾಂತರ ಸಾಧ್ಯವಾಗಿಲ್ಲ. ಮೂರು ಬಾರಿ ಟೆಂಡರ್ ಕರೆದರೂ ಸ್ಥಳೀಯ ವ್ಯಾಪಾರಿಗಳಿಂದ ಆಸಕ್ತಿ ವ್ಯಕ್ತವಾಗದ ಕಾರಣ ಮತ್ತೆ ನಾಲ್ಕನೆ ಬಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ಈಗಾಗಲೇ ನಿರ್ಣಯಿಸಿದ ಪ್ರಕಾರ ನಗರಾಭಿವೃಧ್ಧಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಜೊತೆಗೂಡಿ ಶಾಸಕರಾದ ವೇದವ್ಯಾಸ ಕಾಮತ್ ರವರ ಮುತುವರ್ಜಿಯಲ್ಲಿ ಉರ್ವಮಾರ್ಕೆಟ್‌ನ ಪ್ರಸ್ತುತ ವ್ಯಾಪಾರಸ್ಥರನ್ನು ಹೊಸಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೆಲಸ ಕಾರ್ಯ ಬೇಗನೆ ನೇರವೇರಿಸಲಾಗುವುದು ಎಂದು ರವಿಶಂಕರ್ ಮಿಜಾರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೂಡ ಆಯುಕ್ತರಾದ ಶ್ರೀ ದಿನೇಶ್ ಕುಮಾರ್, ಟಿಪಿಓ ಶ್ರೀ ರಘು, ಜಿಲ್ಲಾ ವಾರ್ತಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.